ಡಿಜಿಟಲ್ ಹೆದ್ದಾರಿಯನ್ನೇ ಕತ್ತರಿಸುತ್ತೇವೆ – ವಿಶ್ವಕ್ಕೆ ಇರಾನ್‌ ಬೆದರಿಕೆ | ಭಾರತಕ್ಕೆ ಏನು?

3 Min Read

ಟೆಹ್ರಾನ್‌/ನವದೆಹಲಿ: ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಮಧ್ಯಪ್ರಾಚ್ಯದ ದೇಶಗಳ ಮೇಲೆ ಡ್ರೋನ್‌, ಕ್ಷಿಪಣಿ ದಾಳಿ ನಡೆಸಿದ್ದ ಇರಾನ್‌ ಈಗ ಸಮುದ್ರದೊಳಗಿನ ಡೇಟಾ ಕೇಬಲ್‌ಗಳನ್ನು (Undersea Data Cables) ಕತ್ತರಿಸುವ ಬೆದರಿಕೆ ಹಾಕಿದೆ.

- Advertisement -

ಹೌದು. ಹಾರ್ಮುಜ್‌ ಜಲಸಂಧಿ(Strait of Hormuz) ಬಂದ್‌ ಮಾಡಿ ಇಡೀ ವಿಶ್ವಕ್ಕೆ ತೈಲ, ಗ್ಯಾಸ್‌ ಸಮಸ್ಯೆಯನ್ನು ಸೃಷ್ಟಿಸಿರುವ ಇರಾನ್‌ ಈಗ ಜಾಗತಿಕ ಇಂಟರ್ನೆಟ್(Internet) ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿದೆ.

- Advertisement -

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (IRGC) ಮುಖವಾಣಿ ಎಂದು ಪರಿಗಣಿಸಲಾದ ತಸ್ನಿಮ್ ನ್ಯೂಸ್ ಏಜೆನ್ಸಿ ಸವಿಸ್ತಾರವಾದ ವರದಿಯನ್ನು ಪ್ರಕಟಿಸಿದೆ. ವರದಿಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಅಂಡರ್-ಸೀ ಇಂಟರ್ನೆಟ್ ಕೇಬಲ್‌ಗಳು ಮತ್ತು ಕೊಲ್ಲಿ ದೇಶಗಳಲ್ಲಿರುವ ಡೇಟಾ ಸೆಂಟರ್‌ಗಳ (Data Center) ನಕ್ಷೆಯನ್ನು ತೋರಿಸಿದೆ.

- Advertisement -

ಈ ಮೂಲಸೌಕರ್ಯಗಳನ್ನು ನಾವು ಸುಲಭವಾಗಿ ಹಾನಿ ಮಾಡಬಹುದು ಎಂಬುದನ್ನು ಈ ವರದಿ ಎತ್ತಿ ತೋರಿಸಿದೆ. ಈ ವರದಿ ಪ್ರಕಟವಾದ ಬೆನ್ನಲ್ಲೇ ಇರಾನ್ (Iran) ವಿಶ್ವಕ್ಕೆ ನೀಡಿದ ಕಾರ್ಯತಂತ್ರದ ಎಚ್ಚರಿಕೆ (Strategic Warning) ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ. ವರದಿಯು ಹಾರ್ಮುಜ್ ಜಲಸಂಧಿಯನ್ನು ಕೇವಲ ತೈಲ ಮಾರ್ಗವಾಗಿ ಮಾತ್ರವಲ್ಲದೆ ಜಾಗತಿಕ ಡಿಜಿಟಲ್ ಹೆದ್ದಾರಿ(Digital Highway) ಎಂದು ಬಣ್ಣಿಸಿದೆ.

- Advertisement -

ಈ ಜಲಸಂಧಿಯ ಮೂಲಕ ಕನಿಷ್ಠ 17 ಪ್ರಮುಖ ಅಂಡರ್-ಸೀ ಕೇಬಲ್ ವ್ಯವಸ್ಥೆಗಳು ಹಾದುಹೋಗುತ್ತವೆ. ಒಂದು ವೇಳೆ ಇವುಗಳಿಗೆ ಹಾನಿಯಾದರೆ ಯುಎಇ, ಕತಾರ್, ಬಹ್ರೇನ್, ಕುವೈತ್ ಮತ್ತು ಸೌದಿ ಅರೇಬಿಯಾದಂತಹ ಕೊಲ್ಲಿ ದೇಶಗಳ ಡಿಜಿಟಲ್ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಲಿದೆ. ಇದನ್ನೂ ಓದಿ: ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

ಭಾರತವು 17 ಅಂಡರ್-ಸೀ ಕೇಬಲ್‌ಗಳ ಮೇಲೆ ಅವಲಂಬಿತವಾಗಿದೆ. ಭಾರತದ ಸುಮಾರು 60% ಡೇಟಾ ದಟ್ಟಣೆಯು ಹಾರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರದ ಮೂಲಕವೇ ಹಾದುಹೋಗುತ್ತದೆ. ಇಲ್ಲಿನ ಯಾವುದೇ ಅಡೆತಡೆಗಳು ಭಾರತದ ಇಂಟರ್ನೆಟ್ ವೇಗ ಮತ್ತು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ.

ಪ್ರಮುಖ ಕೇಬಲ್ ವ್ಯವಸ್ಥೆಗಳು:
AAE-1: ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಅನ್ನು ಸಂಪರ್ಕಿಸುತ್ತದೆ.
EPEG (Europe-Persia Express Gateway): ಯುರೋಪ್ ಅನ್ನು ಪರ್ಷಿಯನ್ ಕೊಲ್ಲಿಯ ಮೂಲಕ ಭಾರತಕ್ಕೆ ಸಂಪರ್ಕಿಸುವ ಪ್ರಮುಖ ಕೇಬಲ್.
SMW5 (SeaMeWe-5): ಸಿಂಗಾಪುರದಿಂದ ಫ್ರಾನ್ಸ್‌ಗೆ ಸಂಪರ್ಕ ಕಲ್ಪಿಸುವ ದೀರ್ಘವಾದ ಕೇಬಲ್ ವ್ಯವಸ್ಥೆಗಳಲ್ಲಿ ಒಂದಾಗಿದೆ.
OMRAN: ಓಮನ್ ಮತ್ತು ಇರಾನ್ ನಡುವಿನ ಸಂಪರ್ಕ ಕಲ್ಪಿಸುತ್ತದೆ.

ಭಾರತದ ಮೇಲೆ ಪರಿಣಾಮ ಏನು?
ಭಾರತದ ಒಟ್ಟು ಇಂಟರ್ನೆಟ್ ದಟ್ಟಣೆಯ ಸುಮಾರು 60% ರಷ್ಟು ಮುಂಬೈನಿಂದ ಪಶ್ಚಿಮಕ್ಕೆ (ಯುರೋಪ್ ಮತ್ತು ಅಮೆರಿಕದತ್ತ) ಈ ಕೊಲ್ಲಿ ಪ್ರದೇಶ ಮತ್ತು ಕೆಂಪು ಸಮುದ್ರದ ಮೂಲಕವೇ ಸಾಗುತ್ತದೆ.

ಹಾರ್ಮುಜ್ ಅಥವಾ ಕೆಂಪು ಸಮುದ್ರದ ಮಾರ್ಗಗಳು ಕಡಿತಗೊಂಡರೆ ಡೇಟಾವನ್ನು ಸಿಂಗಾಪುರ ಮಾರ್ಗದ ಮೂಲಕ ದೀರ್ಘ ಹಾದಿಯಲ್ಲಿ ಕಳುಹಿಸಬೇಕಾಗುತ್ತದೆ. ಇದು ಇಂಟರ್ನೆಟ್ ವೇಗವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ವಿಳಂಬಕ್ಕೆ ಕಾರಣವಾಗುತ್ತದೆ.

ಅಂತರರಾಷ್ಟ್ರೀಯ ಹಣಕಾಸು ವಹಿವಾಟುಗಳು (SWIFT ಬ್ಯಾಂಕಿಂಗ್‌) ಈ ಕೇಬಲ್‌ಗಳ ಮೇಲೆ ಅವಲಂಬಿತವಾಗಿವೆ. ಕೇಬಲ್ ಕಡಿತದಿಂದ ಬ್ಯಾಂಕಿಂಗ್ ಸೇವೆಗಳು ಮತ್ತು ಷೇರು ಮಾರುಕಟ್ಟೆ ವಹಿವಾಟುಗಳಲ್ಲಿ ಅಡಚಣೆ ಉಂಟಾಗಬಹುದು.

ಭಾರತದ ಅನೇಕ ಐಟಿ ಕಂಪನಿಗಳು ದುಬೈ ಮತ್ತು ಬಹ್ರೇನ್‌ನಲ್ಲಿರುವ ಡೇಟಾ ಸೆಂಟರ್‌ಗಳನ್ನು ಬಳಸುತ್ತವೆ. ಈ ಕೇಬಲ್‌ಗಳಿಗೆ ಹಾನಿಯಾದರೆ ಅಮೆಜಾನ್ (AWS), ಮೈಕ್ರೋಸಾಫ್ಟ್ ಅಜುರೆ ಮತ್ತು ಗೂಗಲ್ ಕ್ಲೌಡ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

ದುರಸ್ತಿ ಕಷ್ಟ ಯಾಕೆ?

ಸಂಘರ್ಷದ ವಾತಾವರಣವಿರುವುದರಿಂದ ಕೇಬಲ್‌ಗಳು ಹಾನಿಗೊಳಗಾದರೆ ಅವುಗಳನ್ನು ಸರಿಪಡಿಸಲು ಬೇಕಾದ ವಿಶೇಷ ಹಡಗುಗಳನ್ನು ಆ ಪ್ರದೇಶಕ್ಕೆ ಕಳುಹಿಸುವುದು ಅತ್ಯಂತ ಅಪಾಯಕಾರಿ. ಇದರಿಂದಾಗಿ ಇಂಟರ್ನೆಟ್ ಸಮಸ್ಯೆಗಳು ವಾರಗಳು ಅಥವಾ ತಿಂಗಳುಗಳವರೆಗೆ ಮುಂದುವರಿಯಬಹುದು.

ಇತರೇ ಮಾರ್ಗಗಳಿರುವುದರಿಂದ ಪೂರ್ಣ ಪ್ರಮಾಣದ ಇಂಟರ್ನೆಟ್ ಸ್ಥಗಿತ ಸಾಧ್ಯತೆ ಕಡಿಮೆ ಇದ್ದರೂ ಭಾರತದಲ್ಲಿ ಅಂತರರಾಷ್ಟ್ರೀಯ ವೆಬ್‌ಸೈಟ್‌ಗಳ ಪ್ರವೇಶ ಮತ್ತು ಆನ್‌ಲೈನ್ ಸೇವೆಗಳು ನಿಧಾನವಾಗಲಿದೆ.

Share This Article