ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರಕ್ಕೆ ಯು ಸರ್ಟಿಫಿಕೇಟ್

Public TV
2 Min Read

ಕುಂ.ವೀರಭದ್ರಪ್ಪ ‘ಕುಬುಸ’ ಕಥೆ ಆಧಾರಿಸಿ ರಘು ರಾಮಚರಣ್ ಹೂವಿನ ಹಡಗಲಿ ‘ಕುಬುಸ’ ಸಿನಿಮಾ ನಿರ್ದೇಶಿಸಿದ್ದಾರೆ.  ಫಸ್ಟ್ ಲುಕ್ ಮೂಲಕ ಗಮನ ಸೆಳೆದಿರುವ ಈ ಚಿತ್ರ ಜನವರಿ ಕೊನೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ತಾಯಿ ಮಗನ ಸೆಂಟಿಮೆಂಟ್ ಹೊತ್ತ ಈ ಸಿನಿಮಾ ಸೆನ್ಸಾರ್ ಅಂಗಳದಲ್ಲಿ ಪಾಸ್ ಆಗಿದ್ದು ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿದೆ. ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ.  ‘ಕುಬುಸ’ ಆರ್. ಚಂದ್ರು ಶಿಷ್ಯ ರಘು ರಾಮಚರಣ್ ಹೂವಿನ ಹಡಗಲಿ ನಿರ್ದೇಶನದ ಮೊದಲ ಸಿನಿಮಾ. ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಪ್ರೇಮ್, ಸತ್ಯ ಪ್ರಕಾಶ್ ಸಿನಿಮಾಗಳಲ್ಲೂ ಸಹಾಯಕ ನಿರ್ದೇಶಕನಾಗಿ, ಕಲಾವಿದನಾಗಿ ಗುರುತಿಸಿಕೊಂಡಿರುವ ಇವರು ‘ಕುಬುಸ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಕಲ್ಲು ಒಡೆದು ಹಳ್ಳಿಯಲ್ಲಿ ಜೀವನ ಸಾಗಿಸುವ ತಾಯಿ ತನ್ನ ಮಗನನ್ನು ದೂರದ ಊರಿನಲ್ಲಿ ಓದಿಸುತ್ತಿರುತ್ತಾಳೆ. ಯಾವತ್ತೂ ಬೇರೆ ಊರಿಗೆ ಪಯಣ ಬೆಳೆಸದ, ಬಸ್ಸು ಕೂಡ ಹತ್ತಿರದ ಆಕೆಯನ್ನು ಮಗ ಕೆಲಸ ಸಿಕ್ಕ ಮೇಲೆ ನಗರಕ್ಕೆ ಕರೆದುಕೊಂಡು ಬರುತ್ತಾನೆ. ಮೊದಲಿನಿಂದಲೂ ಕುಬುಸ ಧರಿಸಿ ಅಭ್ಯಾಸವಿರದ ಆಕೆ ಈ ಕಾರಣದಿಂದ ನಗರಕ್ಕೆ ಬಂದಾಗ ಹೇಗೆಲ್ಲ ಜನರಿಂದ ಮುಜುಗರಕ್ಕೆ ಒಳಗಾಗುತ್ತಾಳೆ, ಮುಂದೆ ಏನಾಗುತ್ತೆ ಅನ್ನೋದು ಸಿನಿಮಾದ ಕಹಾನಿ. ತಾಯಿ ಮಗನ ಸೆಂಟಿಮೆಂಟ್ ಇರುವ ಈ ಚಿತ್ರದಲ್ಲಿ ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್. ಎಸ್. ಭಟ್, ರಂಗಭೂಮಿ ಕಲಾವಿದೆ ಹನುಮಕ್ಕ ಮರಿಯಮ್ಮನ ಹಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟರಾಜ್. ಎಸ್. ಭಟ್ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ನಟಿಸಿದ್ದು, ಆರ್ಯ ಮೈಸೂರು, ಅನಿಕ ರಮ್ಯ, ಮಹಾಲಕ್ಷ್ಮೀ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ದೊಡ್ಡ ಪಾತ್ರವೊಂದನ್ನು ಪೋಷಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗುಂಡಿ ರಮೇಶ್ ಹಾಗೂ ಪತ್ನಿ ಗುಂಡಿ ಭಾರತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹೊನ್ನಾವರ ಸ್ವಾಮಿ, ಹುಲಿಗಪ್ಪ ಕಟ್ಟೋಮನಿ, ಕನ್ನಡ ಕಲಾ ಸಂಘ ಹೊಸಪೇಟೆ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ.  ಕಲಾತ್ಮಕ ಸಿನಿಮಾಗಳಿಗಿಂತ ಭಿನ್ನವಾದ ಹೊಸತನ ಒಳಗೊಂಡ ಸಿನಿಮಾ ‘ಕುಬುಸ’. ಚಿತ್ರದಲ್ಲಿ ಮೂಲ ಕಥೆಯಲ್ಲಿರುವಂತೆ ಬಳ್ಳಾರಿ ಭಾಷೆಯ ಸೊಗಡನ್ನು ಕಾಣಬಹುದಾಗಿದೆ. ಮ್ಯೂಸಿಕಲ್ ಸಿನಿಮಾ ಕೂಡ ಆಗಿದ್ದು ಸನ್ನಿವೇಶಕ್ಕೆ ತಕ್ಕ ಹಾಗೆ ನಾಲ್ಕು ಹಾಡುಗಳಿದ್ದು ನಾಲ್ಕು ಬಿಟ್ ಗಳಿವೆ. ಜೋಗಿ ಪ್ರೇಮ್, ವಾಸುಕಿ ವೈಭವ್, ಶೃತಿ.ವಿ.ಎಸ್, ಶಿಲ್ಪ ಮುಡ್ಬಿ, ಪ್ರದೀಪ್ ಚಂದ್ರ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ.

ಪ್ರದೀಪ್ ಚಂದ್ರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮಾ. ಎ ಕ್ಯಾಮೆರಾ ವರ್ಕ್, ಶಿವಮೂರ್ತಿ ಡೋಣಿಮಲೈ ಸಹ ನಿರ್ದೇಶನ ಚಿತ್ರಕ್ಕಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್ ನಡಿ ವಿ. ಶೋಭಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ ಚಿತ್ರತಂಡ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *