ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – 15 ಸಾವಿರ ಮಂದಿಗೆ ಇನ್ನೂ ಪಾವತಿಯಾಗಿಲ್ಲ ಸಂಬಳ

Public TV
1 Min Read

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಕನಿಷ್ಠ 15 ಸಾವಿರ ಸರ್ಕಾರಿ ನೌಕರರಿಗೆ ಇನ್ನೂ ಮಾಸಿಕ ವೇತನ (Monthly Salary) ಪಾವತಿಯಾಗಿಲ್ಲ ಎಂದು ವರದಿಯಾಗಿದೆ.

ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಸಂಬಳ ಪಾವತಿಯಾಗುತ್ತಿತ್ತು. ಆದರೆ ಅರ್ಧ ತಿಂಗಳು ಕಳೆದರೂ ವೇತನ ಪಾವತಿಯಾಗಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರಾಜ್ಯ ಸಾರಿಗೆ ಇಲಾಖೆ, ವೈದ್ಯಕೀಯ ಕಾಲೇಜುಗಳು, ನೀರು ನಿರ್ವಹಣೆ, ಅರಣ್ಯ ಇಲಾಖೆಯ ಸಾವಿರಾರು ಸರ್ಕಾರಿ ನೌಕರರಿಗೆ ಇನ್ನೂ ಸಂಬಳ ಪಾವತಿಯಾಗಿಲ್ಲ. 15 ಸಾವಿರ ಸಿಬ್ಬಂದಿ ಪೈಕಿ ಹಿಮಾಚಲ ಪ್ರದೇಶ ಸಾರಿಗೆಯೊಂದರಲ್ಲೇ 13 ಸಾವಿರ ಸಿಬ್ಬಂದಿಗೆ ಸಂಬಳ ಪಾವತಿಸಬೇಕಿದೆ.  ಇದನ್ನೂ ಓದಿ: ಬರಿದಾಗುತ್ತಿದೆ ಕಬಿನಿ ಒಡಲು: ಮೈಸೂರು, ಬೆಂಗ್ಳೂರಿಗೆ ಶುರುವಾಗಲಿದೆ ಕುಡಿಯುವ ನೀರಿನ ಸಮಸ್ಯೆ

ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಭರಪೂರ ಭರವಸೆಗಳನ್ನು ಪ್ರಕಟಿಸಿತ್ತು. ಈ ಭರವಸೆಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆರ್ಥಿಕ ಸಮಸ್ಯೆಯಲ್ಲಿರುವ ಸಿಎಂ ಸುಖವಿಂದರ್ ಸಿಂಗ್ ಸುಖು (Sukhvinder Singh Sukhu) ನೇತೃತ್ವದ ಸರ್ಕಾರ 1,000 ಕೋಟಿ ರೂಪಾಯಿಗಳ ಓವರ್‌ಡ್ರಾಫ್ಟ್ ಪಡೆಯಲು ಮುಂದಾಗಿದೆ. ಇದಕ್ಕಾಗಿ 800 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.

 

ಬಿಜೆಪಿ ಕಿಡಿ: ಹಿಮಾಚಲದ ಸುಖು ಸರ್ಕಾರವು ಆರ್ಥಿಕವಾಗಿ ತತ್ತರಿಸಲಾರಂಭಿಸಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ, ರಾಜ್ಯದ 15,000 ಕ್ಕೂ ಹೆಚ್ಚು ಉದ್ಯೋಗಿಗಳು ಮೇ ತಿಂಗಳ ಸಂಬಳವನ್ನು ಪಡೆಯಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಹೆಚ್ಚಿನ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ ಮೊದಲ ದಿನವೇ ಸಂಬಳವನ್ನು ನೀಡಲಾಗುತ್ತದೆ. ಮುಂದೆ ಕರ್ನಾಟಕದಲ್ಲೂ ಇದೇ ರೀತಿ ಆಗಲಿದೆ ಎಂದು ಬರೆದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವೀಯ ಹಿಂದಿಯಲ್ಲಿ ಟ್ವೀಟ್ ಮಾಡಿ ಸರ್ಕಾರವನ್ನು ಕುಟುಕಿದ್ದಾರೆ.

Share This Article