ಚಿಕ್ಕಬಳ್ಳಾಪುರದಲ್ಲಿ 160 ಬಡವರ ಮನೆಗಳ ನೆಲಸಮಕ್ಕೆ ನೋಟಿಸ್ – ಬಲಾಢ್ಯರಿಗೆ ಯಾಕಿಲ್ಲ ನೋಟಿಸ್?

Public TV
4 Min Read

– ಚಿಕ್ಕಬಳ್ಳಾಪುರದಲ್ಲಿ ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯನಾ!
– ರಾಜಕಾಲುವೆ ಒತ್ತುವರಿ, ಹಲವು ಅವಾಂತರ

ಚಿಕ್ಕಬಳ್ಳಾಪುರ: ನಗರದಲ್ಲಿ ಭಾರೀ ಮಳೆಯಿಂದ ರಾಜಕಾಲುವೆಗಳ ಮೇಲೆ ಮಳೆಯ ನೀರು ಹರಿಯುವಂತಾಗಿದ್ದು, ರಾಜಕಾಲುವೆಗಳ ಒತ್ತುವರಿಯಾಗಿ ಹಲವು ಅವಾಂತರಗಳು ಸೃಷ್ಟಿಯಾಗಿವೆ.

ಭಾನುವಾರ ನಗರದ ಪ್ರತಿಷ್ಠಿತ ಬಡಾವಣೆ ಡಿವೈನ್ ಸಿಟಿ ಲೇಔಟ್ ಗೆ ನೀರು ನುಗ್ಗಿತ್ತು. ಬಡಾವಣೆ ಸಂಪೂರ್ಣ ಜಲಾವೃತವಾಗಿ ಎಂಜಿ ರಸ್ತೆಯೇ ಕಾಲುವೆಯಾಗಿತ್ತು. ಇನ್ನೂ ಇಂದು ಕಂದವಾರ ಕೆರೆ ಕೋಡಿ ಹರಿದು ನಗರದ ಮತ್ತೊಂದು ಮುಖ್ಯ ರಸ್ತೆ ಬೆಂಗಳೂರು ರಸ್ತೆ(ಬಿಬಿ ರಸ್ತೆ)ಯಲ್ಲಿ ಹಲವು ಅವಾಂತರಗಳಾಗಿವೆ. ಎಸ್ ಬಿ ಐ ಬ್ಯಾಂಕ್ ಜಲಾವೃತವಾಗಿತ್ತು. ಪ್ರಮುಖವಾಗಿ ಕಂದವಾರ ಕೆರೆಯಿಂದ ಅಮಾನಿ ಗೋಲಾಪಕೃಷ್ಣ ಕೆರೆಗೆ ನೀರು ಸರಾಗವಾಗಿ ಹರಿದು ಹೋಗಲು ಇದ್ದ 30 ಅಡಿಯ ರಾಜಕಾಲುವೆಗಳು ಈಗ 3 ಅಡಿಗೆ ಬಂದು ನಿಂತಿವೆ. ಪರಿಣಾಮ ಕಂದವಾರ ಕೆರೆ ಕೋಡಿ ಹರಿದಿದ್ದು, ರಾಜಕಾಲುವೆಗಳು ತುಂಬಿ ಹರಿದು ಬಿಬಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದನ್ನೂ ಓದಿ: ಪ್ರಾಥಮಿಕ ಶಾಲೆ ಆರಂಭ – ಕಾರವಾರದಲ್ಲಿ ಉತ್ತಮ ಸ್ಪಂದನೆ

ರಾಜಕಾಲುವೆ ಅಕ್ಕ-ಪಕ್ಕ ಬೃಹತ್ ಕಟ್ಟಡಗಳು ನಿರ್ಮಾಣವಾಗಿ ಈಗ ಮನೆಗಳಿಗೆ ನೀರು ನುಗ್ಗಿದೆ. ಕಟ್ಟಡಗಳ ಬುಡಗಳಿಗೆ ಹಾನಿ ಉಂಟು ಮಾಡುತ್ತಿವೆ. ಇದಲ್ಲದೆ ಕಂದವಾರ ಕೆರೆಯ ಕೆಳಭಾಗ ಖಾನೆ ಪ್ರದೇಶದಲ್ಲಿ 3 ಪ್ರಮುಖ ರಾಜಕಾಲುವೆಗಳು ಕಿಷ್ಕಿಂದೆಯಂತೆ ಆಗಿವೆ. ಹಲವು ಕಡೆ ಮುಚ್ಚೇ ಹೋಗಿವೆ. ಜಮೀನುಗಳಾಗಿ ಮಾರ್ಪಾಡಾಗಿವೆ. ಬಡವಾಣೆಗಳಾಗಿ ಪರಿವರ್ತನೆಗೊಂಡಿವೆ. ಬಿಬಿ ರಸ್ತೆಯಲ್ಲಿ ವಾಣಿಜ್ಯ ಕಟ್ಟಡಗಳಾಗಿವೆ. ಕೃಷಿ ಜಮೀನುಗಳು ಸಂಪೂರ್ಣ ಕೆರೆಗಳಂತಾಗಿದ್ದು, ಬೆಳೆ ಇಟ್ಟಿದ್ದ ರೈತರು ಬಾಯಿ ಬಾಯಿ ಬಡಿದುಕೊಳ್ಳುವಂತಾಗಿದೆ.

ಬಡವರಿಗೆ ನೋಟಿಸ್

ಚಿಕ್ಕಬಳ್ಳಾಪುರ ನಗರದ ವಾಪಸಂದ್ರ 1 ಹಾಗೂ 2 ನೇ ವಾರ್ಡಿನ ರೇಷ್ಮೆ ಗೂಡು ಮಾರುಕಟ್ಟೆ ಬಳಿ ರಾಜಕಾಲುವೆಗಳ ಮೇಲೆ ಕಡುಬಡವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮನೆಕೆಲಸ ಮಾಡುವವರು, ದಿನಗೂಲಿ ನೌಕರರು, ಚಿಂದಿ ಆಯುವವರು ಸೇರಿ ತೀರಾ ಕಡುಬಡವರ ಮನೆಗಳಿವೆ. ರಾಜಕಾಲುವೆ ಮೇಲೆಯೇ ಮನೆ ಕಟ್ಟಿಕೊಂಡಿರೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಕಾರಣ ಒಂದು ಸ್ಲಂ ರೀತಿ ಇದೆ. ಇದನ್ನೂ ಓದಿ: ಜನರನ್ನು ನೇರವಾಗಿ ಮಾತನಾಡಿಸಬೇಕು ಎಂದು ಬುಲೆಟ್ ಪ್ರೂಫ್ ಶೀಲ್ಡ್ ತೆಗೆದ ಶಾ

ಕಾರು ಆಟೋ ಹೋಗುವಷ್ಟು ಜಾಗ ರಸ್ತೆ ಕೂಡ ಎದುರು ಬದುರು ಮನೆಗಳ ಮಂದೆ ಇಲ್ಲ. ಕೆಲವು ಕಡೆ ಬೈಕ್ ಹೋಗೋದು ಕಷ್ಟ ಆ ರೀತಿ ಅಕ್ಕ ಪಕ್ಕಗಳಲ್ಲಿ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಹೀಗೂ ಮನೆಗಳು ಏರಿಯಾ ಇದೆಯಾ ಅನ್ನೋ ಅಷ್ಟರ ಮಟ್ಟಿಗೆ ಆ ಜಾಗ ಇದೆ. ಇದು ಸರಿಸುಮಾರು ಅರ್ಧ ಕಿಲೋಮೀಟರ್ ದೂರದವರೆಗೂ ಹೀಗೆ ಎದುರು ಬದುರು ಮನೆಗಳನ್ನ ಕಟ್ಟಿಕೊಂಡಿದ್ದಾರೆ.

ಆಸಲಿಗೆ ನಿರ್ಗತಿಕರಾಗಿದ್ದ ಬಡವರು ದಿಕ್ಕುತೋಚದೆ ಕಳೆದ 20-30 ವರ್ಷಗಳಿಂದಲೂ ಆರು ಕಾಸು ಮೂರು ಕಾಸು ಸಂಪಾದನೆ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಕೆಲವರು ಚಿಕ್ಕ ಚಿಕ್ಕ ಜಾಗಗಳಲ್ಲೇ ಚೆನ್ನಾಗಿ ದುಡಿದು ಸಂಪಾದನೆ ಮಾಡಿ ಎರಡು ಮೂರು ಅಂತಸ್ತಿನ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ವಾಪಸಂದ್ರ ವಾರ್ಡಿನಲ್ಲಿ ರಾಜಕಾಲುವೆ ಅಕ್ಕಪಕ್ಕದಲ್ಲಿ ಸರಿಸುಮಾರು 500 ಮೀಟರ್ ದೂರದವರೆಗೂ ಬಹುತೇಕ ರಾಜಕಾಲುವೆ ಹಾಗೂ ಅಕ್ಕ ಪಕ್ಕ ಅತಿಕ್ರಮಣ ಮಾಡಿ ಜನ ಮನೆ ಕಟ್ಟಿಕೊಂಡಿದ್ದಾರೆ. ಕೂಲಿ ನಾಲಿ ಮಾಡಿ ಅಷ್ಟು ಇಷ್ಟು ಕಾಸು ಕೂಡಿಟ್ಟುಕೊಂಡು ಇರೋಕೆ ಒಂದು ಸೂರು ಮಾಡಿಕೊಂಡಿದ್ದಾರೆ.

ಈ ಭಾಗದಲ್ಲಿ ಬಡಾವಣೆ ನಿರ್ಮಾಣ ಮಾಡಿರುವ ಮಾಲೀಕರಾದ ತ್ಯಾಗರಾಜ್ ಎಂಬವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿ ತನಿಖೆ ನಡೆಸಿದಾಗ, ರಾಜಕಾಲುವೆ ಮೇಲೆ 160 ಮನೆಗಳನ್ನ ನಿರ್ಮಾಣವಾಗಿದ್ದು, ಸಾಬೀತಾಗಿದೆ. ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ 15 ದಿನಗಳ ಒಳಗಡೆ ಸ್ವಂತ ಖರ್ಚಿನಲ್ಲಿ ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡಿರುವ ಮನೆ ಮಾಲೀಕರೇ ಮನೆ ನೆಲಸಮ ಮಾಡಿ ಜಾಗ ತೆರವು ಮಾಡುವಂತೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ.

ಮನೆ ಮನೆಗೆ ಹೋಗಿ 160 ಮಂದಿಗೆ ನೋಟಿಸ್ ನೀಡಿದ್ದು, ತಪ್ಪಿದರೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರವ ಕಲಂ 39 ಹಾಗೂ 104 ರ ಅನ್ವಯ ಒತ್ತುವರಿ ತೆರವು ಮಾಡಿ ಆ ಖರ್ಚನ್ನು ಕಂದಾಯ ಬಾಕಿಯಂತೆ ಪರಿಗಣಿಸಿ, ವಸೂಲಿ ಮಾಡಲಾಗುವುದು. ಇಲ್ಲವಾದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಬೇರೆ ಜಾಗ ಕೊಡಿ!

ಬಡವರು ದಿಕ್ಕುತೋಚದಂತಾಗಿ ಈಗ ಕಣ್ಣೀರು ಹಾಕುತ್ತಿದ್ದಾರೆ. ಕಷ್ಟಪಟ್ಟು ಕಟ್ಟಿಕೊಂಡ ಮನೆ ಕಳೆದು ಹೋಗುತ್ತೆ ಬಿಟ್ಟು ಹೋಗಬೇಕು ಎಂಬ ಭಯದಿಂದ ಹಲವರು ಊಟ ಮಾಡೋದು ಬಿಟ್ಟು ನಿದ್ದೆ ಬರದಂತೆ ಆಗಿದೆ. ಯಾವಾಗ ಅಧಿಕಾರಿಗಳು ಬಂದು ಮನೆ ನೆಲಸಮ ಮಾಡಿಬಿಡ್ತಾರೋ ಅನ್ನೋ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ 290 ಪಾಸಿಟಿವ್, 10 ಸಾವು

ಕಣ್ಣೀರುಡುತ್ತಿದ್ದಾರೆ, ಸರ್ ತುತ್ತು ಅನ್ನ ಇರೋಕೆ ಒಂದು ಸೂರು ನಮ್ಮ ಮನೆ ನಮಗೆ ಬಿಟ್ಟುಬಿಡಿ ಸರ್. ಇಲ್ಲ ಬೇರೆ ಮನೆ ಜಾಗನಾದ್ರೂ ಕೊಡಿಸಿ ಸರ್ ದುಡಿದು ಜೀವನ ಮಾಡ್ಕೋತಿವಿ. ನಿಮ್ಮತ್ರ ಬರೋ ಶಕ್ತಿನೂ ನಮಗಿಲ್ಲ. ನಾವು ಬಡವರು ಸರ್ ಅಂತ ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅವರಿಗೆ ಬಡ ಮಹಿಳೆಯರು ಅಂಗಲಾಚುತ್ತಿದ್ದು, ಪಬ್ಲಿಕ್ ಟಿವಿ ಮೂಲಕ ಸಚಿವರಿಗೆ ಮನವಿ ಮಾಡಿಕೊಳ್ಳೋಕೆ ಮುಂದಾಗಿದ್ದಾರೆ.

ಈ ನ್ಯಾಯ ಸರಿಯೇ?

ಮಳೆ ಬರಲ್ಲ ನೀರು ಬರಲ್ಲ ಅಂತ ಚಿಕ್ಕಬಳ್ಳಾಪುರ ನಗರದಲ್ಲಿ ಬಹುತೇಕ ರಾಜಕಾಲುವೆಗಳನ್ನ ಒತ್ತುವರಿ ಮಾಡಿಕೊಂಡು ಈ ಬಡವರಷ್ಟೆ ಅಲ್ಲದೇ ಬಲಾಢ್ಯರು ಸಹ ಬಿಬಿ ರಸ್ತೆಯ ಕಂದವಾರ ಕೆರೆಯ ರಾಜಕಾಲುವೆಗಳನ್ನ ಒತ್ತುವರಿ ಮಾಡಿ ಬಿಬಿ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು, ಜಮೀನುಗಳನ್ನಾಗಿ ಮಾಡಿಕೊಂಡಿದ್ದಾರೆ.

ಈಗ ನ್ಯಾಯಾಲಯ ಆದೇಶ ಮಾಡಿದೆ ಅನ್ನೋ ಕಾರಣಕ್ಕೆ ಕೇವಲ ವಾಪಸಂದ್ರದ ಬಳಿಯ ರಾಜಕಾಲುವೆ ಮೇಲೆ ಮನೆ ನಿರ್ಮಾಣ ಮಾಡಿಕೊಂಡವರಿಗೆ ಮಾತ್ರ ನೋಟಿಸ್ ನೀಡಿ ಖಾಲಿ ಮಾಡಲು ಮುಂದಾಗಿದ್ದು, ಏಕೆ? ಕಂದವಾರದ ಕೆರೆಯ ಕೆಳಭಾಗದ ರಾಜಕಾಲುವೆಗಳನ್ನ ಒತ್ತುವರಿ ಮಾಡಿಕೊಂಡಿರೋ ಬಲಾಢ್ಯರಿಗೆ ನೋಟಿಸ್ ಕೊಡ್ತಿಲ್ಲ ಎಂದು ಪ್ರಜ್ಞಾವಂತರು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ

ಈಗಲಾದ್ರೂ ಎಚ್ಚೆತ್ತುಕೊಂಡು ಬಲಾಢ್ಯರಿಗೂ ಕಾನೂನ ಪ್ರಕಾರ ನೋಟಿಸ್ ನೀಡಿ ತೆರವು ಮಾಡಬೇಕಿದೆ. ಅಧಿಕಾರಿಗಳ ನಡೆ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎಂಬಂತಾಗಿದ್ದು, ಈ ಬಡವರಿಗೆ ನೋಟಿಸ್ ಕೊಟ್ಟಂತೆ ಬಲಾಢ್ಯರಿಗೆ ನೋಟಿಸ್ ಕೊಡಬೇಕಿದೆ. ಇಲ್ಲವಾದಲ್ಲಿ ಮಳೆಯಿಂದ ಆಗೋ ಅನಾಹುತಗಳಿಗೆ ಅಧಿಕಾರಿಗಳು ಜಿಲ್ಲಾಡಳಿತವೇ ಹೊಣೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *