Belgaum

ಪಕ್ಷಾತೀತವಾಗಿ ಬಿಎಸ್‍ವೈ ಲೆಜೆಂಡ್ ನಾಯಕ, ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಬೇಕು: ಹೆಬ್ಬಾಳ್ಕರ್

Published

on

Share this

ಬೆಳಗಾವಿ: ಯಡಿಯೂರಪ್ಪ ಪಕ್ಷಾತೀತವಾದ ಲೆಜೆಂಡ್ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ದು:ಖದಿಂದ ರಾಜೀನಾಮೆ ನೀಡುವ ಪ್ರಸಂಗ ಬರಬಾರದಿತ್ತು. ಆಡಳಿತದ ಮೇಲೆ ಇದರಿಂದ ಪರಿಣಾಮವಾಗುತ್ತದೆ ಎಂಬುದನ್ನು ಬಿಜೆಪಿ ಅರಿಯಬೇಕಿತ್ತು. ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಬಿಜೆಪಿಯ ಬೆಳವಣಿಗೆ ಕಾತುರದಿಂದ ನೋಡುತ್ತಿದೆ. ಯಾವುದೇ ಪಕ್ಷ ಇರಲಿ ಜನರ ಕಾಳಜಿ ಮುಖ್ಯವಾಗಬೇಕು, ರಾಜಕೀಯ ಅಲ್ಲ, ಇಂತಹ ಸಂದರ್ಭಗಳಲ್ಲಿ ಸಿಎಂ ರಾಜೀನಾಮೆ ಬೆಳವಣಿಗೆ ಅವಶ್ಯಕತೆ ಇತ್ತಾ ಎಂಬುದನ್ನು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಡಿಯೂರಪ್ಪ ಅವರಿಗೆ 50 ವರ್ಷ ರಾಜಕೀಯದಲ್ಲಿ ಅನುಭವ ಇದೆ. ಅವರು ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಾಗಿದ್ದಾರೆ. ಭಾವುಕರಾಗಿ ಯಡಿಯೂರಪ್ಪ ಭಾಷಣ ಮಾಡಿದರು. ಇಂತಹ ವ್ಯಕ್ತಿಯ ಆಡಳಿತದ ಯುಗ ಅಂತ್ಯವಾಯಿತು ಎಂದು ಆ ಕ್ಷಣದಲ್ಲಿ ನನಗೆ ಅನಿಸಿತು. ಯಡಿಯೂರಪ್ಪ ಹೋರಾಟ, ಧೈರ್ಯದ ಬಗ್ಗೆ ಅಭಿಮಾನ ಇದೆ. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಡಿಯೂರಪ್ಪಗೆ ಅವಧಿ ಪೂರ್ಣ ಮಾಡಲು ಅವಕಾಶ ಇರಬೇಕಿತ್ತು. ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ. ಯಡಿಯೂರಪ್ಪ ಪಕ್ಷಾತೀತವಾಗಿ ಲೆಜೆಂಡ್ ನಾಯಕ, ದುಃಖದಿಂದ ರಾಜೀನಾಮೆ ನೀಡಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ ಎಂದರು. ಇದನ್ನೂ ಓದಿ: ಯಡಿಯೂರಪ್ಪನವರಿಗೆ ಬಿಜೆಪಿ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ: ಸಿ.ಟಿ.ರವಿ

ರಾಜ್ಯದಲ್ಲಿ ಕೋವಿಡ್, ಪ್ರವಾಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೆಳವಣಿಗೆ ಸರಿಯಲ್ಲ. ಜನರ ಕಾಳಜಿಗಿಂತ ರಾಜಕೀಯ ಮುಖ್ಯವಾಗಿದ್ದು ಸರಿಯಲ್ಲ. ಇದರಿಂದ ಆಡಳಿತದ ಮೇಲೆ ಪರಿಣಾಮ ಆಗಲಿದೆ. ಆಡಳಿತಕ್ಕಿಂತ ಬಿಜೆಪಿಗೆ ರಾಜಕೀಯ ಮುಖ್ಯ ಎಂದು ಅನಿಸುತ್ತದೆ ಎಂದು ಬಜೆಪಿ ವಿರುದ್ಧ ಕಿಡಿಕಾರಿದರು.

ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ:
2021-2022ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕ್ಕೆ ಹೆಬ್ಬಾಳ್ಕರ್ ಹಿಂಡಲಗಾ ಗ್ರಾಮದಲ್ಲಿ ಚಾಲನೆ ನೀಡಿದರು. ಹಿಂಡಲಗಾ ಗ್ರಾಮದ ಶ್ರೀಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಈ ಕೃಷಿ ಅಭಿಯಾನವು ಸಮಗ್ರ ಕೃಷಿ ಅಭಿಯಾನದ ರಥವನ್ನು ಒಳಗೊಂಡಿದ್ದು, ಈ ರಥ ಗ್ರಾಮ-ಗ್ರಾಮಗಳಿಗೆ ತೆರಳಿ ಕೃಷಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತದೆ. ಸಮಗ್ರ ಕೃಷಿ ಅಭಿಯಾನವು ರೈತರಿಗೆ ಪೂರಕವಾಗಿದ್ದು, ಗೊಬ್ಬರ, ಬೀಜಗಳ, ಕ್ರಿಮಿನಾಶಕಗಳ ಹಾಗೂ ರೈತರ ಜಮೀನುಗಳ ವಿಮೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಈ ಸಮಗ್ರ ಕೃಷಿ ಅಭಿಯಾನ ಮೊಬೈಲ್ ಆ್ಯಪ್‍ನಲ್ಲಿಯೂ ಸಹ ಲಭ್ಯವಿದ್ದು, ಆ್ಯಪ್‍ನಲ್ಲಿ ರೈತರಿಗೆ ಅನುಕೂಲವಾಗುವಂತಹ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ತ್ವರಿತಗತಿಯಲ್ಲಿ ಸಿಗಲಿವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಬಂಪರ್ ಗಿಫ್ಟ್

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಆರ್ ಬಿ ನಾಯ್ಕರ್, ಕೃಷಿ ಅಧಿಕಾರಿ ಅರುಣ ಕಾಪಸೆ, ಸಹಾಯಕ ಕೃಷಿ ಅಧಿಕಾರಿ ಸಿ.ಎಸ್.ನಾಯ್ಕ್, ಸ್ಥಳೀಯ ಜನ ಪ್ರತಿನಿಧಿಗಳು, ಚೇತನ ಅಗಸ್ಗೆಕರ್, ರೋಹನ್ ಪಾವಸೆ, ವಿಠ್ಠಲ ದೇಸಾಯಿ, ರಾಮಚಂದ್ರ ಕುದ್ರೆಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement