ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಧನ್ವೀರ್‌ ತಂದೆಯಿಂದ ದೂರು

2 Min Read

ಬೆಂಗಳೂರು: ನಟ ಧನ್ವೀರ್ ಗೌಡ(Dhanveer Gowda) ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ(Vijayalakshmi) ನಡುವಿನ ವಿವಾದ ತಾರಕಕ್ಕೇರಿದ್ದು, ಇದೀಗ ಧನ್ವೀರ್ ಅವರ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಮತ್ತು ಅವರ ತಂಡದ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಗೆ(Rajajinagar Police Station) ದೂರು ನೀಡಿದ್ದಾರೆ.

ಮನೆಗೆ ನುಗ್ಗಿ ಗಲಾಟೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅವರು ನೀಡಿರುವ ಅರ್ಜಿಯ ಮೇರೆಗೆ ಪೊಲೀಸರು ಎನ್‌ಸಿಆರ್(Non-Cognizable Report) ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?
ಅಕ್ಟೋಬರ್ 21ರಂದು ರಾತ್ರಿ ಸುಮಾರು 8:30ರ ಸಮಯದಲ್ಲಿ ಧನ್ವೀರ್ ಮೈಸೂರಿಗೆ ತೆರಳಿದ್ದರು. ಆ ವೇಳೆ ಮನೆಯಲ್ಲಿ ನಾನು, ನನ್ನ ಪತ್ನಿ ಭಾರತಿ, ತಾಯಿ ಜಯಮ್ಮ ಹಾಗೂ ಮಗಳು ನಳಿನಾಕ್ಷಿ ಇದ್ದರು. ಆ ಸಂದರ್ಭದಲ್ಲಿ ಮನೆಗೆ ಬಂದ ವಿಜಯಲಕ್ಷ್ಮಿ ಹಾಗೂ ಅವರ ಮ್ಯಾನೇಜರ್ ನಾಗರಾಜ್ ಕಾಲಿಂಗ್ ಬೆಲ್ ಬಾರಿಸಿದ್ದಾರೆ. ಬಾಗಿಲು ತೆರೆದಾಗ “ಧನ್ವೀರ್ ಎಲ್ಲಿ, ಅಪ್ಪ ಎಲ್ಲೆ?” ಎಂದು ಕೇಳಿದ್ದು, “ಧನ್ವೀರ್ ಊರಲ್ಲಿಲ್ಲ, ಅವರ ತಂದೆ ಊಟ ಮಾಡುತ್ತಿದ್ದಾರೆ” ಎಂದು ಮನೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಮುಖವಾಡ ಕಳಚುತ್ತೇನೆ – ವಿಜಯಲಕ್ಷ್ಮಿಗೆ ಧನ್ವೀರ್‌ ಪರೋಕ್ಷ ವಾರ್ನಿಂಗ್‌; ʻಪಬ್ಲಿಕ್‌ ಟಿವಿʼಗೆ ಫಸ್ಟ್‌ ರಿಯಾಕ್ಷನ್‌

 

ಆ ಸಮಯದಲ್ಲಿ ಮನೆಯಲ್ಲಿದ್ದ ಸಂಬಂಧಿ ಅಜಯ್ ಗೌಡ ಅವರನ್ನು ಕಂಡು ರೌಡಿ ಎಂದು ತಪ್ಪಾಗಿ ಭಾವಿಸಿದ ಮ್ಯಾನೇಜರ್ ನಾಗರಾಜ್, “ನೀವು ರೌಡಿಗಳನ್ನು ಕರೆಸಿದ್ದೀರಾ, ನಾನು ಈಗ ನೋಡಿ ರೌಡಿಗಳನ್ನು ಹೇಗೆ ಕರೆಸುತ್ತೇನೆ” ಎಂದು ಕೂಗಾಡಿದ್ದಾರೆ. ಬಳಿಕ ವಿಜಯಲಕ್ಷ್ಮಿ ಅವರು ಗೌರವ್ ಶೆಟ್ಟಿ ಎಂಬುವವರಿಗೆ ಕರೆ ಮಾಡಿ “ಬೋಜಣ್ಣ ಮತ್ತು ಬಾಟಲಿ ಪ್ರಮೋದ್‌ನನ್ನು ಕಳಿಸು” ಎಂದು ಹೇಳಿದ್ದಾರೆ. ನಾಗರಾಜ್ ಸಹ ಫೋನ್ ಮಾಡಿ ಅವರನ್ನು ಬರಹೇಳಿದ್ದು, ಕೆಲವೇ ನಿಮಿಷಗಳಲ್ಲಿ ಬೋಜ ಹಾಗೂ ಬಾಟಲಿ ಪ್ರಮೋದ್ ಧನ್ವೀರ್ ಅವರ ಮನೆಗೆ ಬಂದಿದ್ದಾರೆ.

ಮನೆಗೆ ಬಂದ ವ್ಯಕ್ತಿಗಳನ್ನು “ನೀವು ಯಾರು, ನಮ್ಮ ಮನೆಗೆ ಹೇಗೆ ಬಂದ್ರಿ?” ಎಂದು ಕೇಳಿದ್ದಕ್ಕೆ, ಬಾಟಲಿ ಪ್ರಮೋದ್ “ನಾನು ವಿಜಯಲಕ್ಷ್ಮಿ ತಮ್ಮ” ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, “ಧನ್ವೀರ್‌ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕೋ ನಮಗೆ ಗೊತ್ತಿದೆ” ಎಂದು ಜೋರು ಧ್ವನಿಯಲ್ಲಿ ಬೆದರಿಕೆ ಹಾಕಿದ್ದಾರೆ. ಈ ವೇಳೆ “ನಾನು ಪೊಲೀಸರಿಗೆ ಕರೆ ಮಾಡುತ್ತೇನೆ” ಎಂದು ನಾನು ಹೇಳಿದ ತಕ್ಷಣವೇ ಎಲ್ಲರೂ ಒಂದೇ ಕಾರಿನಲ್ಲಿ ಕೂಗಾಡಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಮ್ಮೇಗೌಡ ಉಲ್ಲೇಖಿಸಿದ್ದಾರೆ.

ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಜೀವ ಬೆದರಿಕೆ ಹಾಕಿರುವ ಶ್ರೀಮತಿ ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್, ಬೋಜ ಹಾಗೂ ಬಾಟಲಿ ಪ್ರಮೋದ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಧನ್ವೀರ್ ತಂದೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Share This Article
Exit mobile version