ಹೈದ್ರಾಬಾದ್‌ನಲ್ಲಿ ಸನ್‌ ರೈಸರ್ಸ್‌ ದರ್ಬಾರ್, ಶತಕ ಸಿಡಿಸಿ ಮೆರೆದಾಡಿದ ಅಭಿ – SRHಗೆ 47 ರನ್‌ಗಳ ಭರ್ಜರಿ ಜಯ

2 Min Read

ಹೈದರಾಬಾದ್‌: ಅಭಿಷೇಕ ಶರ್ಮಾ (Abhishek Sharma) ಅಬ್ಬರದ ಶತಕ, ಮಾಲಿಂಗ ಬೌಲಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡ 47 ರನ್‌ಗಳ ಭರ್ಜರಿ ಜಯಗಳಿಸಿದೆ.

5 ಎಸೆತಗಳಲ್ಲಿ 3 ವಿಕೆಟ್‌ – ಟರ್ನಿಂಗ್‌ ಕೊಟ್ಟ ಆ 2 ಓವರ್‌!
10ನೇ ಓವರ್‌ನ 3ನೇ ಎಸೆತದ ವೇಳೆಗೆ 100 ರನ್‌ಗಳ ಗಡಿ ದಾಟಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 1 ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಬಳಿಕ ಆಕ್ರಮಣಕಾರಿ ಆಟಕ್ಕಿಳಿಯುವ ನಿರೀಕ್ಷೆಯಲ್ಲಿತತ್ತು. ಆದ್ರೆ 10 ಮತ್ತು 11ನೇ ಓವರ್‌ ಪಂದ್ಯದ ಗತಿಯನ್ನೇ ಬದಲಿಸಿತು. ಬಳಿಕ ಗೆಲುವು ಹೈದರಾಬಾದ್‌ ತಂಡದತ್ತ ವಾಲಿತು. 10ನೇ ಓವರ್‌ನ 4ನೇ ಎಸೆತದಲ್ಲಿ ಶಕೀಗ್‌ ಹುಸೇನ್‌ ಕೆ.ಎಲ್‌ ರಾಹುಲ್‌ ಅವರ ವಿಕೆಟ್‌ ಪಡೆದು ಉಳಿದ 2 ಎಸೆತಗಳನ್ನ ಡಾಟ್‌ ಮಾಡಿದರು. ಇನ್ನೂ 11ನೇ ಓವರ್‌ ಬೌಲಿಂಗ್‌ ಮಾಡಿದ ಇಶಾನ್‌ ಮಾಲಿಂಗ ಮೊದಲ ಎಸೆತದಲ್ಲಿ ನಿತೀಶ್‌ ರಾಣಾ ಹಾಗೂ 2ನೇ ಎಸೆತದಲ್ಲಿ ಡೇವಿಡ್‌ ಮಿಲ್ಲರ್‌ ಅವರ ವಿಕೆಟ್‌ಗಳನ್ನು ಕಿತ್ತು ಪೆವಿಲಿಯನ್‌ ದಾರಿ ತೋರಿದರು. ಅಲ್ಲದೇ ಆ ಓವರ್‌ನಲ್ಲಿ ಕೇವಲ 2 ರನ್‌ ಬಿಟ್ಟುಕೊಟ್ಟರು. ಇಲ್ಲಿಂದೀಚೆಗೆ ಗೆಲುವು ಹೈದರಾಬಾದ್‌ ತಂಡದತ್ತ ವಾಲಿತು. ಡೇವಿಡ್‌ ಮಿಲ್ಲರ್‌ ಕ್ರೀಸ್‌ನಲ್ಲಿ ಇದ್ದಿದ್ದರೆ, ಫಲಿತಾಂಶ ಬದಲಾಗುವ ನಿರೀಕ್ಷೆಯಿತ್ತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಭರ್ಜರಿ 242 ರನ್‌ಗಳ ಗಳಿಸಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ 9 ವಿಕೆಟ್‌ ನಷ್ಟಕ್ಕೆ 195 ರನ್‌ಗಳಿಸಿ ಸೋಲನುಭವಿಸಿತು.

ಚೇಸಿಂಗ್‌ ಶುರು ಮಾಡಿದ ನಿಸ್ಸಾಂಕಾ ಹಾಗೂ ರಾಹುಲ್‌ ಉತ್ತಮ ಆರಂಭವನ್ನೇ ನೀಡಿದರು. ಆದರೆ ಎರಡನೇ ಓವರ್‌ನಲ್ಲಿಯೇ ನಿಸ್ಸಾಂಕಾ ಔಟ್‌ ಆದರು. ಅಲ್ಲಿಂದ ನಿತೀಶ್‌ ರಾಣಾ 30 ಎಸೆತಗಳಲ್ಲಿ 57 ರನ್‌, ಕೆಎಲ್‌ ರಾಹುಲ್‌ 23 ಎಸೆತಕ್ಕೆ 37 ರನ್‌, ಸ್ಟಬ್ಸ್‌ 16 ಎಸೆತಕ್ಕೆ 27 ರನ್‌, ಅಶುತೋಶ್‌ ಶರ್ಮಾ 10 ಎಸೆತಕ್ಕೆ 14 ರನ್‌ ರನ್‌ಗಳಿಸಿದರು. ಇನ್ನುಳಿದಂತೆ ಡಿಸಿ ಪರ ಬೌಲಿಂಗ್‌ ಮಾಡಿದ ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದುಕೊಂಡರು.

ಅಭಿಷೇಕ್‌ ಅಬ್ಬರಕ್ಕೆ ಡೆಲ್ಲಿ ಶೇಕ್‌:
ಕಣ್ಣಕ್ಕಿಳಿದ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಭರ್ಜರಿಯಾಗಿ ಆರಂಭ ನೀಡಿದ್ರು. ಸಿಕ್ಸ್‌, ಬೌಂಡರಿಗಳ ಸುರಿಮಳೆ ಸುರಿಸಿ 53 ಎಸೆತಕ್ಕೆ 97 ರನ್‌ಗಳ ಜೊತೆಯಾಟ ಆಡಿದರು. ಎಂಟನೇ ಓವರ್‌ನ ಐದನೇ ಬಾಲ್‌ನಲ್ಲಿ ಟ್ರ್ಯಾವಿಸ್‌ ಬ್ಯಾಟ್‌ ಬೀಸಿದ ಹೊಡೆತಕ್ಕೆ ಬಾಲ್‌ ರಿಜ್ವಿ ಕೈಸೇರಿತು. ಕೊನೆಯವರೆಗೂ ಅಭಿಷೇಕ್‌ ಶರ್ಮಾ ಒನ್‌ ಮ್ಯಾನ್‌ ಆರ್ಮಿಯಂತೆ ನಿಂತು 68 ಎಸೆತಕ್ಕೆ 10 ಬೌಂಡರಿ ಹಾಗೂ 10 ಸಿಕ್ಸ್‌ ಬಾರಿಸಿ ಅಬ್ಬರದ 135 ರನ್‌ಗಳಿಸಿ ಸವಾಲಿನ ಗುರಿ ನೀಡುವಲ್ಲಿ ನೆರವಾದರು. ಫೀಲ್ಡಿಂಗ್‌ನಲ್ಲಿಯೂ ಎರಡು ಕ್ಯಾಚ್‌ ಹಿಡಿಯುವ ಮೂಲಕ ವಿಕೆಟ್‌ ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟ್ರ್ಯಾವಿಸ್‌ ಹೆಡ್‌ 26 ಎಸೆತಗಳಲ್ಲಿ 37 ರನ್‌, ಹೆನ್ರ್ಚಿನ್‌ ಕ್ಲಾಸೆನ್‌ 13 ಎಸೆತಗಳಲ್ಲಿ 37 ರನ್‌ ಹಾಗೂ ಇಶಾನ್‌ ಕಿಶನ್‌ 13 ಎಸೆತಗಳಲ್ಲಿ 25 ರನ್‌ಗಳಿಸಿದರು. ಹೈದರಾಬಾದ್‌ ಪರ ಬೌಲಿಂಗ್‌ ಮಾಡಿದ ಮಾಲಿಂಗ 4 ವಿಕೆಟ್‌, ಹರ್ಷ್‌ ದುಬೆ 3 ವಿಕೆಟ್‌, ಮಧುಶಂಕ ಹಾಗೂ ಹುಸೇನ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

Share This Article