1947ರ ಬಳಿಕ ಫಸ್ಟ್‌ ಟೈಮ್‌ ಹೊಸ ಕಟ್ಟಡಕ್ಕೆ ಪ್ರಧಾನಿ ಕಚೇರಿ ಶಿಫ್ಟ್‌ – ಸೇವಾ ತೀರ್ಥಕ್ಕೆ ಸ್ಥಳಾಂತರ ಯಾಕೆ?

3 Min Read

– ಸೌತ್‌, ನಾರ್ಥ್‌ ಬ್ಲಾಕ್‌ನಲ್ಲಿ ತಲೆ ಎತ್ತಲಿದೆ ವಿಶ್ವದ ಅತಿ ದೊಡ್ಡ ಮ್ಯೂಸಿಯಂ

ನವದೆಹಲಿ: ಭಾರತದ ನೂತನ ಪ್ರಧಾನಮಂತ್ರಿ ಕಚೇರಿ ಸೇವಾ ತೀರ್ಥವನ್ನು (Seva Teerth) ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟನೆ ಮಾಡಿದ್ದಾರೆ. 1947 ರ ಬಳಿಕ ಅಂದರೆ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಗಳ ಕಚೇರಿ ಬದಲಾವಚಣೆ ಮಾಡುತ್ತಿರುವುದು ಗಮನಾರ್ಹ.

ಇದು ಭಾರತದ ಆಡಳಿತದ ವಾಸ್ತುಶಿಲ್ಪದಲ್ಲಿ ಪರಿವರ್ತನಾತ್ಮಕ ಮೈಲಿಗಲ್ಲು ಅಂತ ಸರ್ಕಾರ ಈ ಕಟ್ಟಡವನ್ನ ಬಣ್ಣಿಸಿದೆ. ಇದೇ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ಮೋದಿ ನೂರು ರೂಪಾಯಿಯ ನಾಣ್ಯವನ್ನ ಬಿಡುಗಡೆ ಮಾಡಿದರು.

ಹೊಸ ಕಚೇರಿಗೆ ಶಿಫ್ಟ್‌ ಆಗುವ ಮೊದಲು ನರೇಂದ್ರ ಮೋದಿ ಸಚಿವರ ಜೊತೆ ಸೌತ್‌ ಬ್ಲಾಕ್‌ (South Block) ಕಚೇರಿಯಲ್ಲಿ ಕೊನೆಯ ಕ್ಯಾಬಿನೆಟ್‌ ಸಭೆ ನಡೆಸಿದರು. 1921 ರಿಂದ ಉತ್ತರ ಮತ್ತು ದಕ್ಷಿಣ ಬ್ಲಾಕ್‌ಗಳು ದೇಶದಲ್ಲಿ ಅಧಿಕಾರದ ಕೇಂದ್ರಗಳಾಗಿತ್ತು. ಇದಕ್ಕೂ ಮೊದಲು ಗೃಹ ಸಚಿವಾಲಯವು ಲುಟಿನ್ಸ್ ದೆಹಲಿಯ ರೈಸಿನಾ ಹಿಲ್ಸ್‌ನಲ್ಲಿರುವ ಉತ್ತರ ಬ್ಲಾಕ್ ಸಂಕೀರ್ಣದಿಂದ ಸ್ಥಳಾಂತರಗೊಂಡಿತ್ತು.

ಸೇವಾ ತೀರ್ಥ ಹೆಸರು ಯಾಕೆ?
ಪ್ರಧಾನಿಗಳ ಹೊಸ ಕಚೇರಿಗೆ ʻಸೇವೆʼ ಎಂಬ ವಸ್ತುವಿಷಯವನ್ನಾಧರಿಸಿ ʻಸೇವಾ ತೀರ್ಥ-1ʼ (Seva Teert) ಎಂದು ನಾಮಕರಣ ಮಾಡಲಾಗಿದೆ. ಜೊತೆಗೆ ಸೇವೆಯ ಮಹತ್ವವನ್ನ ಬಿಂಬಿಸುವ ಆಧುನಿಕ ಕಾರ್ಯಕ್ಷೇತ್ರಗಳು ಹಾಗೂ ಭವ್ಯ ಸಮಾರಂಭ ಕೊಠಡಿಗಳನ್ನೂ ಒಳಗೊಂಡಿದೆ.

ಸೇವಾ ತೀರ್ಥಕ್ಕೆ ಸ್ಥಳಾಂತರ ಯಾಕೆ?
ದಶಕಗಳಿಂದಲೂ ಸೆಂಟ್ರಲ್ ವಿಸ್ಟಾದಲ್ಲಿರುವ ಬೇರೆ ಕಟ್ಡಡಗಳಲ್ಲಿ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿದ್ದವು. ಇದು ಸಮನ್ವಯ ಅಂತರ, ಲಾಜಿಸ್ಟಿಕಲ್ ಅಡಚಣೆಗಳು ಮತ್ತು ಹೆಚ್ಚಿನ ನಿರ್ವಹಣಾ ವೆಚ್ಚಗಳಿಗೆ ಕಾರಣವಾಗಿತ್ತು. ಈಗ ಪ್ರಮುಖ ಸಚಿವಾಲಯಗಳು ಒಂದೇ ಕಟ್ಟಡದಲ್ಲಿ ಇರಲಿವೆ. ಇದರಿಂದ ವೆಚ್ಚ ಕಡಿಮೆಯಾಗಲಿದೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳಿದೆ.

ಸೇವಾ ತೀರ್ಥವು ಮೂರು ಪ್ರಮುಖ ಸಚಿವಾಲಯವನ್ನು ಹೊಂದಿದೆ . ಪ್ರಧಾನ ಮಂತ್ರಿ ಕಚೇರಿ (ಸೇವಾ ತೀರ್ಥ-1), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (ಸೇವಾ ತೀರ್ಥ-2) ಮತ್ತು ಕ್ಯಾಬಿನೆಟ್ ಸಚಿವಾಲಯ (ಸೇವಾ ತೀರ್ಥ-3) ಕಾರ್ಯ ನಿರ್ವಹಿಸಲಿವೆ. ಇವೆಲ್ಲವೂ ಈ ಹಿಂದೆ ಪ್ರತ್ಯೇಕ ಸ್ಥಳಗಳಲ್ಲಿ ಕಾರ್ಯನಿವರ್ಹಿಸುತ್ತಿದ್ದವು.

ಕರ್ತವ್ಯ ಭವನ-1 ಮತ್ತು 2 ಹಣಕಾಸು, ರಕ್ಷಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಾರ್ಪೊರೇಟ್ ವ್ಯವಹಾರಗಳು, ಶಿಕ್ಷಣ, ಸಂಸ್ಕೃತಿ, ಕಾನೂನು ಮತ್ತು ನ್ಯಾಯ, ಮಾಹಿತಿ ಮತ್ತು ಪ್ರಸಾರ, ಕೃಷಿ ಮತ್ತು ರೈತರ ಕಲ್ಯಾಣ, ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಮತ್ತು ಬುಡಕಟ್ಟು ವ್ಯವಹಾರಗಳು ಸೇರಿದಂತೆ ಪ್ರಮುಖ ಸಚಿವಾಲಯಗಳನ್ನು ಒಳಗೊಂಡಿದೆ. ಅಂತರ-ಸಚಿವಾಲಯಗಳ ಸಮನ್ವಯವನ್ನು ಸುಧಾರಣೆ ಮತ್ತು ಸಾರ್ವಜನಿಕ ಪ್ರವೇಶವೂ ಇದರಿಂದ ಸುಲಭವಾಗಲಿದೆ.

ಡಿಜಿಟಲ್ ಏಕೀಕರಣ, ನಾಗರಿಕ-ಕೇಂದ್ರಿತ
ಹೊಸ ಸಂಕೀರ್ಣಗಳು ಡಿಜಿಟಲ್ ಸಂಯೋಜಿತ ಕಚೇರಿಗಳು, ರಚನಾತ್ಮಕ ಸಾರ್ವಜನಿಕ ಇಂಟರ್ಫೇಸ್ ವಲಯಗಳು ಮತ್ತು ಕೇಂದ್ರೀಕೃತ ಸ್ವಾಗತ ಸೌಲಭ್ಯಗಳನ್ನು ಒಳಗೊಂಡಿದೆ. 4-ಸ್ಟಾರ್ ಗೃಹ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾದ ಈ ಸಂಕೀರ್ಣಗಳು ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಜಲ ಸಂರಕ್ಷಣಾ ಕ್ರಮಗಳು, ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮತ್ತು ಇಂಧನ-ಸಮರ್ಥ ಕಟ್ಟಡ ವಿನ್ಯಾಸವನ್ನು ಒಳಗೊಂಡಿವೆ.

ಸೌಲಭ್ಯಗಳು ಸ್ಮಾರ್ಟ್ ಪ್ರವೇಶ ನಿಯಂತ್ರಣಗಳು, ಸಂಯೋಜಿತ ಕಣ್ಗಾವಲು ಮತ್ತು ಸುಧಾರಿತ ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿವೆ ಇದು ಪ್ರವೇಶಕ್ಕೆ ಧಕ್ಕೆಯಾಗದಂತೆ ಭದ್ರತೆಯನ್ನು ನೀಡಲಿದೆ.

1,189 ಕೋಟಿ ರೂ. ವೆಚ್ಚ
ಪ್ರಧಾನಿಗಳ ಕಚೇರಿಯನ್ನೊಳಗೊಂಡ ಸಂಪೂರ್ಣ ʻಸೇವಾ ತೀರ್ಥʼ ಸಂಕೀರ್ಣವನ್ನು 1,189 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ಒಟ್ಟು ವಿಸ್ತೀರ್ಣ 2,26,203 ಚದರ ಅಡಿ ಇದೆ.

ಪ್ರಧಾನಿಗಳ ಹಳೇ ಕಚೇರಿ ಏನಾಗುತ್ತೆ?
ಪ್ರಧಾನ ಮಂತ್ರಿಗಳು ಹೊಸ ಕಚೇರಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ದಕ್ಷಿಣ ಮತ್ತು ಉತ್ತರ ಬ್ಲಾಕ್‌ಗಳಲ್ಲಿರುವ ಕಚೇರಿಗಳನ್ನು ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯಗಳನ್ನಾಗಿ ನಿರ್ಮಾಣ ಮಾಡಲಾಗುತ್ತದೆ. ʻ’ಯುಗೆ ಯುಗೀನ್ ಭಾರತ್ ಸಂಗ್ರಹಾಲಯʼ ಹೆಸರಿನಲ್ಲಿ ಸಾರ್ವಜನಿಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗುತ್ತದೆ. ಯೋಜಿತ ವಸ್ತು ಸಂಗ್ರಹಾಲಯದ ಅಭಿವೃದ್ಧಿಗಾಗಿ 2024ರ ಡಿಸೆಂಬರ್‌ 19 ರಂದು ಫ್ರಾನ್ಸ್‌ನ ಮ್ಯೂಸಿಯಂ ಅಭಿವೃದ್ಧಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ 5,000 ವರ್ಷಗಳ ಭಾರತೀಯ ನಾಗರಿಕತೆಯ ಇತಿಹಾಸ ದಾಖಲಾಗುವಂತೆ ವಿನ್ಯಾಸ ಮಾಡಲಾಗುತ್ತದೆ. 1.55 ಲಕ್ಷ ಚದರ ಮೀಟರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಇದು ಬ್ರಿಟಿಷ್ ವಸ್ತುಸಂಗ್ರಹಾಲಯ ಮತ್ತು ಲೌವ್ರೆಯನ್ನು ಮೀರಿಸುವಂತೆ ನಿರ್ಮಾಣ ಮಾಡುವ ಗುರಿಯನ್ನು ಹಾಕಲಾಗಿದೆ.

Share This Article