WPL 2026 | ರಾಯಲ್‌ ಆಗಿ ವಾರಿಯರ್ಸ್‌ ಚಾಲೆಂಜ್‌ ಗೆದ್ದ ಬೆಂಗಳೂರು – ನಂ.1 ಪಟ್ಟಕ್ಕೆ ಜಿಗಿದ ಆರ್‌ಸಿಬಿ

1 Min Read

ಮುಂಬೈ: ಬಿಗಿ ಬೌಲಿಂಗ್‌ ಹಿಡಿತದ ಜೊತೆಗೆ ಗ್ರೇಸ್‌ ಹ್ಯಾರಿಸ್‌ ಬೆಂಕಿ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳೆಯರ ತಂಡ, ಯುಪಿ ವಾರಿಯರ್ಸ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರಂಭಿಕ 2 ಪಂದ್ಯಗಳನ್ನ ಗೆದ್ದು ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ.

ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 143 ರನ್‌ ಕಲೆ ಹಾಕಿತ್ತು. 144 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ 12.1 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟಕ್ಕೆ 145 ರನ್‌ಗಳಿಸಿ ಗೆಲುವು ಸಾಧಿಸಿತು.

ಆರ್‌ಸಿಬಿ ಪರ ಗ್ರೇಸ್ ಹ್ಯಾರಿಸ್ 40 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್‌ ಸಿಡಿಸಿ 85 ರನ್‌ ಕಲೆಹಾಕಿ, ಸಿ ಲ್ಯಾನಿಂಗ್ ಬಿ ಪಾಂಡೆಗೆ ವಿಕೆಟ್‌ ಒಪ್ಪಿಸಿದರು. ಸ್ಮೃತಿ ಮಂಧಾನ 32 ಎಸೆತಗಳಲ್ಲಿ 9 ಬೌಂಡರಿ ಸಿಡಿಸಿ ಅಜೇಯ 47 ರನ್‌ ಕಲೆಹಾಕಿದರು. ರಿಚಾ ಘೋಷ್ ಔಟಾಗದೆ 4 ರನ್‌ ಕೊಡುಗೆ ನೀಡಿದರು.

ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಯುಪಿ ತಂಡದ ಆರಂಭ ಕಳಪೆಯಾಗಿತ್ತು. ಯುಪಿ ತಂಡದ ಪರ ಹರ್ಲಿನ್ ಡಿಯೋಲ್‌ 11 ರನ್ ಬಾರಿಸಿ ಲಾರೆನ್ ಬೆಲ್ ಎಸೆತದಲ್ಲಿ ಔಟ್ ಆದರು. ಭರವಸೆಯ ಆಟಗಾರ್ತಿ ಮೆಗ್ ಲ್ಯಾನಿಂಗ್‌ ಅವರು 14 ರನ್ ಬಾರಿಸಿದ್ದಾಗ ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ರಾಧಾ ಯಾದವ್ ಕೈಯಲ್ಲಿ ಕ್ಯಾಚ್‌ಗೆ ಬಲಿಯಾದರು. ಫೋಬೆ ಲಿಚ್‌ಫೀಲ್ಡ್ 11 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 20 ರನ್‌ ಬಾರಿಸಿ ಶ್ರೇಯಾಂಕ ಪಾಟೀಲ್‌ ಎಸೆತದಲ್ಲಿ ಮಂಧಾನ ಹಿಡಿದ ಕ್ಯಾಚ್‌ನಿಂದ ಪೆವಿಲಿಯನ್‌ಗೆ ಮರಳಿದರು.

50 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದೀಪ್ತಿ ಶರ್ಮಾ ಹಾಗೂ ಡಿಯಾಂಡ್ರಾ ಡಾಟಿನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 72 ಎಸೆತಗಳಲ್ಲಿ ಅಜೇಯ 93 ರನ್‌ ಜೊತೆಯಾಟದ ಕಾಣಿಕೆ ನೀಡಿದರು. ಆಲ್‌ರೌಂಡರ್ ದೀಪ್ತಿ ಶರ್ಮಾ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಡಿಯಾಂಡ್ರಾ ಡಾಟಿನ್ 37 ಎಸೆತಗಳಲ್ಲಿ ಅಜೇಯ 40 ರನ್‌ ಸೇರಿಸಿದರು.

Share This Article