ಈಗಾಗಲೇ ದೇಶದ ಮುಂದೆ ಬೆತ್ತಲಾಗಿರುವ ನೀವು ಬಟ್ಟೆ ಬಿಚ್ಚಿದ್ದು ಯಾಕೆ: ಕಾಂಗ್ರೆಸ್‌ಗೆ ತಿವಿದ ಮೋದಿ

3 Min Read

ಮೀರತ್‌: ಈಗಾಗಲೇ ನೀವು ದೇಶದ ಮುಂದೆ ಬೆತ್ತಲಾಗಿದ್ದೀರಿ. ಹೀಗಿದ್ದರೂ ಮತ್ತೆ ನೀವು ಬಟ್ಟೆ ಬಿಚ್ಚಿದ್ದು ಯಾಕೆ ಎಂದು ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿಯ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್‌ನ (Congress) ಅರೆಬೆತ್ತಲೆ ಪ್ರತಿಭಟನೆಯ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮೋದಿ (PM Narendra Modi) ಕಾಂಗ್ರೆಸ್‌ ಜಾಗತಿಕ ವೇದಿಕೆಯನ್ನು ಕೊಳಕು ಮತ್ತು ಬೆತ್ತಲೆ ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶದೊಳಗೆ ಕೆಲವು ರಾಜಕೀಯ ಪಕ್ಷಗಳಿಗೆ ಭಾರತದ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ನಡೆದ ವಿಶ್ವದ ಅತಿದೊಡ್ಡ AI ಸಮ್ಮೇಳನಕ್ಕೆ (India AI Impact Summit) 80 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ದೆಹಲಿಗೆ ಬಂದಿದ್ದರು. ಸುಮಾರು 20 ದೇಶಗಳ ರಾಷ್ಟ್ರಗಳ ಮುಖ್ಯಸ್ಥರು ಭಾರತಕ್ಕೆ ಆಗಮಿಸಿದ್ದರು. ಇಡೀ ದೇಶವು ಹೆಮ್ಮೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ ಕಾಂಗ್ರೆಸ್ ಮತ್ತು ಅದರ ಪರಿಸರ ವ್ಯವಸ್ಥೆ ಏನು ಮಾಡಿದೆ? ಜಾಗತಿಕ ಕಾರ್ಯಕ್ರಮವನ್ನು ಕಾಂಗ್ರೆಸ್‌ ತನ್ನ ಕೊಳಕು ಮತ್ತು ಬೆತ್ತಲೆ ರಾಜಕೀಯದ ವೇದಿಕೆಯನ್ನಾಗಿಸಿತು. ಕಾಂಗ್ರೆಸ್ ನಾಯಕರು ವಿದೇಶಿ ಅತಿಥಿಗಳ ಮುಂದೆ ಬೆತ್ತಲೆಯಾಗಿ ಸ್ಥಳಕ್ಕೆ ತಲುಪಿದರು. ನಾನು ಕಾಂಗ್ರೆಸ್‌ನವರನ್ನು ಕೇಳುತ್ತೇನೆ. ನೀವು ಈಗಾಗಲೇ ಬೆತ್ತಲೆಯಾಗಿರುವುದು ದೇಶದ ಜನರಿಗೆ ತಿಳಿದಿದೆ. ಹೀಗಿದ್ದರೂ ನೀವು ನಿಮ್ಮ ಬಟ್ಟೆಗಳನ್ನು ಬಿಚ್ಚಿದ್ದು ಯಾಕೆ ಎಂದು ಪ್ರಶ್ನಿಸಿ ಕಾಂಗ್ರೆಸ್‌ ನಾಯಕರನ್ನು ತಿವಿದರು. ಇದನ್ನೂ ಓದಿ: ಮ್ಯಾಕ್ರನ್ ಹೊಗಳಿದ ಬೆನ್ನಲ್ಲೇ ಯುಪಿಐ ಪರಿಚಯಿಸಿದ್ದೇ ನಾವು ಎಂದ ಕಾಂಗ್ರೆಸ್‌

ಕಾಂಗ್ರೆಸ್‌ನ ಈ ನಡೆ ಅವರ ಸೈದ್ಧಾಂತಿಕ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶದ ಅತ್ಯಂತ ಹಳೆಯ ಪಕ್ಷವು ಎಷ್ಟು ಬಡತನದಲ್ಲಿದೆ ಎಂಬುದನ್ನು ತೋರಿಸುತ್ತದೆ ಎಂದು ಸಿಟ್ಟು ಹೊರಹಾಕಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗದ ಸಮಯವಿತ್ತು. ಒಪ್ಪಂದ ಆಗದೇ ಇರಲು ಕಾರಣವೂ ಇತ್ತು. ಜಗತ್ತು ಕುಖ್ಯಾತ ಹಗರಣಗಳ ಸರ್ಕಾರವನ್ನು ಎದುರಿಸಲು ಹಿಂಜರಿಯುತ್ತಿತ್ತು. ಆದರೆ ಇಂದು ಅಭಿವೃದ್ಧಿ ಹೊಂದಿದ ದೇಶಗಳು ಭಾರತದೊಂದಿಗೆ ಸಂಪರ್ಕ ಸಾಧಿಸಲು ಉತ್ಸುಕವಾಗಿವೆ. 21 ನೇ ಶತಮಾನದ ಸವಾಲುಗಳಿಗೆ ಭಾರತ ಪರಿಹಾರಗಳನ್ನು ಒದಗಿಸಬಲ್ಲದು ಎಂದು ಜಗತ್ತು ಭಾವಿಸುತ್ತಿದೆ ಎಂದು ಹೇಳುವ ಮೂಲಕ ತಮ್ಮ ಸರ್ಕಾರದ ಸಾಧನೆಯನ್ನು ಕೊಂಡಾಡಿದರು. ಇದನ್ನೂ ಓದಿ: ಎಐ ಶೃಂಗದಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ – ಕಾಲಿನಿಂದ ಒದ್ದು ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಹೊರ ಹಾಕಿದ ವೀಕ್ಷಕರು

ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಮೆಟ್ರೋ ಸೇವೆಗಳು ಕೇವಲ ಐದು ನಗರಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಬಿಜೆಪಿ ಸರ್ಕಾರದ ಅಡಿಯಲ್ಲಿ, ಮೆಟ್ರೋ ಜಾಲಗಳು ಈಗ 25 ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಇದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನಾಗಿ ಮಾಡಿದೆ ಎಂದು ಅವರು ಹೇಳಿದರು.

ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಮೂಲಸೌಕರ್ಯ ಯೋಜನೆಗಳು ಹಗರಣಗಳಾಗಿ ಕೊನೆಗೆ ಮಾಯವಾಗುತ್ತಿದ್ದವು. ಹೆಚ್ಚಿನ ಮೆಟ್ರೋ ಸಂಬಂಧಿತ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆದರೆ ನಾವು ಹಗರಣಗಳನ್ನು ನಿಲ್ಲಿಸಿದ್ದಲ್ಲದೆ, ದೇಶವನ್ನು ಸ್ವಾವಲಂಬನೆಯ ಹಾದಿಯಲ್ಲಿ ಮುನ್ನಡೆಸಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Share This Article