Districts
ಗಾಯಾಳುಗಳನ್ನ ಶಾಸಕರೇ ಕರೆತಂದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ

– ವೈದ್ಯರನ್ನ ತರಾಟೆ ತೆಗದುಕೊಂಡ ಶಾಸಕಿ ರೂಪಾಲಿ ನಾಯ್ಕ್
– ಬರದ 108 ಅಂಬುಲೆನ್ಸ್
– ಖಾಸಗಿ ಅಂಬುಲೆನ್ಸ್ ನಲ್ಲಿ ಗಾಯಾಳುಗಳ ರವಾನೆ
ಕಾರವಾರ: ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನ ಶಾಸಕಿ ರೂಪಾಲಿ ನಾಯ್ಕ್ ಕರೆ ತಂದರೂ ಸರ್ಕಾರಿ ಆಸ್ಪತ್ರೆ ಸಮರ್ಪಕ ಚಿಕಿತ್ಸೆ ಸಿಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.
ಇಂದು ಅಂಕೋಲಾದಿಂದ ಕಾರವಾರಕ್ಕೆ ಬರುತ್ತಿದ್ದ ಶಾಸಕರ ವಾಹನದ ಎದುರೇ ಬಿಣಗಾದ ಬಳಿ ಬೈಕ್ ಮೀನಿನ ಲಾರಿಗೆ ಡಿಕ್ಕಿ ಹೊಡೆದು ಅಪಘಾತಗೊಂಡಿತ್ತು. ಬೈಕ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ಇದನ್ನು ಗಮನಿಸಿದ ಶಾಸಕಿ 108ಕ್ಕೆ ಕರೆ ಮಾಡಿದ್ದಾರೆ. ಆದರೆ ಎಷ್ಟು ಕಾದರೂ ಅಂಬುಲೆನ್ಸ್ ಬರಲೇ ಇಲ್ಲ. ಹೀಗಾಗಿ ಖಾಸಗಿ ಅಂಬುಲೆನ್ಸ್ ತರಿಸಿ ಕಾರವಾರದ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನ ಕರೆತಂದಿದ್ದರು.
ಗಾಯಾಳುಗಳನ್ನ ಕರೆ ತಂದ ಸಂದರ್ಭದಲ್ಲಿ ವೈದ್ಯರು ಕರ್ತವ್ಯದಲ್ಲಿರಲಿಲ್ಲ. ಆಕ್ಸಿಜನ್ ಸಹ ವ್ಯವಸ್ಥೆ ಮಾಡಲಿಲ್ಲ. ಇದರಿಂದ ಕುಪಿತಗೊಂಡ ಶಾಸಕಿ ಆರ್.ಎಂ.ಓ ವೆಂಕಟೇಶ್ ರವರನ್ನು ಕರೆಸಿ ವೈದ್ಯರು ಸೇರಿದಂತೆ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು.
ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿ ನಡೆಯುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಅಪಘಾತಗಳು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಗಾಯಾಳುಗಳನ್ನ 108 ವಾಹನದಲ್ಲಿ ಸಾಗಿಸುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೊಗಿರುತ್ತೆ. ಅಪಘಾತಗೊಂಡರೆ ವ್ಯಕ್ತಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳು ಬರುವುದೇ ಇಲ್ಲ. ಬಂದರೂ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆಗಳಿಲ್ಲ. ಜೊತೆಗೆ ಹಲವು ವೈದ್ಯರು ಚಿಕಿತ್ಸೆ ನೀಡದೇ ಗೋವಾ ಅಥವಾ ಮಣಿಪಾಲಿಗೆ ಕಳುಹಿಸಿಕೊಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
