ಸಿಎಂ ಬದಲಾವಣೆ ವದಂತಿ – ಬಿಎಸ್‍ವೈ ಬಣ ಹೇಳೋದು ಏನು? ರೇಸ್‍ನಲ್ಲಿ ಯಾರಿದ್ದಾರೆ?

Public TV
2 Min Read

ಬೆಂಗಳೂರು: ನಾಯಕತ್ವ ಬದಲಾವಣೆಗೆ ಒಂದು ಬಣ ಯತ್ನಿಸುತ್ತಿರೋ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತರ ಜೊತೆ ಸಭೆ ನಡೆಸಿದ್ದಾರೆ. ವಿರೋಧಿ ಬಣಕ್ಕೆ ಸಿಎಂ ಆಪ್ತರು ಸಂದೇಶ ಕೂಡ ರವಾನಿಸಿದ್ದಾರೆ.

ಕೆಲವೊಂದಿಷ್ಟು ಜನ ದೆಹಲಿಯಲ್ಲಿ ಕೂತು ಆಟವಾಡುತ್ತಿದ್ದಾರೆ. ಅವರು ಚುನಾವಣೆ ಗೆಲ್ಲಲು ಆಗದವರು ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಕೋವಿಡ್ ಕಾಲದಲ್ಲಿ ಇಂಥಾ ಕೆಲಸ ಮಾಡಿದವರಿಗೆ ಜನ ಪಾಠ ಕಲಿಸ್ತಾರೆ ಎಂದು ಎಚ್ಚರಿಸಿದ್ದಾರೆ. ನಾನು ಪ್ರಹ್ಲಾದ್ ಜೋಷಿ ಹತ್ತಿರ ಮಾತಾಡಿದ್ದೇನೆ. ಅವರು ರಾಜ್ಯ ರಾಜಕಾರಣಕ್ಕೆ ಬರಲ್ಲ ಅಂದಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ನಮ್ಮ ಪಕ್ಷದ ನಾಯಕರಲ್ಲಿ ಯಾರಾದ್ರೂ ಮುಂದಿನ ಸಿಎಂ ಆಗ್ತೀವಿ ಅಂತ ಹೊಸ ಬಟ್ಟೆ ಹೊಲಿಸಿದ್ರೆ, ಅದರ ಆಸೆ ಬಿಟ್ಟು ಬಿಡಿ ಎಂದು ಎಸ್‍ಆರ್ ವಿಶ್ವನಾಥ್ ಗುಡುಗಿದ್ದಾರೆ. ಇನ್ನೆರಡು ವರ್ಷವೂ ಯಡಿಯೂರಪ್ಪನವ್ರೇ ಸಿಎಂ. ಮುಂದಿನ ಚುನಾವಣೆ ಕೂಡಾ ಅವರ ನೇತೃತ್ವದಲ್ಲೇ ಎದುರಿಸ್ತೇವೆ. ಕೆಲವರು ದೆಹಲಿಗೆ ಹೋದಾಕ್ಷಣ ಸಿಎಂ ಬದಲಾಗಲ್ಲ ಎಂದು ಬಿಎಸ್‍ವೈ ವಿರೋಧಿ ಟೀಂಗೆ ಗುದ್ದು ನೀಡಿದ್ದಾರೆ. ಇದನ್ನೂ ಓದಿ – ಸಿಎಂ ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?


ಮಾಡಾಳ್ ವಿರೂಪಾಕ್ಷಪ್ಪ ಮಾತಾಡಿ, ಸಿಎಂ ಬದಲು ಮಾಡೋಕೆ ಬಿಎಸ್‍ವೈ ಏನು ತಪ್ಪು ಮಾಡಿದ್ದಾರೆ. ಪಕ್ಷ ಅಂದ್ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತೆ ಎಂದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಶಾಸಕ ಪ್ರೀತಂಗೌಡ, ನಾನು ರಕ್ತದಲ್ಲಿ ಬರೆದುಕೊಡ್ತೇನೆ. ಯಡಿಯೂರಪ್ಪ ಸಿಎಂ ಆಗಿ ಪೂರ್ಣಾವಧಿ ಪೂರೈಸ್ತಾರೆ. 40 ಜನ ಡೆಲ್ಲಿಗೆ ಹೋದ್ರೂ ಏನು ಆಗಲ್ಲ ಎಂದು ಗುಡುಗಿದ್ದಾರೆ. ಮುಂದೊಂದು ದಿನ ವಿಜಯೇಂದ್ರ ಸಿಎಂ ಕೂಡ ಆಗ್ತಾರೆ. ನಾವೆಲ್ಲಾ ಅವರ ಪರ ಎಂದು ಪ್ರೀತಂ ಗೌಡ ಸ್ಪಷ್ಟಪಡಿಸಿದ್ದಾರೆ. ಸಚಿವರಾದ ಗೋಪಾಲಯ್ಯ, ಬಿಸಿ ಪಾಟೀಲ್ ಕೂಡ ಬಿಎಸ್‍ವೈಗೆ ಜೈ ಎಂದಿದ್ದಾರೆ.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ 7 ಮಂದಿ ಉತ್ತರಾಧಿಕಾರಿಗಳ ಹೆಸರುಗಳು ಕೇಳಿಬರುತ್ತಿವೆ. ಬಿಎಸ್‍ವೈ ನಂತರ ಈ 7 ನಾಯಕರಲ್ಲಿ ಇಬ್ಬರಿಗೆ ಅದೃಷ್ಟ ಖುಲಾಯಿಸಬಹುದು ಎನ್ನಲಾಗಿದೆ.

ಸಿಎಂ ರೇಸ್‍ನಲ್ಲಿ ಯಾರಿದ್ದಾರೆ ?
ನಂ. 1 – ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ನಂ. 2  – ಅರವಿಂದ ಬೆಲ್ಲದ್, ಶಾಸಕ
ನಂ. 3 – ಶಿವಕುಮಾರ್ ಉದಾಸಿ, ಹಾವೇರಿ ಸಂಸದ
ನಂ. 4 – ಬಸವರಾಜ್ ಬೊಮ್ಮಾಯಿ, ಸಚಿವ
ನಂ. 5 – ಗೋವಿಂದ ಕಾರಜೋಳ, ಡಿಸಿಎಂ
ನಂ. 6 – ಅಶ್ವಥ್ ನಾರಾಯಣ್, ಡಿಸಿಎಂ
ನಂ. 7 – ಮುರುಗೇಶ್ ನಿರಾಣಿ, ಸಚಿವ

Share This Article
Leave a Comment

Leave a Reply

Your email address will not be published. Required fields are marked *