ರಾಜ್ಯದಲ್ಲಿ ನಾಯಕತ್ವ ಗೊಂದಲ ಹೈಕಮಾಂಡ್‌ ಸೃಷ್ಟಿಸಿಲ್ಲ, ಅವ್ರೇ ಮಾಡಿಕೊಂಡಿದ್ದಾರೆ: ಖರ್ಗೆ ಗರಂ

1 Min Read

– ಕಾಂಗ್ರೆಸ್ ಯಾರೋ ಒಬ್ಬರಿಂದ ಬೆಳೆದಿದ್ದಲ್ಲ, ನನ್ನಿಂದಲೇ ಅಂತ ಹೇಳಬಾರದು

ಕಲಬುರಗಿ: ರಾಜ್ಯದಲ್ಲಿ ನಾಯಕತ್ವ ಗೊಂದಲ ಹೈಕಮಾಂಡ್‌ (HighCommand) ಸೃಷ್ಟಿ ಮಾಡಿಲ್ಲ, ಲೋಕಲ್‌ನವರೇ ಮಾಡಿಕೊಂಡಿದ್ದಾರೆ. ಸ್ಥಳೀಯ ನಾಯಕರೇ ಇದನ್ನ ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌ ಹೈಕಮಾಂಡ್‌ ಅಂದ್ರೆ ಹೇಗೆ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಹೌದು. ರಾಜ್ಯ ಕಾಂಗ್ರೆಸ್‌ನಲ್ಲಿ (Karnataka Congress) ಕುರ್ಚಿ ಕದನ ದಿನೇ ದಿನೇ ತಾರಕಕ್ಕೇರುತ್ತಿದೆ. ಸಿಎಂ-ಡಿಸಿಎಂ ಬಣದ ನಾಯಕರು ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಕುರ್ಚಿ ಕದನವನ್ನೂ ಜೀವಂತವಾಗಿಟ್ಟಿದ್ದಾರೆ. ನಾನೇ 5 ವರ್ಷ ಸಿಎಂ, ಎರಡೂವರೆ ವರ್ಷಕ್ಕೆ ನಾಯಕತ್ವ ಬದಲಾಗುತ್ತೆ ಅಂತ ಎಲ್ಲೂ ಒಪ್ಪಂದ ಆಗಿಲ್ಲ. ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಅಂತ ಸಿದ್ದರಾಮಯ್ಯ ಸೆಷನ್‌ನಲ್ಲಿ ಹೇಳಿಕೆ ಕೊಟ್ಟ ಬೆನ್ನಲ್ಲೇ ಸಿಎಂ ಆಪ್ತರ ಭೇಟಿಗೆ ಡಿಕೆಶಿ ಮುಂದಾಗಿದ್ದಾರೆ. ಈ ನಡುವೆ ಸ್ಥಳೀಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಸೂಕ್ಷ್ಮ ಸಂದೇಶ ಕೊಟ್ಟಿದ್ದಾರೆ. ಜೊತೆಗೆ ಇಲ್ಲಿನ ಸಮಸ್ಯೆಯನ್ನ ಇಲ್ಲೇ ಬಗೆಹರಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ ನಾಯಕತ್ವದ ಗೊಂದಲ ವಿಚಾರ ಕುರಿತು ಮಾತನಾಡಿದ ಅವರು, ಗೊಂದಲವನ್ನ ಹೈಕಮಾಂಡ್‌ ಮಾಡಿಲ್ಲ. ಇಲ್ಲಿನ ನಾಯಕರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ಥಳೀಯ ನಾಯಕರೇ ಇದನ್ನ ಬಗೆಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌ ಅಂತ ಹೇಳಿದ್ರೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು… ಕಾಂಗ್ರೆಸ್ ಯಾರೋ ಒಬ್ಬ ನಾಯಕನಿಂದ ಬೆಳಿದಿದ್ದಲ್ಲ. ಹೀಗಾಗಿ ಯಾರೊಬ್ಬರೂ ನನ್ನಿಂದ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದೇನೆಂದು ಹೇಳಬಾರದು. ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷ. ಪಕ್ಷದ ಅಂದ ಮೇಲೆ ಎಲ್ಲರ ಪಾತ್ರವೂ ಇರುತ್ತೆ. ಕೆಲ ಕಾರ್ಯಕರ್ತರು ಕೂಡ ಒಬ್ಬರಿಂದಲೇ ಪಕ್ಷ ಇದೆ ಎನ್ನಬಾರದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Share This Article