ಬೆಂಗಳೂರು: ಅಕ್ಟೋಬರ್ 31ಕ್ಕೆ ನಭೋಮಂಡದಲ್ಲಿ ಬ್ಲೂ ಮೂನ್ ವಿದ್ಯಮಾನ ಜರುಗಲಿದೆ. ಬ್ಲೂ ಮೂನ್ ಅಂದ್ರೆ ಚಂದಿರ ನೀಲಿ ಬಣ್ಣಕ್ಕೆ ಬದಲಾಗಲ್ಲ. ಚಂದ್ರನ ಮೂಲ ಬಣ್ಣವಾಗಿರುವ ನೀಲಿ ಬಣ್ಣದಲ್ಲೇ ಚಂದ್ರನಿರಲಿದ್ದಾನೆ.
ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬರುವ ಪ್ರಾಕೃತಿಕ ವಿದ್ಯಮಾನವನ್ನೇ ಬ್ಲೂಮೂನ್ ಅಂತಾ ಕರೆಯುತ್ತಾರೆ. ಪ್ರತಿ 2 ಅಥವಾ 3 ವರ್ಷಕ್ಕೊಮ್ಮೆ ಒಂದೇ ತಿಂಗಳಲ್ಲಿ 2 ಬಾರಿ ಹುಣ್ಣಿಮೆ ಸಂಭವಿಸುತ್ತದೆ. ಈ ರೀತಿ ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುವ ವಿಶೇಷತೆಯನ್ನ ಬ್ಲೂಮೂನ್ ಎಂದು ಹೇಳಲಾಗುತ್ತದೆ. ಖಗೋಳ ಶಾಸ್ತ್ರದ ಪ್ರಕಾರ 29.531 ದಿನ ಅಥವಾ 29 ದಿನ, 12 ಗಂಟೆ 44 ನಿಮಿಷ, 38 ಸೆಕೆಂಡುಗಳಿಗೆ ಒಂದು ಚಂದ್ರಮಾನ ತಿಂಗಳು ಅಂತಾ ಪರಿಗಣಿಸಲಾಗುತ್ತದೆ. ಹೀಗಾಗಿ 2-3 ವರ್ಷಗಳಿಗೆ ಒಮ್ಮೆ 31 ದಿನ ಇರುವ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಸಂಭವಿಸುತ್ತದೆ.
ಈ ತಿಂಗಳು ಅಕ್ಟೋಬರ್ 1ರಂದು ಹುಣ್ಣಿಮೆ ಘಟಿಸಿತ್ತು. ಈಗ ಇದೇ ತಿಂಗಳು ಅಕ್ಟೋಬರ್ 31ಕ್ಕೆ ಇನ್ನೊಂದು ಹುಣ್ಣಿಮೆ ಘಟಿಸುತ್ತಿದೆ. 2018ರಲ್ಲಿ ಕೂಡಾ ಬ್ಲೂಮೂನ್ ಸಂಭವಿಸಿತ್ತು. ಈಗ 2020 ಅಕ್ಟೋಬರ್ ನಲ್ಲಿ ಸಂಭವಿಸುತ್ತಿದೆ. ಮುಂದಿನ ಬ್ಲೂಮೂನ್ 2023ರ ಆಗಸ್ಟ್ 31ಕ್ಕೆ ಸಂಭವಿಸಲಿದೆ ಅನ್ನೋದು ವಿಜ್ಞಾನಿಗಳ ಮಾತಾಗಿದೆ. ಹಾಗಾಗಿ ಇದೊಂದು ಸಾಮಾನ್ಯ ವಿದ್ಯಮಾನ. ಸೌರವ್ಯೂಹದ ಸಾಮಾನ್ಯ ಪ್ರಕ್ರಿಯೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಚಂದ್ರ ಮತ್ತು ಸೂರ್ಯ ಗ್ರಹಣ ಕೂಡಾ ವಿಜ್ಞಾನಿಗಳ ಪ್ರಕಾರ, ಸಾಮಾನ್ಯ ಪ್ರಕ್ರಿಯೆ. ಆದರೆ ಗ್ರಹಣ ಕಾಲ ಮತ್ತು ನಂತರದಲ್ಲಿ ಆಗುವ ಅನಾಹುತಗಳನ್ನ ಮಾನವ ಸಂಕುಲ ಅನುಭವಿಸಿಕೊಂಡು ಬರುತ್ತಿದೆ. ಸೂರ್ಯ ಗ್ರಹಣವಾದ್ರೆ, ರವಿ ಅಗ್ನಿಕಾರಕ ಆಗಿರೋದರಿಂದ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತವೆ. ಚಂದ್ರಗ್ರಹಣವಾದ್ರೆ ಶಶಿ ಜಲಕಾರಕನಾಗಿರೋದ್ರಿಂದ ಜಲಪ್ರಳಯಕ್ಕೆ ಆಗುತ್ತೆ. ಈಗ ಅಕ್ಟೋಬರ್ 31ರಂದು ನಡೆಯಲಿರುವ ವಿಸ್ಮಯ ಚಂದ್ರನಿಗೆ ಸಂಬಂಧಿಸಿರೋದ್ರಿಂದ ಜಲಾಸುರ ಮತ್ತೆ ಆರ್ಭಟಿಸಲಿದ್ದಾನೆ ಎಂಬುವುದು ಜ್ಯೋತಿಷಿಗಳ ಮಾತು.