Connect with us

ಟೆನ್ನಿಸ್ ಬಾಲ್ ಮ್ಯಾಚಿನಿಂದ ಸೂಪರ್ ಓವರ್ ಬೌಲರ್ – ಆರ್‌ಸಿಬಿ ಸೈನಿಯ ಕ್ರಿಕೆಟ್ ಪ್ರಯಾಣದ ಕಥೆ

ಟೆನ್ನಿಸ್ ಬಾಲ್ ಮ್ಯಾಚಿನಿಂದ ಸೂಪರ್ ಓವರ್ ಬೌಲರ್ – ಆರ್‌ಸಿಬಿ ಸೈನಿಯ ಕ್ರಿಕೆಟ್ ಪ್ರಯಾಣದ ಕಥೆ

– ಗಂಭೀರ್ ಗುರುತಿಸಿ ಕರೆತಂದ, ರಾಹುಲ್ ಡ್ರಾವಿಡ್ ಗರಡಿಯಲ್ಲಿ ಪಳಗಿದ ಪ್ರತಿಭೆ
– ಬಸ್ ಚಾಲಕನ ಮಗ, ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗ

ನವದೆಹಲಿ: ಶ್ರದ್ಧೆ, ಪರಿಶ್ರಮ ಇದ್ದಾರೆ ಏನಾನ್ನದರೂ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ನವದೀಪ್ ಸೈನಿ. ಹಣಕ್ಕಾಗಿ ಟೆನ್ನಿಸ್ ಬಾಲ್ ಮ್ಯಾಚ್ ಆಡುತ್ತಿದ್ದ ಸೈನಿ ಇಂದು ಭಾರತದ ಪರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌಲ್ ಮಾಡಿದ್ದಾರೆ.

ಹರಿಯಾಣದಲ್ಲಿ ಜನಿಸಿದ ಸೈನಿ ಅವರ ತಂದೆ ಸರ್ಕಾರಿ ಬಸ್ ಚಾಲಕರಾಗಿದ್ದಾರೆ. ಇವರ ತಾತ ಕರಮ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಸುಭಾಷ್ ಚಂದ್ರ ಭೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸದಸ್ಯರಾಗಿದ್ದರು. ಸೈನಿ 1992 ನವೆಂಬರ್ 23ರಂದು ಹರಿಯಾಣದ ಕರ್ನಾಲ್ ಅಲ್ಲಿ ಜನಿಸಿದ್ದರು.

ಗಂಭೀರ್ ಗುರುತಿಸಿದ್ದ ಪ್ರತಿಭೆ
ಸೈನಿಯವರು ಮೊದಲು ಖರ್ಚಿಗಾಗಿ ಟೆನ್ನಿಸ್ ಪಂದ್ಯಗಳನ್ನು ಆಡುತ್ತಿದ್ದರು. ಇದರಲ್ಲಿ ಒಂದು ಪಂದ್ಯಕ್ಕೆ 250ರಿಂದ 300ರೂ.ಗಳನ್ನು ಪಡೆಯುತ್ತಿದ್ದರು. ಟೆನ್ನಿಸ್ ಬಾಲಿನಲ್ಲಿ ಉತ್ತಮವಾಗಿ ಆಡುತ್ತಿದ್ದ ಸೈನಿಯವರನ್ನು ಒಂದು ದಿನ ಭಾರತ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ನೋಡಿದ್ದರು. 2013ರಲ್ಲಿ ಸೈನಿಯನ್ನು ಭೇಟಿ ಮಾಡಿದ್ದ ಗಂಭೀರ್ ಅವರನ್ನು ಡೆಲ್ಲಿ ತಂಡಕ್ಕೆ ನೆಟ್ ಪ್ರಾಕ್ಟೀಸ್ ವೇಳೆ ಬೌಲ್ ಮಾಡಲು ಕರೆ ತಂದಿದ್ದರು.

2013ರ ಡಿಸೆಂಬರ್ ನಲ್ಲಿ ಸೈನಿ ಡೆಲ್ಲಿ ತಂಡಕ್ಕೆ ನೆಟ್ ಅಭ್ಯಾಸದ ವೇಳೆ ಬೌಲ್ ಮಾಡಿದ್ದರು. ಅಂದು ಸೈನಿಗೆ ಬೌಲಿಂಗ್ ಟಿಪ್ಸ್ ಕೊಟ್ಟಿದ್ದ ಗಂಭೀರ್, ಟಿನ್ನಿಸ್ ಬಾಲಿನಲ್ಲಿ ಹೇಗೆ ಬೌಲ್ ಮಾಡುತ್ತಿದ್ದೆ, ಹಾಗೇ ಇಲ್ಲಿಯೂ ಮಾಡು ಭಯಪಡಬೇಡ. ಉಳಿದಿದ್ದು ತಾನಾಗಿಯೇ ಸರಿ ಹೋಗುತ್ತೆ ಎಂದು ಹೇಳಿದ್ದರಂತೆ. ಇಂದು ನಾನು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಅದಕ್ಕೆ ಗಂಭೀರ್ ಅವರೇ ಕಾರಣ, ಅವರ ಬಗ್ಗೆ ಮಾತನಾಡುವಾಗ ನಾನು ಭಾವುಕನಾಗುತ್ತೇನೆ ಎಂದು ಸೈನಿ ಈ ಹಿಂದೆ ಮಾಧ್ಯಮವೊಂದಕ್ಕೆ ಹೇಳಿದ್ದರು.

ಡೆಲ್ಲಿ ಆಟಗಾರರಿಗೆ ಅಭ್ಯಾಸದ ವೇಳೆ ಬೌಲ್ ಮಾಡುತ್ತಿದ್ದ ಸೈನಿ, ಹಲವರ ವಿರೋಧದ ನಡುವೆಯೂ ಕೂಡ ಡೆಲ್ಲಿ ತಂಡದ ಅಧಿಕೃತ ಆಟಗಾರನಾಗಿ ಆಯ್ಕೆಯಾಗಿದ್ದರು. 15 ನಿಮಿಷ ಸೈನಿ ಬೌಲಿಂಗ್ ನೋಡಿದ್ದ ಗಂಭೀರ್ ನಿನಗೆ ಬಹಳ ಒಳ್ಳೆಯ ಟ್ಯಾಲೆಂಟ್ ಇದೆ ಎಂದು ಹೇಳಿದ್ದರು. ಜೊತೆಗೆ ಅವರನ್ನು ರಣಜಿ ಟ್ರೋಫಿಗೆ ಆಯ್ಕೆ ಮಾಡುವಂತೆ ಡೆಲ್ಲಿ ಆಯ್ಕೆಗಾರರ ಬಳಿ ಜಗಳವಾಡಿ ಗಂಭೀರ್ ಸೈನಿಯನ್ನು ರಣಜಿ ಟ್ರೋಫಿ ಆಡುವಂತೆ ಮಾಡಿದ್ದರು.

ಈ ವೇಳೆ ರಣಜಿ ಟ್ರೋಫಿಯ ಸೆಮಿಫೈನಲ್ ಅನ್ನು ಡೆಲ್ಲಿ ತಂಡ ಪಶ್ಚಿಮಾ ಬಂಗಾಳದ ವಿರುದ್ಧ ಆಡಿತ್ತು. ಆ ಪಂದ್ಯದಲ್ಲಿ ಸೈನಿ 140 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದರು. ಅಂದು ಸೈನಿ ಬಾಲಿಗೆ ಬ್ಯಾಟ್ ಕೊಡಲು ಬಂಗಾಳದ ಬ್ಯಾಟ್ಸ್ ಮ್ಯಾನ್‍ಗಳು ಸುಸ್ತಾಗಿದ್ದರು. ಇದಾದ ನಂತರ 2017ರ ಡಿಸೆಂಬರ್ ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಆರಂಭವಾಗಿತ್ತು. ಅಲ್ಲಿಯೂ ಕೂಡ ನೆಟ್ಸ್ ಅಭ್ಯಾಸದ ವೇಳೆ ಭಾರತದ ಬ್ಯಾಟ್ಸ್ ಮ್ಯಾನ್‍ಗಳಿಗೆ ಸೈನಿ ಬೌಲ್ ಮಾಡಿ ಸೈ ಎನಿಸಿಕೊಂಡಿದ್ದರು.

ದ್ರಾವಿಡ್ ಗರಡಿಯ ಹುಡುಗ
ಈ ವೇಳೆಗಾಗಲೇ ಭಾರತ ಕ್ರಿಕೆಟ್‍ನಲ್ಲಿ ಸೈನಿ ಒಂದು ಮಟ್ಟದ ಹೆಸರು ಮಾಡಿದ್ದರು. ಇದೇ ವೇಳೆಗೆ ಸೈನಿ ಭಾರತ-ಎ ತಂಡಕ್ಕೆ ಆಯ್ಕೆಯಾಗಿದ್ದರು. 2017ರಲ್ಲಿ ಭಾರತ-ಎ ತಂಡ ದಕ್ಷಿಣ ಆಫ್ರಿಕಾಗೆ ಟೂರ್ ಹೋಗಿತ್ತು. ಅಂದು ಭಾರತ-ಎ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಸೈನಿಗೆ ಉತ್ತಮವಾಗಿ ತರಬೇತಿ ನೀಡಿದ್ದರು. ಕೆಲವು ಅಮೂಲ್ಯವಾದ ಬೌಲಿಂಗ್ ಸಲಹೆಗಳನ್ನು ಕೊಟ್ಟಿದ್ದರು.

ನಂತರ 2017ರ ಐಪಿಎಲ್‍ನಲ್ಲಿ ಸೈನಿಯವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ 10 ಲಕ್ಷ ಕೊಟ್ಟ ಖರೀದಿ ಮಾಡಿತ್ತು. ಇದಾದ ನಂತರ 2018ರಲ್ಲಿ ಆರ್‍ಸಿಬಿ ಸೈನಿಯವರಿಗೆ ಬರೋಬ್ಬರಿ ಮೂರು ಕೋಟಿ ಕೊಟ್ಟು ಕೊಂಡುಕೊಂಡಿತ್ತು. 2019 ಡಿಸೆಂಬರ್ 22 ರಂದು ವೆಸ್ಟ್ ಇಂಡೀಸ್ ಪರ ಬೌಲಿಂಗ್ ಮಾಡುವ ಮೂಲಕ ಸೈನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ಈಗ ಅದೇ ಸೈನಿ ನಿನ್ನೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪರ ಸೂಪರ್ ಓವರಿನಲ್ಲಿ ಬೌಲ್ ಮಾಡಿ ಕೇವಲ 7 ರನ್ ನೀಡಿದ್ದಾರೆ.

Advertisement
Advertisement