ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ

Public TV
2 Min Read

– ಆರ್‌ಎಸ್‌ಎಸ್‌ ನಾಯಕರ ಮಂದೆ ಸಿಎಂ ಚಾರ್ಜ್‍ಶೀಟ್
– ನಾನು ಸಂಘದ ಶಿಸ್ತಿನ ಕಾರ್ಯಕರ್ತ

ಬೆಂಗಳೂರು: ಇದೇ ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ನಾನು ರಾಜೀನಾಮೆ ಸಿದ್ಧ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ವಿಚಾರ ಹಲವು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಹೀಗಿದ್ದರೂ ಈ ಬಗ್ಗೆ ಬಹಳ ಗಂಭೀರವಾದ ಹೇಳಿಕೆ ನೀಡದೇ ಇದ್ದ ಸಿಎಂ ಇಂದು ಕರ್ನಾಟಕದಲ್ಲೂ ಪರ್ಯಾಯ ನಾಯಕರಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್‍ಗೆ ವಿಶ್ವಾಸ ಇರುತ್ತೋ ಅಲ್ಲಿಯವರೆಗೆ ಸಿಎಂ ಆಗಿ ಇರುತ್ತೇನೆ ಎಂದು ಹೇಳಿ ರಾಜೀನಾಮೆ ಸಿದ್ಧ ಎಂಬ ಸಂದೇಶವನ್ನು ನೇರವಾಗಿಯೇ ಕಳುಹಿಸಿದ್ದಾರೆ.

ಸಿಎಂ ಇಂದು ಮಾಧ್ಯಮಗಳಿಗೆ ಈ ಹೇಳಿಕೆ ನೀಡಿದ್ದರೂ ಆರ್‌ಎಸ್‌ಎಸ್‌ ನಾಯಕರ ಮುಂದೆ ಈಗಾಗಲೇ ಚಾರ್ಜ್‍ಶೀಟ್ ಹಾಕಿ ಹಲವು ವಿಚಾರವನ್ನು ಪ್ರಸ್ತಾಪ ಮಾಡಿ ರಾಜೀನಾಮೆಗೆ ಸಿದ್ಧ ಎಂಬುದನ್ನು ಹೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.


ಬಿಎಸ್‍ವೈ ಚಾರ್ಜ್‍ಶೀಟ್ ಏನು?
ನಾಯಕತ್ವ ಬದಲಾವಣೆ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ದಿನ ಮಾತನಾಡುವುದು ನನಗೆ ಮುಜುಗರ ಅಲ್ಲವಾ? ನೋಟಿಸ್ ಕೊಟ್ಟು ಸುಮ್ಮನಾದರೆ ಹೊರತು ಬೇರೆ ಏನ್ ಕ್ರಮ ಕೈಗೊಂಡಿದ್ದಾರೆ? ಈಶ್ವರಪ್ಪ ರಾಜ್ಯಪಾಲರಿಗೆ ಹೋಗಿ ದೂರು ಕೊಟ್ಟಿದ್ದು ಏಕೆ? ನಾನು ಒಪ್ಪಿಗೆ ಕೊಟ್ಟ ಅನುದಾನ ಇಲ್ಲಿ ತನಕ ಬಿಡುಗಡೆ ಆಗಿಲ್ಲ. ನಾನು ಸಿಎಂ ಆಗಿ ಅಧಿಕಾರ ಚಲಾಯಿಸಿ ರಬ್ ಮಾಡಬಹುದಿತ್ತು ಸುಮ್ಮನಿದ್ದೇನೆ. ಇದನ್ನೂ ಓದಿ: ಸಿಎಂ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ಈಶ್ವರಪ್ಪ ದೂರು

ಆ ಯೋಗೇಶ್ವರ್ ಯಾರು? ಈಗ ಬಂದವರ ಜೊತೆ ನಮ್ಮ ಪಕ್ಷದ ಕೆಲವರು ಸೇರಿಕೊಂಡು ಮಾತನಾಡುತ್ತಾರೆ. ಯೋಗೇಶ್ವರ್ ಬಾಯಿ ಮುಚ್ಚಿಸಲು ಏನು ಕ್ರಮಕೈಗೊಂಡಿಲ್ಲ ಏಕೆ? ಹೋಗ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೊಂಕು ಮಾತಾಡಿ ರಾಜ್ಯವನ್ನು ವಿಜಯನಗರದ ಪತನಕ್ಕೆ ಹೋಲಿಸುವುದು ಏಕೆ? ಇದನ್ನೂ ಓದಿ: ಬಿಎಸ್‍ವೈ ವಿರುದ್ಧ ಯೋಗೇಶ್ವರ್ ಸಿಟ್ಟಿಗೆ ಕಾರಣವೇನು..?

ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ನಾಳೆಯೇ ರಾಜೀನಾಮೆ ಕೊಡು ಅಂದರೆ ಕೊಡುತ್ತೇನೆ. ಆದರೆ ನನಗೆ ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಅದರ ಅರಿವು ನನಗಿದೆ. ಸಂಘದ ಶಿಸ್ತಿನ ಕಾರ್ಯಕರ್ತ ನಾನು, ಸಂಘ ಹೇಳಿದಂತೆ ಕೇಳುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *