ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರೆಂದು ಘೋಷಿಸಿ: ರಾಜನಾಥ್ ಸಿಂಗ್‍ಗೆ ಶಾಸಕಿ ರೂಪಾಲಿ ನಾಯ್ಕ ಮನವಿ

Public TV
2 Min Read

– ಕುಟುಂಬಕ್ಕೆ ಉದ್ಯೋಗ ನೀಡಿ

ಕಾರವಾರ: ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ತಮ್ಮ ಜಮೀನನ್ನು ನೀಡಿದ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಿ. ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಲು ಶಿಪ್ ಯಾರ್ಡ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಇಂದು ಕಾರವಾರದ ಕದಂಬಾ ನೌಕಾನೆಲೆಗೆ ಆಗಮಿಸಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ರವರಿಗೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಮನವಿ ಮಾಡಿದ್ದಾರೆ.

ಕಾರವಾರ ಮತ್ತು ಅಂಕೋಲಾ ಈ ಎರಡೂ ತಾಲೂಕಿನಲ್ಲಿ 4,604 ಕುಟುಂಬಗಳು ನೌಕಾನೆಲೆಯಲ್ಲಿ ನಿರಾಶ್ರಿತರಾಗಿದ್ದಾರೆ. ಈ ಕುಟುಂಬಗಳು ನಿರಾಶ್ರಿತವಾಗಿ 3 ದಶಕಗಳಾದರೂ ಸಮಾಜದಲ್ಲಿ ಗೌರವಯುತ ಬದುಕು ಕಂಡುಕೊಳ್ಳುವಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ಸದ್ಯ ಕೇವಲ 968 ಕುಟುಂಬಗಳಿಗೆ ಮಾತ್ರ ಉದ್ಯೋಗ ನೀಡಲಾಗಿದೆ.

ನೌಕಾನೆಲೆ ನಿರಾಶ್ರಿತರು ದೇಶಕ್ಕಾಗಿ, ದೇಶದ ರಕ್ಷಣೆಗಾಗಿ ತಮ್ಮ ಮನೆ, ಭೂಮಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಈ ಕಾರಣದಿಂದ ನಿರಾಶ್ರಿತರು ಉದ್ಯೋಗ, ಗೌರವಯುತ ಬದುಕಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಹೊಂದಿ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಯಾಗುವಂತಾಗಬೇಕು.

ಇದಕ್ಕಾಗಿ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಬೇಕು. ನಾಲ್ಕು ಸಾವಿರಕ್ಕೂ ಹೆಚ್ಚು ನಿರಾಶ್ರಿತ ಪ್ರತಿ ಕುಟುಂಬದ ಓರ್ವ ಸದಸ್ಯನಿಗೆ ಒಂದು ಉದ್ಯೋಗ ಕೊಡಬೇಕು. ಅವರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ದೊರಕಿಸಿಕೊಡುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದವರ ಬದುಕು ಹಸನಾಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕಿ ರೂಪಾಲಿ ನಾಯ್ಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ – ವೈದ್ಯರನ್ನ ತರಾಟೆ ತೆಗದುಕೊಂಡ ಶಾಸಕಿ ರೂಪಾಲಿ ನಾಯ್ಕ

ಇನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ಚತುಷ್ಪಥ ಹೆದ್ದಾರಿ, ಕದ್ರಾ, ಕೊಡಸಳ್ಳಿ ಜಲ ವಿದ್ಯುತ್ ಯೋಜನೆಗಳು ಹೀಗೆ ವಿವಿಧ ಕಾರಣಗಳಿಂದ ನಿರಾಶ್ರಿತರಾದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಸೀಬರ್ಡ್ ನೌಕಾನೆಲೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ನೌಕಾನೆಲೆಗೆ ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಇಲ್ಲಿ ಯಾವುದೆ ಕೈಗಾರಿಕೆಗಳಿಲ್ಲ. ಸ್ಥಳೀಯ ಜನತೆಗೆ ಉದ್ಯೋಗ ಕೊಡುವ ಕೈಗಾರಿಕೆಗಳೂ ಇಲ್ಲಿಲ್ಲ. ಈ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದಲ್ಲಿ ರಕ್ಷಣಾ ಇಲಾಖೆ ನೌಕಾನೆಲೆಯಲ್ಲಿ ಶಿಪ್ ಯಾರ್ಡ ಹಾಗೂ ಪೂರಕ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕಿ ರೂಪಾಲಿ ನಾಯ್ಕರವರು ರಕ್ಷಣಾ ಸಚಿವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕದಂಬ ನೌಕಾನೆಲೆಯ ವೈಮಾನಿಕ ಸಮಿಕ್ಷೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Share This Article
Leave a Comment

Leave a Reply

Your email address will not be published. Required fields are marked *