ಕಾಳಸಂತೆಯಲ್ಲಿ ದುಪ್ಪಟ್ಟು ಹಣಕ್ಕೆ IPL ಟಿಕೆಟ್‌ ಸೇಲ್ – ಒಂದು ಟಿಕೆಟ್‌ಗೆ 15,000ದಿಂದ 19,000 ರೂ.; ಸಿಕ್ಕಿಬಿದ್ದ ಸಿಬ್ಬಂದಿ

1 Min Read

– ಆರ್‌ಸಿಬಿ ಮ್ಯಾಚ್‌ ವೇಳೆ ಬ್ಲಾಕ್‌ನಲ್ಲಿ 100 ಟಿಕೆಟ್‌ ಮಾರುತ್ತಿದ್ದಾಗ ಆರೋಪಿ ಲಾಕ್‌
– ವಿಚಾರಣೆ ವೇಳೆ ಕೆಎಸ್‌ಸಿಎ ಗಣೇಶ್‌ ಹೆಸರು ಬಾಯ್ಬಿಟ್ಟ ಆರೋಪಿ

ಬೆಂಗಳೂರು: ಕಾಳಸಂತೆಯಲ್ಲಿ ದುಪ್ಪಟ್ಟು ಹಣಕ್ಕೆ ಐಪಿಎಲ್‌ ಟಿಕೆಟ್‌ ಮಾರಾಟ ಮಾಡಿದ ಆರೋಪದಲ್ಲಿ ಕೆಎಸ್‌ಸಿಎ ಸದಸ್ಯ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.‌

ಸಿಸಿಬಿ ನಡೆಸಿದ ಸ್ಟಿಂಗ್‌ ಆಪರೇಷನ್‌ನಲ್ಲಿ ದುಪ್ಪಟ್ಟು ಹಣಕ್ಕೆ ಟಿಕೆಟ್‌ ಮಾರುತ್ತಿದ್ದ ಸಿಬ್ಬಂದಿ ಸಿಕ್ಕಿಬಿದ್ದಿದ್ದಾನೆ. ಬ್ಲಾಕ್‌ನಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ ಚಿನ್ನಸ್ವಾಮಿ ಸ್ಟೇಡಿಯಂನ ಲಕ್ಷ್ಮಿ ಕ್ಯಾಟರ್ಸ್ ಕ್ಯಾಪ್ಟನ್ ಚಂದ್ರಶೇಖರ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಚಂದ್ರಶೇಖರ್‌ ವಿಚಾರಣೆ ವೇಳೆ, KSCA ಸದಸ್ಯ ಗಣೇಶ್ ಹರಿಕೇಶ್ ಜೊತೆ ಸೇರಿ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿರೋದಾಗಿ ಹೇಳಿದ್ದಾನೆ. ಎರಡು ಖಾಸಗಿ ಕಂಪನಿಗಳಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದು ಚಂದ್ರಶೇಖರ್ ಮೂಲಕ ಹೆಚ್ಚಿನ ಬೆಲೆಗೆ ಗಣೇಶ್‌ ಹರಿಕೇಶ್ ಮಾರಾಟ ಮಾಡಿಸುತ್ತಿದ್ದ‌ ಎನ್ನಲಾಗಿದೆ.

ಮೊದಲ ಮ್ಯಾಚ್‌ನಲ್ಲಿ ಆರೋಪಿಗಳು 81 ಟಿಕೆಟ್ ಬ್ಲಾಕ್‌ನಲ್ಲಿ ಮಾರಾಟ ಮಾಡಿದ್ದರು. LSG v/s RCB ಮ್ಯಾಚ್‌ಗೆ ಸುಮಾರು 100 ಟಿಕೆಟ್ ಮಾರಾಟಕ್ಕೆ ಸಿದ್ಧವಾಗಿದ್ದ ಚಂದ್ರಶೇಖರ್‌ನನ್ನು ಸ್ಟಿಂಗ್ ಮಾಡಿ ಬಂಧಿಸಲಾಗಿದೆ. ಸಿಸಿಬಿಯಲ್ಲಿ ಚಂದ್ರಶೇಖರ್, ಗಣೇಶ್ ಹರಿಕೇಶ್ ಹಾಗೂ ಎರಡು ಖಾಸಗಿ ಕಂಪನಿ ಮೇಲೆ FIR ದಾಖಲಾಗಿದೆ. ಚಂದ್ರಶೇಖರ್‌ನನ್ನು ಬಂಧಿಸಿದ್ದು, ಗಣೇಶ್‌ಗಾಗಿ ಹುಡುಕಾಟ ನಡೆದಿದೆ.

Share This Article