ಬೇಜಾರಿನಲ್ಲಿದ್ದ, ಆತನಲ್ಲಿ ಅಂದು ಹೆಚ್ಚಿನ ಆತ್ಮವಿಶ್ವಾಸ ನನಗೆ ಕಾಣಿಸಲಿಲ್ಲ – ಸುಶಾಂತ್ ಬಗ್ಗೆ ಅಖ್ತರ್ ನುಡಿ

Public TV
2 Min Read

ಮುಂಬೈ: ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಭೇಟಿಯಾದಾಗ ಮಾತನಾಡಿಸದೇ ಹೋಗಿದ್ದಕ್ಕೆ ನನಗೆ ವಿಷಾದವಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರು ಹೇಳಿದ್ದಾರೆ.

ಕಳೆದ ಜೂನ್ 14ರಂದು ತಮ್ಮ ನಿವಾಸದಲ್ಲೇ ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ತಾನೇ ಬಾಲಿವುಡ್‍ನಲ್ಲಿ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದ ಸುಶಾಂತ್ ತಮ್ಮ 34ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ್ದಾರೆ. ಯುವ ನಟನ ಸಾವಿಗೆ ಇಡೀ ಭಾರತ ಚಿತ್ರರಂಗವೇ ಮರುಗಿತ್ತು. ಹಲವಾರು ಕ್ರಿಕೆಟಿಗರು ಕೂಡ ಸುಶಾಂತ್ ಸಾವಿಗೆ ಸಂತಾಪ ಸೂಚಿಸಿದ್ದರು.

ಈಗ ಸುಶಾಂತ್ ಅವರ ವಿಚಾರವಾಗಿ ತನ್ನ ಯುಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿರುವ ಅಖ್ತರ್, 2016ರಲ್ಲಿ ನಾನು ಭಾರತಕ್ಕೆ ಹೋಗಿದ್ದಾಗ ಮುಂಬೈನ ಆಲಿವ್ ಹೋಟೆಲ್ ಅಲ್ಲಿ ಆತನನ್ನು ನೋಡಿದ್ದೆ. ಆಗ ಆತ ಯಾವುದೋ ಬೇಜಾರಿನಲ್ಲಿ ಇದ್ದ ಎನಿಸುತ್ತದೆ. ಆತನನಲ್ಲಿ ಅಂದು ಹೆಚ್ಚಿನ ಆತ್ಮವಿಶ್ವಾಸ ನನಗೆ ಕಾಣಿಸಿಲಿಲ್ಲ. ಎಂಎಸ್ ಧೋನಿ ಅವರ ಬಯೋಪಿಕ್ ಅಲ್ಲಿ ಈತನೇ ನಟಿಸುತ್ತಿರುವುದು ಎಂದು ನನ್ನ ಸ್ನೇಹಿತ ನನಗೆ ಹೇಳಿದ ಎಂದು ಅಖ್ತರ್ ತಿಳಿಸಿದ್ದಾರೆ.

ಅಂದು ನನಗೆ ಆತನ ಬಗ್ಗೆ ಏನೂ ಅನಿಸಲಿಲ್ಲ. ಆದರೆ ಈಗ ಆತನ ನಟನೆಯನ್ನು ನೋಡಿದ್ದೇನೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಾಲಿವುಡ್‍ಗೆ ಬಂದು ಒಳ್ಳೆಯ ಸಿನಿಮಾಗಳನ್ನು ಆತ ಮಾಡಿದ್ದಾನೆ. ಅವನ ಸಿನಿಮಾಗಳು ಸಕ್ಸಸ್ ಆಗುತ್ತಿರುವ ಸಮಯದಲ್ಲಿ ಆತ ಹೀಗೆ ಮಾಡಿಕೊಳ್ಳಬಾರದಿತ್ತು. ಅಂದು ನಾನು ಆತನನ್ನು ಮಾತನಾಡಿಸಬೇಕಿತ್ತು. ಅಂದು ಆತನನ್ನು ಮಾತನಾಡಿಸದಕ್ಕೆ ಇಂದು ನನಗೆ ವಿಷಾದವಿದೆ ಎಂದು ಶೋಯೆಬ್ ವಿಡಿಯೋದಲ್ಲಿ ಹೇಳಿದ್ದಾರೆ.

ಎಲ್ಲ ಸಮಸ್ಯೆಗಳಿಗೂ ಸಾಯುವುದೊಂದೆ ಪರಿಹಾರವಲ್ಲ. ನಿಮಗೆ ಆ ಮಟ್ಟದ ಸಮಸ್ಯೆ ಏನಾದರೂ ಬಂದರೆ ನಿಮ್ಮವರ ಜೊತೆ ಮತ್ತು ಕುಟುಂಬದವರ ಜೊತೆ ಕುಳಿತು ಚರ್ಚಿಸಬೇಕು. ಅದನ್ನು ಬಿಟ್ಟು ಪ್ರಾಣ ಕಳೆದುಕೊಳ್ಳಬಾರದು. ಹಾಗೇ ನೋಡಿದರೆ ನಟಿ ದೀಪಿಕಾ ಪಡುಕೋಣೆ ಕೂಡ ಸ್ವಲ್ಪ ದಿನ ಖಿನ್ನತೆಗೆ ಒಳಗಾಗಿದ್ದರು. ಆದರೆ ಅವರು ಅದನ್ನು ಕೆಲವರ ಸಹಾಯ ಪಡೆದು ಬಗೆಹರಿಸಿಕೊಂಡರು. ಹಾಗೇ ಸುಶಾಂತ್‍ಗೆ ಕೂಡ ಯಾರದರೂ ಸಹಾಯ ಮಾಡಬೇಕಿತ್ತು ಎಂದು ಶೋಯಬ್ ಅಭಿಪ್ರಾಯ ಪಟ್ಟಿದ್ದಾರೆ.

ಜೂನ್ 14ರಂದು ಫ್ಯಾನಿಗೆ ನೇಣು ಹಾಕಿಕೊಂಡು ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಜೂನ್ 15ರ ಸಂಜೆ ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆದಿತ್ತು. ಶ್ರದ್ಧಾ ಕಪೂರ್, ಕೃತಿ ಸನನ್, ರಿಯಾ ಚಕ್ರವರ್ತಿ, ವಿವೇಕ್ ಒಬೇರಾಯ್, ರಾಜಕುಮಾರ್ ಹಿರಾಣಿ ಹಾಗೂ ಸುಶಾಂತ್ ಕುಟುಂಬದವರು ಮಾತ್ರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *