ಬಿಎಸ್‍ವೈ ರಾಜೀನಾಮೆಯಿಂದ ನಮ್ಮ ಬಲ ಕುಸಿದಿದೆ: ತಿಪ್ಪಾರೆಡ್ಡಿ

Public TV
1 Min Read

ಚಿತ್ರದುರ್ಗ: ರಾಜ್ಯದ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆಯಿಂದಾಗಿ ನಮ್ಮೆಲ್ಲರ ಬಲ ಕುಸಿದಿದೆ ಎಂದು ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಲ್ಲೆ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಎಸ್ ಯಡಿಯೂರಪ್ಪ ಬಿಜೆಪಿಯ ಆಧಾರ ಸ್ತಂಭವಿದ್ದಂತೆ. ಅವರ ರಾಜೀನಾಮೆಯಿಂದ ನಮ್ಮ ಬಲ ಕುಸಿದ ಭಾವನೆಮೂಡಿದೆ. ಅಲ್ಲದೇ ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಸರೇಳುವವರಿಲ್ಲದಾಗ ಪಕ್ಷ ಕಟ್ಟಿದ್ದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತಂದರು. ನಮ್ಮಂಥವರನ್ನು ಗೆಲ್ಲಿಸಲು ಯುವಕರಂತೆ ರಾಜ್ಯಾದ್ಯಂತ ಪ್ರವಾಸ ಮಾಡಿದರು ಎಂದರು.

224 ಕ್ಷೇತ್ರಗಳಲ್ಲಿ ಬಿಎಸ್‍ವೈ ಸುಂಟರಗಾಳಿಯಂತೆ ತಿರುಗಿದ್ದರು. ಹೀಗಾಗಿ ಅವರ ಹೋರಾಟ ಗುಣಗಳು ಪ್ರತಿಯೊಬ್ಬರ ರಾಜಕಾರಣಿಗೂ ಅಚ್ಚುಮೆಚ್ಚಾಗಿದ್ದು, ಬಿಎಸ್‍ವೈ ರಾಜೀನಾಮೆಯಿಂದ ವಿರೋಧಿಗಳಲ್ಲೂ ದುರದೃಷ್ಟ ಎಂಬ ಭಾವನೆ ಸೃಷ್ಟಿಯಾಗಿದೆ. ಯಡಿಯೂರಪ್ಪ ಕೇವಲ ವೀರಶೈವ ಮಾತ್ರವಲ್ಲದೆ ಪ್ರತಿ ಮಠಗಳಿಗೂ ನೆರವು ನೀಡಿದ್ದಾರೆ. ಬಿಎಸ್ ವೈರಂತ ಉನ್ನತ ಮಟ್ಟದ ನಾಯಕತ್ವ ನಮ್ಮ ಪಕ್ಷದಲ್ಲಿ ವಿರಳ ಎನಿಸಿದ್ದೂ, ಪಕ್ಷಾತೀತ, ಜಾತ್ಯಾತೀತ ನಾಯಕ ಬಿಎಸ್ ಯಡಿಯೂರಪ್ಪ ಎನಿಸಿದ್ದರು ಎಂದರು. ಇದನ್ನೂ ಓದಿ: ಪಕ್ಷಾತೀತವಾಗಿ ಬಿಎಸ್‍ವೈ ಲೆಜೆಂಡ್ ನಾಯಕ, ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಬೇಕು: ಹೆಬ್ಬಾಳ್ಕರ್

ಬಿಎಸ್‍ವೈ ರಾಜೀನಾಮೆ ಘೋಷಣೆ ವೇಳೆ ಗದ್ಗದಿತರಾಗಿದ್ದೂ ನೋವು ಸಹಜವಾಗಿದೆ. ಆದರೆ ಪಕ್ಷ ಬೇರೆ ಉನ್ನತ ಸ್ಥಾನ ನೀಡಿ ಗೌರವಯುತವಾಗಿ ನಡೆಸಿಕೊಳ್ಳಲಿದೆ. ಹಾಗೆಯೇ ಮುಂದಿನ ಸಿಎಂ, ಸಚಿವ ಸಂಪುಟ ಬಗ್ಗೆ ರಾಷ್ಟ್ರೀಯ ನಾಯಕರಿಂದ ತೀರ್ಮಾನವಾಗಲಿದೆ. ಈಗ ಬಿಎಸ್‍ವೈ ಭೇಟಿ ಮಾಡಲು ತೆರಳುವೆ ಎಂದರು.

ಚಿತ್ರದುರ್ಗಕ್ಕೆ ಸ್ಥಳೀಯ ಶಾಸಕರ ಕನಸು ಈಡೇರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವೇಳೆ ನಾನು ಸಚಿವ ಸ್ಥಾನದ ಬಗ್ಗೆ ಕೇಳುವುದು ಸಣ್ಣತನ ಆಗುತ್ತದೆ. ನಾವು ಪಕ್ಷದ ಆದೇಶವನ್ನು ಪಾಲಿಸುತ್ತೇವೆ. ಯಾವುದೇ ಪಕ್ಷದ್ರೋಹಿ ಚಟುವಟಿಕೆ ಮಾಡಲ್ಲವೆಂದು ಶಾಸಕ ತಿಪ್ಪಾರೆಡ್ಡಿ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *