ಮುಂಬೈ: 500 ಕೋಟಿ ರೂ. ವಿಚಾರಕ್ಕೆ ಮಿತ್ರಪಕ್ಷಗಳಾದ ಶಿವಸೇನೆ (Shiv Sena) ಮತ್ತು ಬಿಜೆಪಿ (BJP) ನಡುವೆ ಸಮರ ಏರ್ಪಟ್ಟಿದೆ.
ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಂಗೆ ಪಾಟೀಲ್ ಅವರು ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್ ಒಂದರಲ್ಲಿ, ಗುರುತು ತಿಳಿಯದ ಮಹಿಳೆಯೊಬ್ಬರು ಬಿಜೆಪಿ ಕಡೆಯಿಂದ 500 ಕೋಟಿ ರೂಪಾಯಿಗಳನ್ನು ಪಡೆಯುವ ಬಗ್ಗೆ ಮಾತನಾಡಿದ್ದಾರೆ. ಈ ಆಡಿಯೋ ಕ್ಲಿಪ್ ಅನ್ನು ಶಿವಸೇನೆ ಸಂಸದ ಶ್ರೀಕಾಂತ್ ಶಿಂಧೆ ಅವರು ತಮಗೆ ಕಳುಹಿಸಿಕೊಟ್ಟಿದ್ದಾಗಿ ಜರಂಗೆ ಪಾಟೀಲ್ ಹೇಳಿದ್ದಾರೆ. ಈ ಘಟನೆಯು ಮೈತ್ರಿಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಒಂದು ವೇಳೆ ಆ ಹಣ ನೀಡಲಾಗಿದ್ದರೆ, ಅದು ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಈಗ ಉಳಿದುಕೊಂಡಿದೆ. ಇದನ್ನೂ ಓದಿ: ಪಾಕಿಸ್ತಾನ ಹಾಡಿಹೊಗಳಿದ ಫಾರೂಖ್ ಅಬ್ದುಲ್ಲಾ – `ದೇಶದ್ರೋಹ’ ಎಂದು ಬಿಜೆಪಿ ತರಾಟೆ: ಏನಿದು ವಿವಾದ?
ತಾನು ಅಂತಹ 500 ಕೋಟಿ ರೂಪಾಯಿಗಳ ಪಾವತಿಯನ್ನು ಪಡೆದಿಲ್ಲ ಎಂದು ಜರಾಂಗೆ ಪಾಟೀಲ್ ಆರೋಪವನ್ನು ನಿರಾಕರಿಸಿದ್ದಾರೆ. ಈ ಬೆಳವಣಿಗೆಯು, 2024ರ ರಾಜ್ಯ ಚುನಾವಣೆಗಳಿಗೂ ಮುನ್ನ ಬಿಜೆಪಿ ಹಣವನ್ನು ತಲುಪಿಸುವ ಕೆಲಸ ಮಾಡಿದ್ದರೆನ್ನಲಾದ ಶ್ರೀಕಾಂತ್ ಶಿಂಧೆ ಅವರನ್ನು ಚರ್ಚೆಯ ಕೇಂದ್ರಬಿಂದುವನ್ನಾಗಿಸಿದೆ.
ಶ್ರೀಕಾಂತ್ ಅವರ ತಂದೆ ಹಾಗೂ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು, ಇದರಲ್ಲಿ ತಮ್ಮ ವಿರುದ್ಧ ಒಂದು ಷಡ್ಯಂತ್ರ ನಡೆದಿದೆ ಎಂದಿದೆ. ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿ ಕೂಡ, ಈ ಹಣವನ್ನು ತಮ್ಮ ಪಕ್ಷದೊಂದಿಗೆ ತಳಕು ಹಾಕುತ್ತಿರುವ ಆರೋಪಗಳ ಹಿಂದೆ ಒಂದು ಸಂಚು ಅಡಗಿದೆ ಎಂದು ಹೇಳಿದೆ.
ಶಿವಸೇನಾ ನಾಯಕ ಮತ್ತು ಮಾಜಿ ಸಚಿವ ರಾಮದಾಸ್ ಕದಮ್ ಅವರು, ಶ್ರೀಕಾಂತ್ ಅವರ ತಂದೆಯಾದ ಏಕನಾಥ್ ಶಿಂಧೆ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಬಣವೊಂದು ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ದೆಹಲಿ ಪೊಲೀಸ್ ಪ್ರಧಾನ ಕಚೇರಿಗೆ ಅಮಿತ್ ಶಾ ಭೇಟಿ – ಕಾನೂನು ಸುವ್ಯವಸ್ಥೆ ಪರಿಶೀಲನೆ
ಶಾಸನ ಪರಿಷತ್ತಿನಲ್ಲಿ ಬಿಜೆಪಿಯ ಗುಂಪು ನಾಯಕರಾದ ದಾರೇಕರ್ ಮತ್ತು ಲಾಡ್ ಅವರು ಇದಕ್ಕೆ ತಿರುಗೇಟು ನೀಡಿದ್ದು, ಪಕ್ಷವನ್ನು ಕಟಕಟೆಯಲ್ಲಿ ನಿಲ್ಲಿಸುವುದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಉದ್ಧವ್ ಠಾಕ್ರೆ ಅವರ ಶಿವಸೇನಾ (ಯುಬಿಟಿ) ನಾಯಕರಾದ ಸಂಜಯ್ ರಾವತ್ ಅವರು ಆಗಾಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಕದಮ್ ಅವರು “ಸಂಜಯ್ ರಾವತ್ ಆಗಬಾರದು” ಎಂದು ಎಚ್ಚರಿಸಿದ್ದಾರೆ.
