ದರ್ಶನ್ 25 ಕೋಟಿ ಲೋನ್ ಕೇಸ್‍ಗೆ ಬಿಗ್ ಟ್ವಿಸ್ಟ್ – ಆರೋಪಿ ಜೊತೆ ನಿರ್ಮಾಪಕ ಉಮಾಪತಿಗೆ ನಂಟು!

Public TV
3 Min Read

– ಯಾರಿದ್ರೂ ಬಿಡಲ್ಲ ಅಂತ ದರ್ಶನ್ ವಾರ್ನಿಂಗ್
– ಮಿತ್ರದ್ರೋಹಿ ಹುಟಕಾಟದಲ್ಲಿ ದರ್ಶನ್!!

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣ ಪೊಲೀಸರಿಗೆ ಅಷ್ಟೇನೂ ಸವಾಲು ಅನ್ನಿಸಿಲ್ಲ. ಆದರೆ ನಟ ದರ್ಶನ್ ತಮ್ಮ ಆಪ್ತ ವಲಯದಲ್ಲಿರುವ ನಂಬಿಕೆ ದ್ರೋಹಿ ಯಾರು ಅಂತ ಹುಡುಕಾಟ ಶುರು ಮಾಡಿದ್ದಾರೆ. ಮೈಸೂರಿನಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿದ ನಟ ದರ್ಶನ್, ನಿರ್ಮಾಪಕ ಉಮಾಪತಿಯತ್ತ ಬೊಟ್ಟು ಮಾಡಿದ್ದಾರೆ.

ದರ್ಶನ್ ನಿನ್ನೆ ಏಕಾಏಕಿ ಮೈಸೂರಿನ ಎನ್.ಆರ್. ಉಪವಿಭಾಗ ಪೊಲೀಸ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಹೆಸರಿನ ಆಸ್ತಿಗೆ ಸಂಬಂಧಪಟ್ಟ ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ. ಬ್ಯಾಂಕ್ ಸಾಲ ಪಡೆಯಲು ಯತ್ನಿಸಲಾಗಿದೆ. 25 ಲಕ್ಷ ರೂ. ಲಂಚ ಕೇಳಿದ್ದಾರೆ ಅಂತೆಲ್ಲ ಆರೋಪ ಕೇಳಿ ಬಂದಿದ್ದವು. ಈ ಸಂಬಂಧ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಅಲ್ಲದೆ ನಿನ್ನೆ ಪೊಲೀಸರು ಆರೋಪಿ ಅರುಣಾ ಕುಮಾರಿಯ ಹೇಳಿಕೆ ದಾಖಲಿಸಿಕೊಂಡಿದ್ದರು. ಇಂದು ಸಿಆರ್ ಪಿಸಿ 41/ಎ ಅನ್ವಯ ನೋಟಿಸ್ ನೀಡಿ ಬಿಟ್ಟು ಕಳುಹಿಸಿದ್ದಾರೆ.

ಹರ್ಷ-ಅರುಣಾ ಕುಮಾರಿ ಭೇಟಿ:
ಯಾವುದೇ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಬರಬೇಕು. ಸಾಕ್ಷ್ಯನಾಶ ಮಾಡಬಾರದು ಅಂತೆಲ್ಲ ಷರತ್ತು ವಿಧಿಸಲಾಗಿದೆ. ಆರೋಪಿ ಅರುಣಾ ಕುಮಾರಿ ಮತ್ತು ದೂರುದಾರ ಹರ್ಷ ಮೆಲಂಟಾ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಹೋಟೆಲ್ ನಲ್ಲಿ ಭೇಟಿಯಾಗಿದ್ದರು. ಅದಕ್ಕೆ ಸಂಬಂಧಪಟ್ಟ ಸಿಸಿ ಕ್ಯಾಮೆರಾ ಫೋಟೇಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ನಟ ದರ್ಶನ್ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸುಮಾರು ಒಂದು ಗಂಟೆಯಷ್ಟು ಸುದೀರ್ಘವಾಗಿ ಮಾತನಾಡಿದ ದರ್ಶನ್, ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸಂಬಂಧಿ ಧೀರಜ್ ಪ್ರಸಾದ್ ಭಾಗವಹಿಸಿದ್ದು ಅಚ್ಚರಿ ಮೂಡಿಸಿತ್ತು. ಉಳಿದಂತೆ ಸ್ನೇಹಿತರಾದ ನಾಗರಾಜ್, ಶರ್ಮಾ, ರಾಕೇಶ್ ಪಾಪಣ್ಣ, ಹರ್ಷ ಮೆಲಂಟಾ ಹಾಜರಿದ್ದರು.

ಒಂದಲ್ಲ, ಎರಡಲ್ಲ 25 ಕೋಟಿ:
ಇದೆಲ್ಲವೂ ಶುರುವಾಗಿದ್ದು ಏಪ್ರಿಲ್ 9ರಂದು. ನಿರ್ಮಾಪಕ ಉಮಾಪತಿ ಕರೆ ಮಾಡಿ, ಹರ್ಷ ಮೆಲಂಟಾ ಬ್ಯಾಂಕ್ ಲೋನ್‍ಗೆ ಅಪ್ಲೈ ಮಾಡಿದ್ದಾರೆ. ನಿಮ್ಮ ಆಸ್ತಿ ದಾಖಲೆಗಳ ಶ್ಯೂರಿಟಿ ಕೊಟ್ಟಿದ್ದಾರೆ ಅಂತ ತಿಳಿಸಿದ್ರು. ಒಂದಲ್ಲ, ಎರಡಲ್ಲ 25 ಕೋಟಿ ರೂ. ವ್ಯವಹಾರ ಅನ್ನುತ್ತಿದ್ದಂತೆಯೇ ನಾನು ಅಲರ್ಟ್ ಆದೆ. ನಾವೆಲ್ಲರೂ ಸ್ನೇಹಿತರು. ಯಾರ ಮೇಲೆ ಅನುಮಾನ ಪಡಬೇಕು ಅಂತಾನೇ ಗೊತ್ತಾಗುತ್ತಿಲ್ಲ ಎಂದು ದರ್ಶನ್ ಹೇಳಿದ್ದಾರೆ.

ಇನ್ನು ಸುದ್ದಿಗೋಷ್ಠಿ ಉದ್ದಕ್ಕೂ ನಿರ್ಮಾಪಕ ಉಮಾಪತಿ ನಡೆಯ ಬಗ್ಗೆ ದರ್ಶನ್ ಅನುಮಾನ ವ್ಯಕ್ತಪಡಿಸಿದ್ರು. ಅದಕ್ಕೆ ಪೂರಕವಾದ ಒಂದಷ್ಟು ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್, ಹರ್ಷ ಮೆಲಂಟಾ ಅವರೊಂದಿಗೆ ಅರುಣಾ ಕುಮಾರಿ ಮಾತನಾಡಿರುವ ಫೋನ್ ಕಾಲ್ ಆಡಿಯೋ, ಅರುಣಾಕುಮಾರಿ ಕಳುಹಿಸಿರುವ ತಮಗೆ ಕಳುಹಿಸಿದ ವಾಯ್ಸ್ ಮೆಸೇಜ್ ಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ರು.

ವಾಟ್ಸಪ್ ಚಾಟ್, ಆಡಿಯೋ ವೈರಲ್:
ಇನ್ನು ವಂಚನೆ ಯತ್ನ ಕಥೆಯೊಳಗಿನ ಮತ್ತೊಂದು ಉಪಕತೆಯನ್ನೂ ದರ್ಶನ್ ಜಗಜ್ಜಾಹೀರು ಮಾಡಿದ್ರು. ಆರೋಪಿ ಅರುಣಾಕುಮಾರಿ ತನ್ನ ಪುತ್ರನೊಂದಿಗೆ ಈಗ ಬೆಂಗಳೂರಿನಲ್ಲಿದ್ದಾಳೆ. ಗಂಡನಿಂದ ದೂರವಾಗಿ ಆರೇಳು ವರ್ಷಗಳಾಗಿವೆ. ಇನ್ನು ಅಚ್ಚರಿಯ ವಿಚಾರ ಏನಂದ್ರೆ, ಆಕೆಯ ಗಂಡ ಕುಮಾರ್ ಪ್ರಕರಣದ ದೂರುದಾರ ಹರ್ಷ ಮೆಲಂಟಾ ಮಾಲೀಕತ್ವದ ಹೋಟೆಲ್‍ನಲ್ಲೇ ಕೆಲಸ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿ ಮಧ್ಯ ಮಾತನಾಡಿದ ಕುಮಾರ್, ನನ್ನ ಹೆಂಡತಿಯಾಗಿದ್ದ ಅರುಣಕುಮಾರಿ ಓದಿರೋದೇ ಪಿಯುಸಿ. ಅದ್ಹೇಗೆ ಬ್ಯಾಂಕ್ ಮ್ಯಾನೇಜರ್ ಆದ್ಲೋ ಗೊತ್ತಿಲ್ಲ ಅಂತ ಮುಗ್ಧತೆ ತೋರಿಸಿದರು. ಇದೆಲ್ಲದರ ನಡುವೆ ಉಮಾಪತಿ ಮಹಿಳೆಯೊಂದಿಗೆ ಮಾಡಿರುವ ವಾಟ್ಸಪ್ ಚಾಟ್, ಆಡಿಯೋ, ಅರುಣಾ ಕುಮಾರಿ ದರ್ಶನ್ ತೋಟಕ್ಕೆ ಹೋದ ದೃಶ್ಯ ಎಲ್ಲವು ವೈರಲ್ ಆಗಿದೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಇನ್ನೊಬ್ಬರ ಭಿಕ್ಷೆಯಲ್ಲಿ ಬದುಕಬೇಕಿಲ್ಲ: ಉಮಾಪತಿ

ಉಮಾಪತಿ ಸುತ್ತ ಅನುಮಾನದ ಹುತ್ತ:
ಒಟ್ಟಾರೆ, ಇಡೀ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ನಡೆಯ ಸುತ್ತಲೂ ಅನುಮಾನದ ಹುತ್ತ ಬೆಳೆಯುತ್ತಲೇ ಇದೆ. ಈಗ ಚಂಡು ಉಮಾಪತಿ ಅಂಗಳದಲ್ಲಿದ್ದು, ಉಮಾಪತಿ ಇನ್ನೆರಡು ದಿನಗಳಲ್ಲಿ ಸಾಬೀತುಪಡಿಸುತ್ತೇನೆ ಎಂದಿದ್ದಾರೆ. ಸದ್ಯ ಪೊಲೀಸ್ ತನಿಖೆಗೆ ಅಷ್ಟೇನೂ ಸವಾಲು ಅನ್ನಿಸದೇ ಇರುವ ಈ ಪ್ರಕರಣದಲ್ಲಿ, ದರ್ಶನ್ ತೋರುತ್ತಿರುವ ಆಸಕ್ತಿ ಹಾಗೂ ಉಮಾಪತಿಯ ಹೇಳಿಕೆ ಎಲ್ಲವು ಸಾಕಷ್ಟು ಗೊಂದಲ ಉಂಟುಮಾಡುತ್ತಿರೋದಂತು ಸುಳ್ಳಲ್ಲ. ಇದನ್ನೂ ಓದಿ:  ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್

Share This Article
Leave a Comment

Leave a Reply

Your email address will not be published. Required fields are marked *