ನವದೆಹಲಿ: ಜೆಡಿಯು ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಶುಕ್ರವಾರ (ಏ.10) ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ (Oath As Rajya Sabha Member) ಸ್ವೀಕರಿಸಲಿದ್ದಾರೆ. ಏ.14 ರಂದು ಬಿಹಾರಕ್ಕೆ ನೂತನ ಮುಖ್ಯಮಂತ್ರಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಪ್ರಮಾಣ ವಚನ ಸ್ವೀಕರಿಸಿದ ನಂತರ ನಿತೀಶ್ ಕುಮಾರ್ ನಾಳೆಯೇ ಪಾಟ್ನಾಗೆ ಹಿಂತಿರುಗಲಿದ್ದಾರೆ ಮತ್ತು ಅವರ ಉತ್ತರಾಧಿಕಾರಿಯ ಆಯ್ಕೆ ಕುರಿತು ಚರ್ಚಿಸಲು ಏಪ್ರಿಲ್ 13 ರಿಂದ ಬಿಹಾರ ಸಚಿವ ಸಂಪುಟ ಸಭೆಯನ್ನ (Bihar Cabinet Meet) ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾರಾಮತಿ ಉಪಚುನಾವಣೆ; ಸ್ಪರ್ಧೆಯಿಂದ ಹಿಂದೆ ಸರಿದ ಕಾಂಗ್ರೆಸ್
ಏಪ್ರಿಲ್ 14 ನಿತೀಶ್ ಕುಮಾರ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಏಪ್ರಿಲ್ 15 ರಂದು ಬಿಹಾರದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದ್ದು, ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ನಿರೀಕ್ಷೆಯಿದೆ. ಕಳೆದ ತಿಂಗಳು ಜೆಡಿಯು ಸೇರಿದ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಅವರನ್ನ ಹೊಸ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಹಾರದ ಮುಂದಿನ ಸರ್ಕಾರವನ್ನ ರಾಜ್ಯ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾದ ಬಿಜೆಪಿ ಮುನ್ನಡೆಸುವ ನಿರೀಕ್ಷೆಯಿದೆ. ಹಲವಾರು ಬಿಜೆಪಿ ನಾಯಕರನ್ನ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಪರಿಗಣಿಸಲಾಗುತ್ತಿದೆ. ಅವರಲ್ಲಿ ಪ್ರಸ್ತುತ ಉಪಮುಖ್ಯಮಂತ್ರಿ ಮತ್ತು ತಾರಾಪುರದ ಶಾಸಕ ಸಾಮ್ರಾಟ್ ಚೌಧರಿ ಕೂಡ ಒಬ್ಬರು, ಗೃಹ ವ್ಯವಹಾರಗಳ ರಾಜ್ಯ ಸಚಿವ ಮತ್ತು ಉಜಿಯಾರ್‌ಪುರದ ಲೋಕಸಭಾ ಸಂಸದ ನಿತ್ಯಾನಂದ ರೈ ಕೂಡ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇದನ್ನೂ ಓದಿ: ಬಂಗಾಳದ ಜನತೆಗೆ ಪ್ರಧಾನಿ ಮೋದಿ 6 ಗ್ಯಾರಂಟಿ ಘೋಷಣೆ
ಇದರ ಜೊತೆಗೆ ವಿಜಯ್ ಕುಮಾರ್ ಸಿನ್ಹಾ, ದಿಘಾದ ಶಾಸಕ ಸಂಜೀವ್ ಚೌರಾಸಿಯಾ ಕೂಡ ಚರ್ಚೆಯಲ್ಲಿದ್ದಾರೆ. ಬಿಹಾರ ಬಿಜೆಪಿಯ ಮಾಜಿ ಮುಖ್ಯಸ್ಥ ಮತ್ತು ಮೂರು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿರುವ ದಿಲೀಪ್ ಜೈಸ್ವಾಲ್ ಅವರ ಹೆಸರು ಕೂಡ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆ. ಹಿರಿಯ ನಾಯಕ, ಪ್ರಸ್ತುತ ಕೃಷಿ ಸಚಿವ ಮತ್ತು ಪಾಟಲಿಪುತ್ರದ ಮಾಜಿ ಸಂಸದ ರಾಮ್ ಕೃಪಾಲ್ ಯಾದವ್ ಅವರ ಹೆಸರು ಕೂಡ ಪರಿಗಣನೆಯಲ್ಲಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಮತ್ತು ಗೋಪಾಲ್‌ಗಂಜ್‌ನ ಮಾಜಿ ಸಂಸದ ಜನಕ್ ರಾಮ್ ಅವರ ಹೆಸರು ಕೂಡ ಚರ್ಚೆಯಾಗುತ್ತಿದೆ.


