ಶಾಸಕ ಶಿವನಗೌಡ ನಾಯಕ್ ವಿರುದ್ಧ 100% ಕಮಿಷನ್ ಆರೋಪ

Public TV
2 Min Read

ರಾಯಚೂರು: ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪವಿದೆ. ಆದರೆ ರಾಯಚೂರಿನ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಮೇಲೆ ಶೇ.100 ರಷ್ಟು ಕಮಿಷನ್ ಆರೋಪ ಕೇಳಿಬಂದಿದೆ. ರಸ್ತೆ ಕಾಮಗಾರಿಯನ್ನೇ ನಡೆಸದೆ ಕೋಟ್ಯಂತರ ರೂ. ಬಿಲ್ ಸಂಪೂರ್ಣವಾಗಿ ಎತ್ತಿರುವ ಬಗ್ಗೆ ದಾಖಲೆ ಸಹಿತ ಹೋರಾಟಗಾರರು ಭ್ರಷ್ಟಾಚಾರ ಬಯಲಿಗೆಳೆದಿದ್ದಾರೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮಾರು 20 ಕೋಟಿ ರೂ. ಕಾಮಗಾರಿಯನ್ನು ಒಂದಿಂಚೂ ಕೆಲಸ ಮಾಡದೆ ಸಂಪೂರ್ಣ ಬಿಲ್ ಎತ್ತಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಇಲಾಖೆ ದಾಖಲೆ ಸೃಷ್ಟಿಸಿದ್ದಾರೆ. ವಾಸ್ತವವಾಗಿ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಇದಕ್ಕೆಲ್ಲಾ ದೇವದುರ್ಗ ಬಿಜೆಪಿ ಶಾಸಕ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವನಗೌಡ ನಾಯಕ್ ಮತ್ತು ಲೋಕೋಪಯೋಗಿ ಇಲಾಖೆಯ ಇಇ ಚನ್ನಬಸಪ್ಪ ಮೆಕಾಲೆ ಕಾರಣ ಎಂದು ದಾಖಲೆ ಸಹಿತ ಆರೋಪಗಳು ಕೇಳಿ ಬಂದಿವೆ. ಕಾಮಗಾರಿ ನಡೆಸದೇ ಬಿಲ್ ಎತ್ತಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲದಕಲ್ ಗ್ರಾಮದಿಂದ ಮುಷ್ಟೂರುವರೆಗಿನ ಕಾಮಗಾರಿಗಳನ್ನು ವಿವಿಧ ಗುತ್ತಿಗೆದಾರರಿಗೆ ನೀಡಲಾಗಿದ್ದು ಒಂದೂ ಕಾಮಗಾರಿಯನ್ನು ಮಾಡದೆ ಬಿಲ್ ಎತ್ತಲಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡ ಯೋಜನೆಯಡಿಯ ಕಾಮಗಾರಿ ಅನುದಾನ ದುರ್ಬಳಕೆ ಮಾಡಲಾಗಿದೆ. ಟೆಂಡರ್ ಕರೆದ ತಿಂಗಳಲ್ಲೇ ಕಾಮಗಾರಿ ಮುಗಿದಿದೆ ಎಂದು ಬಿಲ್ ಎತ್ತಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬುಡ್ಡನಗೌಡ ದಾಖಲೆ ಸಹಿತ ಆರೋಪಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ – ಮೋದಿ ಶುಭಹಾರೈಕೆ

ಹದಗೆಟ್ಟ ರಸ್ತೆಯಲ್ಲೇ ಅಧಿಕಾರಿಗಳು ಹಾಗೂ ಶಾಸಕರಿಗೆ ಹಿಡಿಶಾಪ ಹಾಕುತ್ತಾ ದೇವದುರ್ಗದ ಜನರು ಕಷ್ಟಪಟ್ಟು ಓಡಾಡುತ್ತಿದ್ದಾರೆ. ಶಾಸಕರ ಬಗ್ಗೆ ಹೆಚ್ಚು ಮಾತನಾಡಿದರೆ, ಪ್ರಶ್ನೆ ಕೇಳಿದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಸರ್ಕಾರ ರಸ್ತೆ ಕಾಮಗಾರಿ ಮಾಡಲು ನೀಡಿದ ಹಣವನ್ನು ಇವರೇ ಜೇಬಿಗೆ ಇಳಿಸಿಕೊಂಡರೆ ಸಾಮಾನ್ಯ ಜನ ಓಡಾಡುವುದು ಎಲ್ಲಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಕಾಮಗಾರಿ ನಡೆಯದೇ ಬಿಲ್ ಎತ್ತಿದ್ದಕ್ಕೆ ಮಲದಕಲ್, ರಾಮದುರ್ಗ, ಆಲ್ದರ್ತಿ, ಗೆಜ್ಜೆಭಾವಿ, ಮುಷ್ಟೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ಕೊಲೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ: ಹೆಚ್.ಡಿ. ರೇವಣ್ಣ

ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರೇ ಶಾಸಕರಾಗಿರುವ ಕ್ಷೇತ್ರದ ಮಹಾ ಕರ್ಮಕಾಂಡ ಇದು. ಕೆಲ ದಿನಗಳ ಹಿಂದೆ ತಮ್ಮನ್ನು ಕೇಳದೆ ಎನ್‌ಆರ್‌ಬಿಸಿ ಕಾಮಗಾರಿ ಬಿಲ್ ಮಾಡಿದ್ದ ಕಾರಣಕ್ಕೆ ಮುಖ್ಯ ಇಂಜಿನಿಯರ್‌ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ ಶಿವನಗೌಡ ನಾಯಕ್ ಈಗ ಮೌನಕ್ಕೆ ಶರಣಾಗಿದ್ದಾರೆ. ಕಾಮಗಾರಿಯನ್ನೇ ಮಾಡದೆ ಅನುದಾನ ನುಂಗಿ ನೀರು ಕುಡಿದವರ ವಿರುದ್ಧ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *