3 ವಿಕೆಟ್‌ ಕಿತ್ತು ರೋಚಕ ತಿರುವು – ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕ ಮಾತು

Public TV
2 Min Read

ಅಬುದಾಬಿ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ಜಯಕ್ಕೆ ಕಾರಣವಾದ ರಶೀದ್‌ ಖಾನ್‌ ಪಂದ್ಯ ಮುಗಿದ ಬಳಿಕ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

14 ರನ್‌ ನೀಡಿ 3 ವಿಕೆಟ್‌ ಕಿತ್ತು ರಶೀದ್‌ ಖಾನ್‌ ಅವರನ್ನು ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ತಂದೆ, ತಾಯಿಯ ಬಗ್ಗೆ ರಶೀದ್‌ ಖಾನ್‌ ಭಾವನಾತ್ಮಕವಾಗಿ ಮಾತನಾಡಿದರು.

ಕಳೆದ ಒಂದೂವರೆ ವರ್ಷದಲ್ಲಿ ನಾನು ನನ್ನ ಪೋಷಕರನ್ನು ಕಳೆದುಕೊಂಡಿದ್ದೇನೆ. ಆರಂಭದಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೆ. 3-4 ತಿಂಗಳ ಹಿಂದೆ ನನ್ನ ತಾಯಿ ತೀರಿಕೊಂಡರು. ತಾಯಿ ನನ್ನ ಅತಿ ದೊಡ್ಡ ಅಭಿಮಾನಿ. ವಿಶೇಷವಾಗಿ ಐಪಿಎಲ್‌ ಸಮಯದಲ್ಲಿ ರಾತ್ರಿ ತಾಯಿ ನನ್ನ ಜೊತೆ ಮಾತನಾಡುತ್ತಿದ್ದರು ಎಂದು ನೆನಪನ್ನು ಹಂಚಿಕೊಂಡರು. ಈ ವೇಳೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ರಶೀದ್‌ ಖಾನ್‌ ಪೋಷಕರಿಗೆ ಸಮರ್ಪಿಸಿದರು. ಇದನ್ನೂ ಓದಿ: ಟೆನ್ನಿಸ್ ಬಾಲ್ ಮ್ಯಾಚಿನಿಂದ ಸೂಪರ್ ಓವರ್ ಬೌಲರ್ – ಆರ್‌ಸಿಬಿ ಸೈನಿಯ ಕ್ರಿಕೆಟ್ ಪ್ರಯಾಣದ ಕಥೆ

 

ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್‌ ತಂಡ 4 ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿತ್ತು. ನಂತರ ಹೈದರಾಬಾದ್‌ ತಂಡದ ಶಿಸ್ತು ಬದ್ಧ ಬೌಲಿಂಗ್‌ಗೆ ಡೆಲ್ಲಿ ತಂಡ 7 ವಿಕೆಟ್‌ ಕಳೆದುಕೊಂಡು 147 ರನ್‌ ಗಳಿಸಿತು.

7.1 ಓವರ್‌ಗೆ 42 ರನ್‌ಗೆ 1 ವಿಕೆಟ್‌ ಕಳೆದುಕೊಂಡು ಡೆಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿ ಇತ್ತು. ಆದರೆ ನಂತರ ನಡೆದದ್ದು ರಶೀದ್‌ ಖಾನ್‌ ಮ್ಯಾಜಿಕ್‌. ಐದನೇಯವರಾಗಿ ಬೌಲಿಂಗ್‌ಗೆ ಇಳಿದ ರಶೀದ್‌ ಖಾನ್‌ 17 ರನ್‌ ಗಳಿಸಿದ್ದ ಶ್ರೇಯಸ್‌ ಅಯ್ಯರ್‌ ಅವರನ್ನು ಔಟ್‌ ಮಾಡಿದ ಬಳಿಕ ಇನ್ನಿಂಗ್ಸ್‌ನ 11.3 ಓವರ್‌ನಲ್ಲಿ ಮತ್ತೊಂದು ಬ್ರೇಕ್‌ ನೀಡಿದರು. ಇದನ್ನೂ ಓದಿ:ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

34 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶಿಖರ್‌ ಧವನ್‌ ಅವರನ್ನು ಔಟ್‌ ಮಾಡಿದರು. ತಂಡದ ಮೊತ್ತ 117 ಆಗಿದ್ದಾಗ ರಿಷಬ್‌ ಬಂತ್‌ ಅವರನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. 4 ಓವರ್‌ಗಳಲ್ಲಿ ಕೇವಲ 14 ರನ್‌ ನೀಡಿ 3.50 ಎಕಾನಮಿಯಲ್ಲಿ ಮೂರು ವಿಕೆಟ್‌ ಕಿತ್ತ ಪರಿಣಾಮ ಪಂದ್ಯ ಹೈದರಾಬಾದ್‌ ಕಡೆ ವಾಲಿತು. ವಿಶೇಷ ಏನೆಂದರೆ ಹೈದರಾಬಾದ್‌ ಪರ 5 ಮಂದಿ ಬೌಲ್‌ ಮಾಡಿದ್ದು, ಈ ಪೈಕಿ ರಶೀದ್‌ ಖಾನ್‌ ಹೊರತು ಪಡಿಸಿ ಉಳಿದ ಎಲ್ಲರೂ ಒಂದೊಂದು ವೈಡ್‌ ಎಸೆದಿದ್ದಾರೆ.

104 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ ಕೊನೆಯ 4 ವಿಕೆಟ್‌ಗಳನ್ನು 44 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು.

Share This Article
Leave a Comment

Leave a Reply

Your email address will not be published. Required fields are marked *