ಜಿ ರಾಮ್‌ ಜಿ ಕಾಯ್ದೆ ಮೂಲಕ ಮಹಾತ್ಮ ಗಾಂಧಿ, ಕಾರ್ಮಿಕರ ಬದುಕಿನ ಹತ್ಯೆ: ಡಿಕೆಶಿ

2 Min Read

ಬೆಂಗಳೂರು/ಶಿವಮೊಗ್ಗ: ಕೇಂದ್ರ ಬಿಜೆಪಿ ಸರ್ಕಾರ ಜಿ ರಾಮ್‌ ಜಿ ನೂತನ ಕಾಯ್ದೆ ಮೂಲಕ ಮಹಾತ್ಮ ಗಾಂಧಿ ಹಾಗೂ ಕಾರ್ಮಿಕರ ಬದುಕನ್ನು ಸಾಯಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಜಿಲ್ಲೆಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳ ಜೊತೆ ಮನರೇಗಾ ವಿಚಾರದ ಬಗ್ಗೆ ಮಾತನಾಡಿದ ಅವರು, ಖಂಡಿತವಾಗಿ ಮನರೇಗಾ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ರೈತರ ವಿಚಾರದಲ್ಲಿ ಕಾಯ್ದೆಗಳನ್ನು ಯಾವ ರೀತಿ ಹಿಂಪಡೆದರೋ ಅದೇ ರೀತಿ ಇದನ್ನು ಹಿಂಪಡೆಯಬೇಕು. 6-7 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುತ್ತಿತ್ತು. ಕಾರ್ಮಿಕರಿಗೆ ಉದ್ಯೋಗದ ಹಕ್ಕು ನೀಡಲಾಗಿತ್ತು, ಪಂಚಾಯಿತಿ ಸದಸ್ಯರೇ ತಮ್ಮ ವ್ಯಾಪ್ತಿಯಲ್ಲಿ ಯಾವ ಕೆಲಸ ಆಗಬೇಕು ಎಂದು ತೀರ್ಮಾನ ಮಾಡುತ್ತಿದ್ದರು. ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿದರೆ ಅವರಿಗೆ ವೇತನ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಆಶ್ರಯ ಮನೆ, ಜಮೀನು ಮಟ್ಟ ಮಾಡುವ, ಇಂಗುಗುಂಡಿ ನಿರ್ಮಾಣಕ್ಕೆ ಕೂಲಿ ನೀಡಲಾಗುತ್ತಿತ್ತು. ಈ ಹಕ್ಕುಗಳನ್ನು ಕಸಿದು, ಇನ್ನು ಮುಂದೆ ದೆಹಲಿಯಿಂದ ಯಾವ ಕೆಲಸ ಆಗಬೇಕು ಎಂದು ತೀರ್ಮಾನಿಸಲಾಗುವುದು. ಮನರೇಗಾ ಯೋಜನೆ ಮೂಲಕ ನನ್ನ ಕ್ಷೇತ್ರದಲ್ಲಿ 54 ಸಾವಿರಕ್ಕೂ ಹೆಚ್ಚು ದನದ ಕೊಟ್ಟಿಗೆ ಕಟ್ಟಿಸಿದ್ದೇನೆ. ಒಂದೇ ವರ್ಷ 250 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು. ಇದನ್ನೂ ಓದಿ: ಅಜಿತ್‌ ಪವಾರ್‌ ವಿಮಾನ ಪತನ ಕೇಸ್‌ನಲ್ಲಿ ಸ್ಫೋಟಕ ಟ್ವಿಸ್ಟ್‌ – ಕೊನೇ ಕ್ಷಣದಲ್ಲಿ ಪೈಲಟ್‌ ಬದಲಾಗಿದ್ದೇಕೆ?

ನೂರಾರು ಚೆಕ್ ಡ್ಯಾಂ ನಿರ್ಮಿಸಲಾಗಿದೆ. ನಾನು ಹಣ ಹೊಡೆದಿದ್ದೇನೆ ಎಂಬ ಅನುಮಾನದ ಮೇಲೆ ಕೇಂದ್ರ ಸರ್ಕಾರ ದೆಹಲಿಯಿಂದ ತಂಡ ಕಳುಸಿಹಿ ತನಿಖೆ ಮಾಡಿಸಿತ್ತು. ನಂತರ ಈಶ್ವರಪ್ಪನವರೇ ಶಿಫಾರಸ್ಸು ಮಾಡಿ, ನಮ್ಮ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರನ್ನು ದೆಹಲಿಗೆ ಕರೆಸಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತಂದ ಕ್ಷೇತ್ರ ಎಂದು ಪ್ರಶಸ್ತಿ ನೀಡಿದರು. ಹೊಸ ಕಾಯ್ದೆಯಿಂದ ಕಾರ್ಮಿಕರಿಗೆ ಸಂಕಷ್ಟ ಎದುರಾಗುವ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಯೋಜನೆಗೆ ರಾಜ್ಯ ಸರ್ಕಾರ ಅನುದಾನ ನೀಡಲು ಆಗುವುದಿಲ್ಲ, ಕೇಂದ್ರ ಸರ್ಕಾರವೇ ಭರಿಸಬೇಕು. ಈ ಕಾಯ್ದೆ ಅನುಸಾರ ಯಾವ ಮಾರ್ಗಸೂಚನೆ ನೀಡುತ್ತಾರೆ ಕಾದು ನೋಡಬೇಕು ಎಂದು ತಿಳಿಸಿದರು.

ರಾಜ್ಯದ ತೆರಿಗೆ ಹಣವನ್ನು ಜಾಹೀರಾತಿನ ಮೂಲಕ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ಜಾಹೀರಾತು ನೀಡಿರುವುದರಲ್ಲಿ ತಪ್ಪೇನಿದೆ? ಮನರೇಗಾ ಯೋಜನೆ ಹೇಗೆ ಪ್ರಯೋಜನವಾಗುತ್ತಿತ್ತು, ಈಗ ನೂತನ ಕಾಯ್ದೆಯಿಂದ ಆಗುವ ಅನಾನುಕೂಲಗಳ ಬಗ್ಗೆ ನಮ್ಮದೇ ಆದ ಶೈಲಿಯಲ್ಲಿ ಜನರಿಗೆ ತಿಳಿಸುತ್ತೇವೆ. ನಾನು ರಂಗೋಲಿ ಸ್ಪರ್ಧೆಯನ್ನು ವೀಕ್ಷಣೆ ಮಾಡುವಾಗ ಗಣೇಶ ಚಿತ್ರದ ಮೇಲೆ ಸಾಗಿದೆ ಎಂದು ಬಿಜೆಪಿ ದಳದವರು ಟ್ರೋಲ್ ಮಾಡುತ್ತಿದ್ದಾರೆ. ಆ ಟ್ರೋಲ್ ಮಾಡಲು ಅವರದ್ದೂ ಒಂದೆರಡು ರೂಪಾಯಿ ಖರ್ಚಾಗಿರುತ್ತದೆಯಲ್ಲವೇ? ಒಬ್ಬೊಬ್ಬರು ಒಂದೊಂದು ವಿಚಾರದಲ್ಲಿ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.ಇದನ್ನೂ ಓದಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ | ವೀರೇಂದ್ರ ಪಪ್ಪಿಗೆ ಇಡಿ ಶಾಕ್ – 177.3 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

Share This Article