ದೇವಾಲಯದ ಸ್ನಾನಗೃಹದಲ್ಲಿ ಇಬ್ಬರು ಹುಡುಗಿಯರ ಮೃತದೇಹ ಪತ್ತೆ

1 Min Read

ಗಾಂಧೀನಗರ: ಗುಜರಾತ್‌ನ ದೇವಾಲಯವೊಂದರ ಸ್ನಾನಗೃಹದಲ್ಲಿ ಇಬ್ಬರು ಹುಡುಗಿಯರು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಸೂರತ್‌ನ ಸ್ವಾಮಿನಾರಾಯಣ ದೇವಾಲಯ ಸಂಕೀರ್ಣದ ಸ್ನಾನಗೃಹದೊಳಗೆ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಶವಗಳು ಪತ್ತೆಯಾಗಿದೆ. ವಿಷಕಾರಿ ಔಷಧಗಳ ಚುಚ್ಚುಮದ್ದು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಇಬ್ಬರು ಹುಡುಗಿಯರು ಕಾಲೇಜಿಗೆ ಮನೆಯಿಂದ ಹೊರಟಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಹಿಂತಿರುಗಲಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದ ನಂತರ ಹುಡುಕಾಟ ಆರಂಭಿಸಲಾಯಿತು. ಅವರ ಮೊಬೈಲ್ ಫೋನ್‌ಗಳ ಲೊಕೇಷನ್‌ ಆಧರಿಸಿ, ದೇವಾಲಯ ಸಂಕೀರ್ಣದಲ್ಲಿ ಕೊನೆಯದಾಗಿ ಇದ್ದ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿದರು. ಶನಿವಾರವೂ ಹುಡುಕಾಟ ಮುಂದುವರಿದಾಗ ಆವರಣದಲ್ಲಿ ಅವರ ಸ್ಕೂಟರ್‌ಗಳು ನಿಂತಿರುವುದು ಕಂಡುಬಂದಿದೆ.

ದೇವಾಲಯ ಸಂಕೀರ್ಣದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಹುಡುಗಿಯರು ಸ್ನಾನಗೃಹದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ, ಸ್ನಾನಗೃಹವು ಒಳಗಿನಿಂದ ಲಾಕ್ ಆಗಿತ್ತು. ಅದನ್ನು ಒಡೆದು ಒಳನುಗ್ಗಿದಾಗ, ಹುಡುಗಿಯರು ಸತ್ತಿರುವುದು ಕಂಡುಬಂದಿದೆ. ಅವರ ದೇಹದ ಬಳಿ ಬಿದ್ದಿದ್ದ ಒಂದು ಸಿರಿಂಜ್ ಮತ್ತು ಮೂರು ಬಾಟಲಿ ವಿಷಕಾರಿ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹುಡುಗಿಯರು ಎಐ ಪ್ಲಾಟ್‌ಫಾರ್ಮ್‌ನಲ್ಲಿ ‘ಹೌ ಟು ಕಮಿಟ್ ಸೂಸೈಡ್’ ಅಂತ ಸರ್ಚ್‌ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಸಿರಿಂಜ್, ಮಾದಕ ವಸ್ತುಗಳ ಬಾಟಲಿಗಳು ಮತ್ತು ಹುಡುಗಿಯರ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ದಿಂಡೋಲಿ ಠಾಣೆಯ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪರೀಕ್ಷೆ ಪೂರ್ಣಗೊಂಡ ನಂತರ ಸಾವಿಗೆ ನಿಖರವಾದ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article