ಆಂಧ್ರದ ಹೆಣ್ಣುಮಗಳಿಗಾಗಿ ಕನ್ನಡದ ಜಿಲ್ಲಾಧಿಕಾರಿ ವರ್ಗಾವಣೆ: ಸಾರಾ ಮಹೇಶ್ ಕಿಡಿ

Public TV
1 Min Read

ಮೈಸೂರು: ಆಂಧ್ರದ ಹೆಣ್ಣು ಮಗಳಿಗಾಗಿ ಕನ್ನಡದ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಮಾಜಿ ಸಚಿವ ಸಾ.ರಾ ಮಹೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ವಿಶೇಷಾಧಿಕಾರಿ, ನೇಮಕಾಧಿಕಾರಿ ನೇಮಕವಾದ ನಂತರ ಜಿಲ್ಲಾಧಿಕಾರಿಯನ್ನ ಬದಲಾವಣೆ ಮಾಡಿರೋದು ಸರಿಯಲ್ಲ. ಅದು ಸ್ಥಳ ತೋರಿಸದೆ ದಲಿತ ಡಿಸಿಯನ್ನ ವರ್ಗಾವಣೆ ಮಾಡಿದ್ದಾರೆ. ಒಬ್ಬ ಆಂಧ್ರದ ಹೆಣ್ಣು ಮಗಳಿಗಾಗಿ ಕನ್ನಡದ ಮಗನನ್ನ ವರ್ಗಾವಣೆ ಮಾಡಿದ್ದೀರಾ. ಇದು ನಿಮ್ಮ ಸರ್ಕಾರದ ಸಾಧನೆಯಾ ಎಂದು ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದಾಗ ವರ್ಗಾವಣೆಯನ್ನ ಪ್ರಶ್ನಿಸಿದ್ದರು. ಇದೀಗ 29 ದಿನದಲ್ಲಿಯೇ ಮೈಸೂರು ಡಿಸಿ ವರ್ಗಾವಣೆಯಾಗಿದೆ ಇದು ಸರಿಯೇ?, ಇಲ್ಲಿನ ಜಿಲ್ಲಾಧಿಕಾರಿಗೆ ಅನ್ಯಾಯವಾಗಿದೆ ಅನ್ನೋ ಮನಃಸಾಕ್ಷಿ ಇಲ್ವಾ?. ಅಧಿಕಾರದ ಆಸೆ ಇರುವ ಇಂತಹ ಜಿಲ್ಲಾಧಿಕಾರಿಯಿಂದ ಏನನ್ನು ನಿರೀಕ್ಷೆ ಮಾಡೋದು ಎಂದು ಹೇಳುವ ಮೂಲಕ ಮೈಸೂರಿಗೆ ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ರೋಹಿಣಿ ಸಿಂಧೂರಿ ಅವರು ಹಠಕ್ಕೆ ಬಿದ್ದಿದ್ದಾರೆ. ನಾನು ಡಿಸಿ ಆಗಿಯೇ ಇರಬೇಕು ಎಂದಿಕೊಂಡಿದ್ದಾರೆ. ಅದಕ್ಕೆ ಹಾಸನದಲ್ಲಿ ಮೂರು ಬಾರಿ ಕೇಸ್ ಹಾಕಿ, ಇದೀಗ ಮೈಸೂರಿಗೆ ಬಂದಿದ್ದಾರೆ. ಜಿಲ್ಲಾ ಮಂತ್ರಿಗಳಿಗೆ ಮಾಹಿತಿ ಇಲ್ಲದೇ ವರ್ಗಾವಣೆ ಆಗಿದೆಯಾ?. ಹಾಗಿದ್ರೆ ನೀವೂ ಹೆಲ್ಪ್ ಲೆಸ್ಸಾ ಸಚಿವರೇ.?, ಇದಕ್ಕೆ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರೇ ಉತ್ತರ ಕೊಡಬೇಕು ಎಂದರು. ಇದನ್ನೂ ಓದಿ: ಮೈಸೂರು ನನಗೆ ಹೊಸದಲ್ಲ, ಇಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ: ರೋಹಿಣಿ

ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತ ನಡಸುತ್ತಿದ್ದಾರಾ? ಅಥವಾ ಆಂಧ್ರದ ಸಿಎಂ ಆಡಳಿತ ನಡೆಸುತ್ತಿದ್ದರಾ? ಈ ವರ್ಗಾವಣೆಯನ್ನ ಆಂಧ್ರದ ಸಿಎಂ ಮಾಡಿಸಿದ್ದಾರೆಯೋ ಅನ್ನೋ ಬಗ್ಗೆ ಅನುಮಾನ ಇದೆ. ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ. ಅದರ ಭಾಗವಾಗಿ ರೋಹಿಣಿ ಸಿಂಧೂರಿ ವರ್ಗಾವಣೆ ಆಗಿದೆ ಎಂದು ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *