-ನ್ಯಾಯ ದೊರಕಿದೆ, ಭಾರತ ಒಗ್ಗಟ್ಟಿನಿಂದ ನಿಂತಿದೆ: ಸೇನೆಯಿಂದ ಪೋಸ್ಟ್
ನವದೆಹಲಿ: ಬೈಸರನ್ ವ್ಯಾಲಿಗೆ ಪ್ರವಾಸಕ್ಕೆಂದು ಹೋಗಿದ್ದಾಗ 26 ಜನರು ಸಾವನ್ನಪ್ಪಿದ್ದ ಭಯೋತ್ಪಾದಕ ದಾಳಿಗೆ ನಾಳೆ (ಏ.22) ಒಂದು ವರ್ಷ. ಈ ದುರಂತದ ದಿನದಂದು ಹಲವರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದು, ಭಾರತೀಯ ಸೇನೆ `ಆಪರೇಷನ್ ಸಿಂಧೂರ’ವನ್ನು (Operation Sindoor) ನೆನಪಿಸಿ, ಸಂದೇಶವೊಂದನ್ನು ನೀಡಿದೆ.
2025ರ ಏ.22 ಭಾರತಕ್ಕೆ ಕರಾಳ ದಿನ. ಪಹಲ್ಗಾಮ್ನಲ್ಲಿರುವ (Pahalgam) ಬೈಸರನ್ ವ್ಯಾಲಿಗೆ (Baisaran Valley) ಪ್ರವಾಸಕ್ಕೆಂದು ತೆರಳಿದ್ದವರ ಪೈಕಿ 26 ಜನರು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಭಾರತೀಯ ಸೇನೆ (Indian Army) ಪಾಕ್ನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು. ಇದೀಗ ಭಾರತೀಯ ಸೇನೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಹಿಂದೂಗಳ ನರಮೇಧ ನಡೆಸಿದವರ ಜೀವ ತೆಗೆದುಕೊಂಡು ನ್ಯಾಯ ದೊರಕಿಸಿಕೊಟ್ಟಿದ್ದೇವೆ. ಭಾರತ ಒಗ್ಗಟ್ಟಾಗಿದೆ ಎಂದು ಬಲವಾದ ಸಂದೇಶ ನೀಡಿದೆ. ಇದನ್ನೂ ಓದಿ: ಪಹಲ್ಗಾಮ್ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?
When boundaries of humanity are crossed, the response is decisive.
Justice is Served.
India Stands United.#SindoorAnniversary #JusticeEndures #NationFirst pic.twitter.com/rtgYu9Hg11
— ADG PI – INDIAN ARMY (@adgpi) April 21, 2026
ಮಾನವೀಯತೆ ಮಿತಿಗಳನ್ನು ಮೀರಿದಾಗ ಪ್ರತಿಕ್ರಿಯೆ ನಿರ್ಣಾಯಕವಾಗಿರುತ್ತದೆ. ಕೆಲ ಮಿತಿಗಳನ್ನು ಮೀರಿದಾಗ ದೇಶ ಒಗ್ಗಟ್ಟಾಗಿ ನಿಲ್ಲುತ್ತದೆ. ಭಯೋತ್ಪಾದನೆಯ ಹಿಂದಿರುವವರಿಗೆ ಎಚ್ಚರಿಕೆ ನೀಡಿ, ನಾಗರಿಕರಿಗೆ ಬೆನ್ನೆಲುಬಾಗಿರುತ್ತದೆ ಎಂದು ಆಪರೇಷನ್ ಸಿಂಧೂರವನ್ನು ನೆನಪಿಸಿಕೊಂಡಿದೆ.
ಒಂದು ವರ್ಷದ ಹಿಂದೆ ನಡೆದ ಘಟನೆಯಿಂದಾಗಿ ಕುಟುಂಬಗಳು ಇಂದಿಗೂ ನೋವಿನಲ್ಲಿವೆ. ಗಾಯ ಮಾಸಿದರೂ ಅದರಿಂದಾದ ನೋವು ಇಂದಿಗೂ ದುಃಖ ನೀಡುತ್ತಿದೆ. ಇದೆಲ್ಲದರ ಜೊತೆಗೆ ಕೆಲ ಕುಟುಂಬಗಳು ತಮ್ಮ ಪ್ರೀತಿಪಾತ್ರರ ನೆನಪುಗಳನ್ನು ಜೀವಂತವಾಗಿಟ್ಟುಕೊಂಡು ಜೀವನವನ್ನು ಪುನರ್ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ.
ಆ ದಿನ ಏನಾಯ್ತು?
ಅಂದು ಏ.22, ಕನ್ನಡಿಗರು ಸೇರಿದಂತೆ ಹಲವಾರು ಜನರು ಪಹಲ್ಗಾಮ್ನ ಬೈಸರನ್ ವ್ಯಾಲಿಗೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ಏಕಾಏಕಿ ಭಯೋತ್ಪಾದಕರು ದಾಳಿ ನಡೆಸಿ, ಅಲ್ಲಿದ್ದವರಿಗೆ ಕಲಿಮಾ ಬರುತ್ತದೆಯಾ ಎಂದು ಕೇಳಿ ಹಿಂದೂಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಂದ್ದಿದ್ದರು.
ಮೂವರು ಭಯೋತ್ಪಾದಕರು ಪ್ರವಾಸಿಗರನ್ನು ಒಟ್ಟುಗೂಡಿಸಿ ಪುರುಷ ಮತ್ತು ಮಹಿಳಾ ಗುಂಪುಗಳಾಗಿ ವಿಂಗಡಿಸಿದ್ದರು. ಸೇನಾ ಸಮವಸ್ತ್ರದಲ್ಲಿ ಬಂದ ಉಗ್ರರನ್ನು ನೋಡಿ ಪ್ರವಾಸಿಗರು ಇವರು ಸೈನಿಕರು ಎಂದೇ ಭಾವಿಸಿದ್ದರು. ಸುಮಾರು 20 ನಿಮಿಷ ಸ್ಥಳದಲ್ಲಿ ಇದ್ದ ಉಗ್ರರು ಹಿಂದೂಗಳನ್ನು ಸಾಲಾಗಿ ನಿಲ್ಲಿಸಿ ಹತ್ಯೆ ಮಾಡಿದ್ದರು. ಈ ವೇಳೆ ಕೆಲವರು ಓಡಿ ಹೋಗಲು ಯತ್ನಿಸಿದಾಗ ಅವರ ಮೇಲೂ ಶೂಟ್ ಮಾಡಿದ್ದರು.
ದಾಳಿಯಿಂದ ಪಾರಾಗಲು ಪ್ರವಾಸಿಗರು ಡೇರೆಗಳಲ್ಲಿ ಅಡಗಿ ಕುಳಿತಿದ್ದರು. ಈ ಡೇರೆಗೆ ಬಂದ ಉಗ್ರರು ಪುರುಷರನ್ನು ಕರೆದು ನಿನ್ನ ಧರ್ಮ ಯಾವುದು? ಕಲಿಮಾ ಹೇಳು ಎಂದು ಕೇಳಿದ್ದರು. ಕಲಿಮಾ ಹೇಳದ್ದಕ್ಕೆ ಹಾಗೂ ಪ್ರವಾಸಿಗರ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಮುಸ್ಲಿಮೇತರರೆಂದು ಗುರುತಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಒಂದು ಅಂಗವಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ದಾಳಿಯ ನಂತರ, ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿದರು. ಪಹಲ್ಗಾಮ್ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.




