ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್‌ಗೆ ಶಿಕ್ಷೆ – ಸಾರಾ ಮಹೇಶ್‌

Public TV
2 Min Read

– ಸತ್ಯ ಯಾವುದು ಎಂದು ತೀರ್ಮಾನವಾಗಿದೆ
– ನಮ್ಮಂತ ರಾಜಕಾರಣಿಗಳಿಗೆ ಇದು ಪಾಠ

ಮೈಸೂರು: ಮಾಜಿ ಸಚಿವ, ವಿಧಾನಪರಿಷತ್‌ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ಅವರಿಗೆ ನ್ಯಾಯ ದೇವತೆ ಶಿಕ್ಷೆ ನೀಡಿದ್ದಾಳೆ ಎಂದು ಜೆಡಿಎಸ್‌ ಶಾಸಕ ಸಾರಾ ಮಹೇಶ್‌ ಹೇಳಿದ್ದಾರೆ.

ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟಕ್ಕೆ ಸಾರಾ ಮಹೇಶ್‌ ಆಗಮಿಸಿ ದೇವಿಯ ದರ್ಶನ ಪಡೆದರು. ಬಳಿಕ ಕ್ಷೇತ್ರವನ್ನು ಸಾಕ್ಷಿಯಾಗಿಸಿದ್ದಕ್ಕೆ 1,001 ರೂ. ತಪ್ಪು ಕಾಣಿಕೆ ಹಾಕಿದರು. ಬಳಿಕ ಮಾತನಾಡಿದ ಅವರು, ಪ್ರಸಂಗ ನಡೆದ ಸರಿಯಾಗಿ ಒಂದು ವರ್ಷಕ್ಕೆ ನ್ಯಾಯ ದೇವತೆ ತೀರ್ಪು ಕೊಟ್ಟಿದ್ದಾಳೆ ಎಂದು ತಿಳಿಸಿದರು.

ಆಣೆ ಪ್ರಮಾಣ ನಡೆದು ಸರಿಯಾಗಿ ಒಂದೆ ವರ್ಷಕ್ಕೆ ಸತ್ಯ ಯಾವುದು ಎಂಬುದು ತೀರ್ಮಾನವಾಗಿದೆ. ಈ ಮೂಲಕ ಚಾಮುಂಡಿ ತಾಯಿ ನ್ಯಾಯ ದೇವತೆ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾಳೆ ಎಂದರು.  ಇದನ್ನೂ ಓದಿ: ವಿಶ್ವನಾಥ್‌ಗೆ ಹೈಕೋರ್ಟ್‌ ಶಾಕ್‌ – ಎಂಟಿಬಿ, ಶಂಕರ್‌ಗೆ ಬಿಗ್‌ ರಿಲೀಫ್‌

ನಾನು ದೇವಾಲಯದಲ್ಲಿ ಕಣ್ಣೀರಿಟ್ಟು ತಪ್ಪು ಯಾರದ್ದು ಸರಿಯಾರದ್ದು ಎಂದು ನೀನೇ ತೋರಿಸು ತಾಯಿ ಎಂದು‌ ಕೇಳಿದ್ದೆ. ಪ್ರಸಂಗ ನಡೆದ ಸರಿಯಾಗಿ ಒಂದು ವರ್ಷಕ್ಕೆ ನ್ಯಾಯ ದೇವತೆ ತೀರ್ಪು ಕೊಟ್ಟಿದ್ದಾಳೆ. ತಪ್ಪು ಮಾಡಿದ್ದರೂ ಭಂಡತನದಿಂದ ಶಕ್ತಿ ದೇವತೆ ಮುಂದೆ ಕೂತರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದ್ದು ನಮ್ಮಂತ ರಾಜಕಾರಣಿಗಳಿಗೆ ಪಾಠ ಎಂದು ಪ್ರತಿಕ್ರಿಯಿಸಿದರು.

ಅಂದು ಏನಾಗಿತ್ತು?
ಕಳೆದ ವರ್ಷ ವಿಶ್ವಾಸ ಮತ ನಿರ್ಣಯ ಚರ್ಚೆಯ ವೇಳೆ ವಿಧಾನಸಭೆಯಲ್ಲಿ ಮಾತನಾಡಿದ್ದ ಸಾರಾ ಮಹೇಶ್‌, ವಿಶ್ವನಾಥ್‌ ಎಷ್ಟು ಕೋಟಿಗೆ ಸೇಲಾಗಿದ್ದಾರೆ ಎಂಬುದನ್ನು ತಿಳಿಸಬೇಕು. ಪತ್ರಕರ್ತರ ಮಧ್ಯಸ್ಥಿಕೆ ಮೂಲಕ 28 ಕೋಟಿ ರೂ. ವ್ಯವಹಾರ ಕುದುರಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಬಾಂಬ್‌ ಸಿಡಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ನಾಯಕರ ನಡುವೆ ಆರೋಪ ಪ್ರತ್ಯಾರೋಪ ನಡೆದು ಕೊನೆಗೆ ಆಣೆ ಪ್ರಮಾಣದ ಹಂತವರೆಗೆ ಬಂತು. ಆಣೆ ಪ್ರಮಾಣ ಮಾಡಲು ಚಾಮುಂಡಿ ಬೆಟ್ಟಕ್ಕೆ ಬರಬೇಕೆಂದು ವಿಶ್ವನಾಥ್ ಸಾ.ರಾ. ಮಹೇಶ್‌ಗೆ ಸವಾಲು ಹಾಕಿದ್ದರು. ಈ ಕಾರಣಕ್ಕಾಗಿ ಅಕ್ಟೋಬರ್‌ 17 ರಂದು ಇಬ್ಬರು ಚಾಮುಂಡಿ ಬೆಟ್ಟಕ್ಕೆ ಬಂದಿದ್ದರು.

ಆರಂಭದಲ್ಲಿ ಬೆಳಗ್ಗೆ ವಿಶ್ವನಾಥ್‌ ದೇವಾಲಯಕ್ಕೆ ಬಂದಿದ್ದರು. ವಿಶ್ವನಾಥ್‌ ಹೊರ ಬಂದ ಬಳಿಕ ಸಾರಾ ಮಹೇಶ್‌ ಒಳ ಪ್ರವೇಶಿಸಿದ್ದರು. ಈ ವೇಳೆ ಸಾರಾ ಮಹೇಶ್‌ ತೆರಳಿದ ವಿಚಾರ ಕೇಳಿ ವಿಶ್ವನಾಥ್‌ ಒಂದು ಗಂಟೆಗಳ ಕಾಲ ಕಾದು ಕುಳಿತರು. ಮಹೇಶ್ ಅವರು ಬಾರದ ಕಾರಣ ವಿಶ್ವನಾಥ್ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ ತೆರಳಿದ್ದರು. ವಿಶ್ವನಾಥ್ ಹೋದ ನಂತರ ಸಾರಾ ಮಹೇಶ್ ದೇವಾಲಯದಿಂದ ಹೊರ ಬಂದರು.

ಈ ವೇಳೆ ಪ್ರತಿಕ್ರಿಯಿಸಿದ್ದ ವಿಶ್ವನಾಥ್‌ ನನ್ನ ಮಾತನ್ನು ತಿರುಚಬೇಡಿ. ನಾನು ಆಣೆ ಪ್ರಮಾಣ ಮಾಡಲು ದೇವಸ್ಥಾನಕ್ಕೆ ಬಂದಿಲ್ಲ. ನನಗೆ ಹಣ ಕೊಟ್ಟವರನ್ನು ನೋಡಲು ಹಾಗೂ ಆರೋಪ ಮಾಡಿದವರಿಗಾಗಿ ಕಾಯುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.

ಕಣ್ಣೀರು ಹಾಕಿ ಆಣೆ ಮಾಡಿದ್ದ ಸಾರಾ ಮಹೇಶ್‌, ನನ್ನ ಮೇಲೆ ವಿಶ್ವನಾಥ್‌ ವೈಯಕ್ತಿಕ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಿದ್ರೆ ನಾನು ಕ್ಷಮೆಯಾಚಿಸುವೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *