Connect with us

Districts

ವಿಶ್ವನಾಥ್‌ಗೆ ಹೈಕೋರ್ಟ್‌ ಶಾಕ್‌ – ಎಂಟಿಬಿ, ಶಂಕರ್‌ಗೆ ಬಿಗ್‌ ರಿಲೀಫ್‌

Published

on

ಬೆಂಗಳೂರು: ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿದ್ದ ಎಚ್.ವಿಶ್ವನಾಥ್ ಅವರಿಗೆ ಹೈಕೋರ್ಟ್ ಬಿಗ್‌ ಶಾಕ್ ನೀಡಿದೆ.

ವಿಧಾನ ಪರಿಷತ್‍ನ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡದಂತೆ ಕೋರಿ ವಕೀಲ ಎ.ಎಸ್. ಹರೀಶ್ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಧ್ಯಂತರ ಆದೇಶ ಪ್ರಕಟಿಸಿತು.

ಸಂವಿಧಾನದ 164 (1ಬಿ), 361 ಬಿ ಅಡಿ ಹೆಚ್.ವಿಶ್ವನಾಥ್ ಅವರು ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಹೀಗಾಗಿ ಹಾಲಿ ಪರಿಷತ್‌ ಅವಧಿ ಮುಗಿಯುವವರೆಗೆ ಅನರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ, ಎಸ್.ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ. ಈ ಆದೇಶದ ಅನ್ವಯ 2021ರವರೆಗೆ ವಿಶ್ವನಾಥ್‌ ಮಂತ್ರಿಯಾಗಲು ಸಾಧ್ಯವಿಲ್ಲ

ತನ್ನ ಆದೇಶದಲ್ಲಿ ವಿಶ್ವನಾಥ್ ಅವರಿಗೆ ಮಂತ್ರಿಯಾಗಲು ಸಾಧ್ಯವಿಲ್ಲ ಎಂದಿರುವ ಕೋರ್ಟ್, ಎಂಟಿಬಿ ನಾಗರಾಜ್, ಆರ್.ಶಂಕರ್ ಮಂತ್ರಿಯಾಗಬಹುದು ಎಂದು ಹೇಳಿದೆ. ಈ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ, ಸಿಎಂಗೆ ಹೈಕೋರ್ಟ್ ಸೂಚನೆ ನೀಡಿದೆ.

ಅನರ್ಹರಾದವರು ಮರು ಆಯ್ಕೆಯಾಗಲು ಮಾತ್ರ ಅವಕಾಶವಿದೆ. ಆದರೆ ಎ.ಹೆಚ್‍ವಿಶ್ವನಾಥ್ ನಾಮನಿರ್ದೇಶಿತ ಶಾಸಕರಾಗಿದ್ದಾರೆ. ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ವಿಧಾನಸಭೆಯಿಂದ ಪರಿಷತ್‍ಗೆ ಆಯ್ಕೆಯಾಗಿದ್ದಾರೆ. ಹಿಂಬಾಗಿಲಿನಿಂದ ಪರಿಷತ್‍ಗೆ ಆಯ್ಕೆ ಆಗುವುದನ್ನು ನಿರ್ಬಂಧಿಸಿ ಎಂದು ಅರ್ಜಿದಾರರು ಮನವಿ ಮಾಡಿದ್ದರು. ಅರ್ಜಿದಾರರ ಪರವಾಗಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ವಾದ ಮಾಡಿದ್ದರು.

ಎಚ್‌ ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌, ಆರ್‌ ಶಂಕರ್‌ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಮೂವರೂ ಜನರಿಂದ ಆಯ್ಕೆಯಾಗದೇ ಚುನಾಯಿತ ಶಾಸಕರಿಂದ ಆಯ್ಕೆಯಾಗಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಹಾಗಾಗಿ, ಅವರನ್ನು ಸಚಿವರನ್ನಾಗಿ ನೇಮಿಸಬಾರದು ಎಂದು ಪ್ರಶಾಂತ್‌ ಭೂಷಣ್‌ ವಾದಿಸಿದ್ದರು.

ಯಾಕಿಲ್ಲ ಮಂತ್ರಿ ಸ್ಥಾನ?
ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ನಾಮನಿರ್ದೇಶನ ಮಾಡಲಾಗಿದ್ದರೆ, ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಎಂಟಿಬಿ, ಶಂಕರ್ ಆಯ್ಕೆ ಆಗಿದ್ದರು. ವಿಶ್ವನಾಥ್ ಯಾವುದೇ ಚುನಾವಣೆ ನಡೆಯದೇ ಅವಿರೋಧವಾಗಿ ಪರಿಷತ್ ಮೆಟ್ಟಿಲು ಹತ್ತಿದ ಕಾರಣ ಮಂತ್ರಿ ಸ್ಥಾನ ಮಾಡಲು ಬರುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಏನಿದು ಪ್ರಕರಣ?
ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಲಿ ವಿಧಾನಸಭೆ ಮುಗಿಯುವರೆಗೆ 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಪ್ರಕಟಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ವಿಧಾನಸಭೆ ಮುಗಿಯುವರೆಗೂ ಅನರ್ಹತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಬಹುದು ಎಂದು ಮಹತ್ವದ ಆದೇಶವನ್ನು ಪ್ರಕಟಿಸಿತ್ತು.

ಈ ಕಾರಣಕ್ಕೆ ವಿಶ್ವನಾಥ್‌ ಮತ್ತು ಎಂಟಿಬಿ ನಾಗರಾಜ್‌ ಹುಣಸೂರು ಮತ್ತು ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸೋತ ಹಿನ್ನೆಲೆಯಲ್ಲಿಇಬ್ಬರನ್ನು ಬಿಜೆಪಿ ಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡಲು ಮುಂದಾಗಿತ್ತು. ಈ ನಡುವೆ ಹೈಕೋರ್ಟ್‌ನಲ್ಲಿ ಅನರ್ಹರಾದವರಿಗೆ ಪರಿಷತ್‌ ಮೂಲಕ ಮಂತ್ರಿಯಾಗಲು ನಿರ್ಬಂಧಿಸಿ ಕೋರಿ ಪಿಐಎಲ್‌ ಸಲ್ಲಿಕೆಯಾಗಿತ್ತು. ಈಗ ಹೈಕೋರ್ಟ್‌ ನೀಡಿದ ಮಧ್ಯಂತರ ಆದೇಶದಿಂದ ವಿಶ್ವನಾಥ್‌ಗೆ ಮಂತ್ರಿ ಸ್ಥಾನ ಕೈ ತಪ್ಪಿದರೆ ಎಂಟಿಬಿಗೆ ಮಂತ್ರಿಯಾಗುವ ಅವಕಾಶ ಸಿಕ್ಕಿದೆ.

Click to comment

Leave a Reply

Your email address will not be published. Required fields are marked *

www.publictv.in