Year: 2025

  • ಚಿಕ್ಕಬಳ್ಳಾಪುರದಲ್ಲಿ ಹೆಚ್‌ಡಿಕೆ ಅಪ್ಪಟ ಅಭಿಮಾನಿ, ಜೆಡಿಎಸ್ ಮುಖಂಡನ ಭೀಕರ ಹತ್ಯೆ

    ಚಿಕ್ಕಬಳ್ಳಾಪುರದಲ್ಲಿ ಹೆಚ್‌ಡಿಕೆ ಅಪ್ಪಟ ಅಭಿಮಾನಿ, ಜೆಡಿಎಸ್ ಮುಖಂಡನ ಭೀಕರ ಹತ್ಯೆ

    ಚಿಕ್ಕಬಳ್ಳಾಪುರ: ಕೆಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಯವರ (H.D Kumaraswamy) ಅಪ್ಪಟ ಅಭಿಮಾನಿ ಹಾಗೂ ಜೆಡಿಎಸ್ (JDS) ಮುಖಂಡನನ್ನು ರಸ್ತೆ ಮಧ್ಯದಲ್ಲೆ ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ (Chikkaballapur) ತಮ್ಮನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಹತ್ಯೆಗೊಳಗಾದ ವ್ಯಕ್ತಿಯನ್ನು ಗ್ರಾಮದ ವೆಂಕಟೇಶ್ ಅಲಿಯಾಸ್ ಗೋಲ್ಡ್ ವೆಂಕಟೇಶ್ (50) ಎಂದು ಗುರುತಿಸಲಾಗಿದೆ. ಎಂದಿನಂತೆ ವೆಂಕಟೇಶ್ ರಾತ್ರಿ 9 ಗಂಟೆ ಸುಮಾರಿಗೆ ತಮ್ಮನಾಯಕನಹಳ್ಳಿ ಗೇಟ್ ನಲ್ಲಿರುವ ಮೆಡಿಕಲ್ ಸ್ಟೋರ್‌ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಸಂಚು ರೂಪಿಸಿ, ಮನೆಯತ್ತ ಸ್ಕೂಟಿ ಮೂಲಕ ಹೊರಟಿದ್ದ ವೆಂಕಟೇಶ್‌ ಅವರಿಗೆ ಅಡ್ಡ ಬಂದು ಲಾಂಗ್‌ನಿಂದ ಬಲವಾಗಿ ಬೀಸಲಾಗಿದೆ. ಪರಿಣಾಮ ಎಡಗೈ ತೋಳಿನ ಭಾಗ ಕಟ್ ಆಗಿ, ಗಾಡಿ ಸಮೇತ ವೆಂಕಟೇಶ್ ನೆಲಕ್ಕೆ ಬಿದ್ದಿದ್ದಾರೆ. ಕೂಡಲೇ ಮನಸ್ಸೋ ಇಚ್ಛೆ ಮುಖಕ್ಕೆ ಲಾಂಗ್ ನಿಂದ ಕೊಚ್ಚಲಾಗಿದೆ. ಹೊಟ್ಟೆಯ ಭಾಗಕ್ಕೆ ಬಲವಾಗಿ ಬೀಸಲಾಗಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

    ಹತ್ಯೆಯಾಗುವುದಕ್ಕೂ ಕೆಲವು ನಿಮಿಷಗಳ ಮುನ್ನ ವೆಂಕಟೇಶ್‌, ಮಗನಿಗೆ ಕರೆ ಮಾಡಿ ಮನೆಗೆ ಬರುತ್ತಿದ್ದು, ಮುದ್ದೆ ಮಾಡುವಂತೆ ತಿಳಿಸಿದ್ದರಂತೆ. ಆದರೆ ಅಷ್ಟರಲ್ಲೇ ದಾರಿ ಮಧ್ಯೆ ಕೊಚ್ಚಿ ಕೊಲೆ ಮಾಡಲಾಗಿದ್ದು, ದಾರಿ ಹೋಕರು ನೋಡಿ ಮಗನಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ.

    ಹತ್ಯೆಯಾದವರ ಮಗ ಪೊಲೀಸರ ಬಳಿ, ತಮ್ಮ ತಂದೆ ತಮ್ಮೂರಿನ ರಸ್ತೆಯಲ್ಲಿರುವ ಬಾರ್ ಬಳಿ ಕೆಲವು ಅಕ್ಕ ಪಕ್ಕದ ಗ್ರಾಮದ ಯುವಕರು ಕುಡಿದು ಗಲಾಟೆ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಬೈದು ಬುದ್ದಿವಾದ ಹೇಳಿದ್ದರು. ಹಾಗಾಗಿ ಆ ಹುಡುಗರು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾನೆ.

    ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಸೇರಿದಂತೆ ಸೋಕೋ ತಂಡ ಪರಿಶೀಲನೆ ನಡೆಸಿದೆ.

  • ಹೈಸ್ಕೂಲ್‌ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಕಾರು ಅಪಘಾತ – ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

    ಹೈಸ್ಕೂಲ್‌ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಕಾರು ಅಪಘಾತ – ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ

    ಗದಗ: ಹೈಸ್ಕೂಲ್‌ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದ ಕಾರು ಅಪಘಾತವಾಗಿ ಇಬ್ಬರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

    ಗದಗ ತಾಲೂಕಿನ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜ್ ಬಳಿ ಘಟನೆ ನಡೆದಿದೆ. ವೇಗವಾಗಿ ಬಂದ ಕಾರು, ರಸ್ತೆ ಪಕ್ಷದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಮಹಮ್ಮದ್ ಮುಜಾವರ್ (16), ಸಂಜೀವ್ ಗಿರಡ್ಡಿ (16) ಮೃತಪಟ್ಟಿದ್ದಾರೆ. ಆಶಿಸ್ ಗುಂಡುರ್ (16) ಸೇರಿದಂತೆ ಮತ್ತೋರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಅಕ್ರಮ ಕಸಾಯಿಖಾನೆ ಮೇಲೆ ಕೆರೂರು ಪೊಲೀಸರ ದಾಳಿ, ಪ್ರಕರಣ ದಾಖಲು

    ಹುಲಕೋಟಿ ರಾಜೇಶ್ವರಿ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿಸಿ ತಡರಾತ್ರಿ ಬರುವ ವೇಳೆ ಅಪಘಾತ ಸಂಭವಿಸಿದೆ. ನಾಲ್ಕು ಜನ ವಿದ್ಯಾರ್ಥಿಗಳು ಮಾತ್ರ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಗ್ಯಾದರಿಂಗ್ ಡ್ಯಾನ್ಸ್ ಮುಗಿಸಿಕೊಂಡು ಜೋಶ್‌ನಲ್ಲಿ ವಾಪಸ್‌ ಆಗುತ್ತಿದ್ದರು. ಅತಿಯಾದ ವೇಗವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.

    ಮೃತರ ದೇಹಗಳು ಹಾಗೂ ಓರ್ವ ಗಾಯಾಳು ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೋರ್ವ ಗಾಯಾಳು ವಿದ್ಯಾರ್ಥಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ – 2 ದಶಕಗಳಿಂದ ಬಗೆಹರಿಯದ ಸಮಸ್ಯೆ!

  • ದಿನ ಭವಿಷ್ಯ 04-01-2025

    ದಿನ ಭವಿಷ್ಯ 04-01-2025

    ಪಂಚಾಂಗ
    ಸಂವತ್ಸರ: ಕ್ರೋಧಿನಾಮ
    ಋತು: ಹೇಮಂತ, ಅಯನ: ದಕ್ಷಿಣಾಯನ
    ಮಾಸ: ಪುಷ್ಯ, ಪಕ್ಷ: ಶುಕ್ಲ
    ತಿಥಿ: ಪಂಚಮಿ, ನಕ್ಷತ್ರ: ಶತಭಿಷಾ

    ರಾಹುಕಾಲ: 09:33 – 10:59
    ಗುಳಿಕಕಾಲ: 06:42 – 08:08
    ಯಮಗಂಡಕಾಲ: 01:50 – 03:15

    ಮೇಷ: ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ, ಮೇಲಾಧಿಕಾರಿಗಳಿಂದ ಮೆಚ್ಚುಗೆ.

    ವೃಷಭ: ನಡೆಯಬೇಕಾದ ಕಾರ್ಯದಲ್ಲಿ ವಿಳಂಬ, ಕೆಲವು ನಿರ್ಧಾರಗಳಿಂದ ಹತಾಶೆ ಉಂಟಾಗಬಹುದು, ಕಳೆದು ಹೋದ ಅಮೂಲ್ಯ ವಸ್ತು ಸಿಗುವ ಸಾಧ್ಯತೆ.

    ಮಿಥುನ: ವ್ಯವಹಾರ ಉದ್ಯೋಗದಲ್ಲಿ ಸಫಲತೆ, ವಾಸ ಸ್ಥಳ ಬದಲಾವಣೆ, ಅತಿಯಾದ ಸ್ವಾಭಿಮಾನ ಸಲ್ಲದು.

    ಕರ್ಕಾಟಕ: ದಾಂಪತ್ಯದಲ್ಲಿ ಪರಸ್ಪರ ಸಹಕಾರ, ಆಸ್ತಿವಿಚಾರದಲ್ಲಿ ಬಂಧುಗಳಿಂದ ವಿರೋಧ, ಗುರುಹಿರಿಯರ ಮಾರ್ಗದರ್ಶನ ಅವಶ್ಯ.

    ಸಿಂಹ: ಪಾಲುದಾರರೊಂದಿಗೆ ತಾಳ್ಮೆಯಿಂದಿರಿ, ಹೈನುಗಾರಿಕೆ ಜೇನು ವ್ಯವಸಾಯಗಾರರಿಗೆ ಆದಾಯ, ಹಣಕಾಸಿನ ವಿಚಾರದಲ್ಲಿ ಹಿಡಿತ ಅಗತ್ಯ.

    ಕನ್ಯಾ: ಸಹೋದ್ಯೋಗಿಗಳೊಂದಿಗೆ ವೈಮನಸ್ಸು, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ, ಸ್ಥಿರಾಸ್ತಿ ಖರೀದಿ ಯೋಗ.

    ತುಲಾ: ವಿವಾಹ ಪ್ರಯತ್ನದಲ್ಲಿ ಯಶಸ್ಸು, ಆರೋಗ್ಯದಲ್ಲಿ ಕೊಂಚ ಏರುಪೇರು, ನಕಾರತ್ಮಕ ಯೋಚನೆಗಳಿಂದ ದೂರವಿರಿ.

    ವೃಶ್ಚಿಕ: ಮಾನಸಿಕ ಕಿರಿಕಿರಿ, ಸಹೋದರನೊಂದಿಗೆ ಜಗಳ, ಅತಿಯಾದ ಮಾತಿನಿಂದ ಅವಮಾನ.

    ಧನಸ್ಸು: ಸಮಸ್ಯೆಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ, ಆದಾಯಕ್ಕೆ ತಕ್ಕ ವೆಚ್ಚ, ಉದ್ಯೋಗದಲ್ಲಿ ಬದಲಾವಣೆ.

    ಮಕರ: ಜೀವನದಲ್ಲಿ ಆಭದ್ರತೆಯಿಂದ ಮಾನಸಿಕ ಒತ್ತಡ, ನೂತನ ಗೃಹ ನಿರ್ಮಾಣಕ್ಕೆ ಚಾಲನೆ, ಉನ್ನತ ವ್ಯಾಸಂಗದಲ್ಲಿ ಪ್ರಗತಿ.

    ಕುಂಭ: ಒತ್ತಡ ಜೀವನದಿಂದ ಬಿಡುವು ದೊರೆಯಲಿದೆ, ನೂತನ ಕೆಲಸ ಆರಂಭಿಸಲು ಸಕಾಲ, ಪ್ರತಿಭೆಗೆ ತಕ್ಕ ಪುರಸ್ಕಾರ.

    ಮೀನ: ಕುಟುಂಬ ಸದಸ್ಯರ ಜೊತೆ ಕಾಲಹರಣ, ದೈಹಿಕ ಶ್ರಮ ಹೆಚ್ಚಾಗಲಿದೆ, ದೈವಾನುಗ್ರಹದಿಂದ ಅಂದುಕೊಂಡ ಕೆಲಸ ಸುಲಭ.

  • ರಾಜ್ಯ ಹವಾಮಾನ ವರದಿ 04-01-2025

    ರಾಜ್ಯ ಹವಾಮಾನ ವರದಿ 04-01-2025

    ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮುಂಜಾನೆ ಹಾಗೂ ಸಂಜೆಯ ವೇಳೆ ಚಳಿ ಹೆಚ್ಚಾಗಿದೆ. ಇಂದು ಸಹ ಬಹುತೇಕ ಭಾಗಗಳಲ್ಲಿ ಚಳಿ ಮುಂದುವರೆಯಲಿದೆ. ಅಲ್ಲಲ್ಲಿ ತಣ್ಣನೆಯ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    uq contact el nino summer weather headline 2560x1440 1

    ನಗರಗಳ ಹವಾಮಾನ ವರದಿ:
    ಬೆಂಗಳೂರು: 25-15
    ಮಂಗಳೂರು: 31-21
    ಶಿವಮೊಗ್ಗ: 28-15
    ಬೆಳಗಾವಿ: 29-16
    ಮೈಸೂರು: 28-16

    WEATHER 1

    ಮಂಡ್ಯ: 28-16
    ಮಡಿಕೇರಿ: 28-14
    ರಾಮನಗರ: 27-16
    ಹಾಸನ: 26-14
    ಚಾಮರಾಜನಗರ: 30-15
    ಚಿಕ್ಕಬಳ್ಳಾಪುರ: 24-14

    Cold Weather

    ಕೋಲಾರ: 24-13
    ತುಮಕೂರು: 26-14
    ಉಡುಪಿ: 31-21
    ಕಾರವಾರ: 33-21
    ಚಿಕ್ಕಮಗಳೂರು: 25-13
    ದಾವಣಗೆರೆ: 28-17

    weather 1

    ಹುಬ್ಬಳ್ಳಿ: 29-16
    ಚಿತ್ರದುರ್ಗ: 26-15
    ಹಾವೇರಿ: 29-16
    ಬಳ್ಳಾರಿ: 28-16
    ಗದಗ: 27-15
    ಕೊಪ್ಪಳ: 28-16

    Weather

    ರಾಯಚೂರು: 29-17
    ಯಾದಗಿರಿ: 30-16
    ವಿಜಯಪುರ: 30-16
    ಬೀದರ್: 29-13
    ಕಲಬುರಗಿ: 31-14
    ಬಾಗಲಕೋಟೆ: 30-16

  • ಭಾರತದ ಜೊತೆ ಸ್ನೇಹ ಹಸ್ತ ಚಾಚಿ ಕಿರಿಕ್‌ – ಲಡಾಖ್‌ನಲ್ಲಿ 2 ಕೌಂಟಿ ರಚಿಸಿ ಚೀನಾ ಕ್ಯಾತೆ

    ಭಾರತದ ಜೊತೆ ಸ್ನೇಹ ಹಸ್ತ ಚಾಚಿ ಕಿರಿಕ್‌ – ಲಡಾಖ್‌ನಲ್ಲಿ 2 ಕೌಂಟಿ ರಚಿಸಿ ಚೀನಾ ಕ್ಯಾತೆ

    ನವದೆಹಲಿ: ಭಾರತದೊಂದಿಗೆ (India) ಸ್ನೇಹ ಹಸ್ತ ಚಾಚಿ ನಂತರ ಕಿರಿಕ್‌ ಮಾಡುವ ಚಾಳಿಯನ್ನು ಮತ್ತೆ ಚೀನಾ (China) ಮುಂದುವರಿಸಿದೆ. ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಅಕ್ಸಾಯ್ ಚಿನ್‌ನಲ್ಲಿ (Aksai Chin) ಚೀನಾ ಎರಡು ಹೊಸ ‘ಕೌಂಟಿ’ಗಳನ್ನು ರಚಿಸಿ  ಕ್ಯಾತೆ ತೆಗೆದಿದೆ.

    ಚೀನಾದ ಈ ಪ್ರಯತ್ನಕ್ಕೆ ಭಾರತ ಸರ್ಕಾರ ಶುಕ್ರವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.  ಭಾರತೀಯ ಭೂಪ್ರದೇಶದಲ್ಲಿ ಅಕ್ರಮ ಚೀನೀ ಆಕ್ರಮಣವನ್ನು ನಾವು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ವಿದೇಶಾಂಗ ಸಚಿವಾಲಯ ಖಾರವಾಗಿ ತಿಳಿಸಿದೆ.

     

    ವಾರದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್. ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿರುವ ಚೀನಾದ ಕ್ರಮವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಚೀನಾದ ಹೋಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಕೌಂಟಿಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕಟಣೆಯನ್ನು ನಾವು ನೋಡಿದ್ದೇವೆ. ಈ ಕೌಂಟಿಗಳೆಂದು ಕರೆಯಲ್ಪಡುವ ಅಧಿಕಾರ ವ್ಯಾಪ್ತಿಯ ಭಾಗಗಳು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿವೆ (Ladakh) ಎಂದು ಹೇಳಿದರು. ಇದನ್ನೂ ಓದಿ: ಚೀನಾದಲ್ಲಿ ಆರ್ಭಟಿಸುತ್ತಿದೆ ಹೊಸ ವೈರಸ್‌| ಸಾವಿರಾರು ಮಂದಿ ಆಸ್ಪತ್ರೆ ಪಾಲು – ವೈರಸ್ ಲಕ್ಷಣಗಳೇನು?

    ಹೊಸ ಕೌಂಟಿಗಳ ರಚನೆಯು ಪ್ರದೇಶದ ಮೇಲೆ ತನ್ನ ಸಾರ್ವಭೌಮತ್ವದ ಬಗ್ಗೆ ಭಾರತದ ದೀರ್ಘಕಾಲೀನ ಮತ್ತು ಸ್ಥಿರವಾದ ಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ಈ ನಡೆಯು ಈ ಪ್ರದೇಶವನ್ನು ‘ಅಕ್ರಮ’ವಾಗಿ ಹಾಗೂ ‘ಬಲವಂತ’ದಿಂದ ಆಕ್ರಮಿಸಿಕೊಳ್ಳಲು ಚೀನಾಕ್ಕೆ ಯಾವುದೇ ಅಧಿಕಾರ ನೀಡುವುದಿಲ್ಲ ಎಂದು ತಿಳಿಸಿದರು.

    Aksai Chin India China POK Map Ladakh

    ಅಕ್ಸಯ್‌ ಚೀನ್‌ ಏಲ್ಲಿದೆ?
    ಸ್ವಾತಂತ್ರ್ಯ ಗಳಿಸಿದ ನಂತರ ಭಾರತ ಮತ್ತು ಚೀನಾದ ಸಂಬಂಧ ಚೆನ್ನಾಗಿತ್ತು. ಆದರೆ ಕುತಂತ್ರಿ ಚೀನಾ ಭಾರತಕ್ಕೆ ಹಿಂದುಗಡೆಯಿಂದ ಚೂರಿ ಹಾಕಿತ್ತು. 1950 ರ ದಶಕದಲ್ಲಿ ಚೀನಾ ಟಿಬೆಟ್ ಸಂಪರ್ಕಿಸುವ ಸಲುವಾಗಿ ಅಕ್ಸಯ್‌ ಚೀನ್‌ ಪ್ರದೇಶದ ಮೂಲಕ ಮಿಲಿಟರಿ ರಸ್ತೆಯ ನಿರ್ಮಾಣಕ್ಕೆ ಕೈಹಾಕಿತ್ತು.

    ಚೀನಾದವರು ರಸ್ತೆ ನಿರ್ಮಿಸುವಾಗ ಭಾರತದ ಸೈನಿಕರು ಅಲ್ಲಿ ಗಸ್ತು ಕಾಯುತ್ತಿರಲಿಲ್ಲವೇ ಎಂಬ ಪ್ರಶ್ನೆ ಏಳುವುದು ಸಹಜ. ಈ ಸಂದರ್ಭದಲ್ಲಿ ಸೈನಿಕರು ಅಲ್ಲಿ ಗಸ್ತು ತಿರುಗುತ್ತಿರಲಿಲ್ಲ. ಯಾಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 5,000 ಮೀಟರ್ ಎತ್ತರದಲ್ಲಿದೆ. ಇಲ್ಲಿ ಜನವಸತಿ ಇಲ್ಲದ ಕಾರಣ ಅಲ್ಲಿ ಏನಾಗುತ್ತಿದೆ ಎನ್ನುವುದು ಅಷ್ಟು ಸುಲಭವಾಗಿ ತಿಳಿಯುತ್ತಿರಲಿಲ್ಲ. 1958ರಲ್ಲಿ 1,200 ಕಿಲೋಮೀಟರ್‌ ಉದ್ದದ ರಸ್ತೆಯನ್ನು ಚೀನಾ ನಿರ್ಮಾಣ ಮಾಡಿತ್ತು.

    1958ರಲ್ಲಿ ಈ ವಿಚಾರ ತಿಳಿಯುತ್ತಿದ್ದಂತೆ ಭಾರತ ಬಲವಾಗಿ ಚೀನಾ ನಡೆಯನ್ನು ವಿರೋಧಿಸಿತ್ತು. ಯಾವುದೇ ಯುದ್ಧ ಮಾಡದೇ ಭಾರತದ 38,000 ಚದರ ಕಿ.ಮೀ ಜಾಗವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಈ 38,000 ಚದರ ಕಿ.ಮೀ ಜಾಗವೇ ಈಗಿನ ಅಕ್ಷಯ್‌ ಚೀನ್‌. ಇದನ್ನು ಚೀನಾ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ.

  • ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯಸ್ನಾನ ಅಪವಿತ್ರಗೊಳಿಸುವ ಪ್ರಯತ್ನ ನಡೆದಿದೆ: ಈಶ್ವರಪ್ಪ ಬಾಂಬ್‌

    ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯಸ್ನಾನ ಅಪವಿತ್ರಗೊಳಿಸುವ ಪ್ರಯತ್ನ ನಡೆದಿದೆ: ಈಶ್ವರಪ್ಪ ಬಾಂಬ್‌

    ಶಿವಮೊಗ್ಗ: ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯಸ್ನಾನ ಅಪವಿತ್ರಗೊಳಿಸುವ ಪ್ರಯತ್ನ ನಡೆದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಬಾಂಬ್‌ ಸಿಡಿಸಿದರು.

    ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನಗೆ ತೊಂದರೆ ಕೊಟ್ಟವರು ಎಲ್ಲರೂ ಅನುಭವಿಸಿದ್ದಾರೆ. ಮುಂದೆಯೂ ಅನುಭವಿಸುತ್ತಾರೆ. ಗೋಶಾಲೆಗೆ ಗೋವುಗಳು ಬಾರದ ಹಿನ್ನೆಲೆ ಹೊಸ ಗೋ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈ ನಿರ್ಧಾರ ಹಿಂಪಡೆಯಬೇಕು. ಹಿಂದಿನ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ಸ್ಥಾಪಿಸಬೇಕು ಎಂದು ನಿರ್ಧರಿಸಿತ್ತು. ಮದರಸಾ, ಉರ್ದು ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚುತ್ತೀರಾ? ಎಂದು ಪ್ರಶ್ನಿಸಿದರು.

    ಮತ್ತೊಂದೆಡೆ ಮೃತ್ಯುಂಜಯ ನದಿಗೆ ಗೋ ಮಾಂಸದ ತ್ಯಾಜ್ಯ ಹಾಕಲಾಗಿದೆ. ಈ ನೀರು ನೇತ್ರಾವತಿ ನದಿಗೆ ಸೇರುತ್ತದೆ. ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯ ಸ್ನಾನವನ್ನು ಅಪವಿತ್ರಗೊಳಿಸುವ ಪ್ರಯತ್ನ ಇದು. ಗೋ ಹತ್ಯೆ ನಿಷೇಧವಿದ್ದರೂ ಇಷ್ಟೊಂದು ಗೋ ಮಾಂಸ ತ್ಯಾಜ್ಯ ಬಂದಿದ್ದು ಹೇಗೆ? ಹಿಂದೂ ಸಮಾಜಕ್ಕೆ ಮತ್ತು ನಂಬಿಕೆಗೆ ತೊಂದರೆ ಉಂಟು ಮಾಡುವವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದರು.

  • ಕಾಸ್‌ ಗಂಜ್‌ ಹಿಂಸಾಚಾರ ಕೇಸ್‌ – ಎಲ್ಲಾ 28 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಕಾಸ್‌ ಗಂಜ್‌ ಹಿಂಸಾಚಾರ ಕೇಸ್‌ – ಎಲ್ಲಾ 28 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

    ಲಕ್ನೋ: 2018ರಲ್ಲಿ ಕಾಸ್ ಗಂಜ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯವು 28 ಆರೋಪಿಗಳನ್ನು ದೋಷಿ ಗುರುತಿಸಿ, ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

    ಅಲ್ಲದೇ ವಿಶೇಷ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ವಿವೇಕಾನಂದ ಶರಣ್ ತ್ರಿಪಾಠಿ ಅವರು, ಪ್ರತಿ ಅಪರಾಧಿಗೂ ತಲಾ 80,000 ರೂ. ದಂಡ ವಿಧಿಸಿದೆ. ಇದನ್ನೂ ಓದಿ: ಕಲಬುರಗಿ | ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಬೈರತಿ ಸುರೇಶ್‌ಗೆ ಮನವಿ

    ಇಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯವು 2018ರ ತಿರಂಗಾ ಯಾತ್ರೆಯ ವೇಳೆ ಕಾಸ್‌ಗಂಜ್‌ನಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಗುಂಡು ಹಾರಿಸಿ ಕೊಲ್ಲಲ್ಪಟ್ಟ ಚಂದನ್ ಗುಪ್ತಾ ಅವರ ಹತ್ಯೆಗೆ ಸಂಬಂಧಿಸಿದಂತೆ ಜನವರಿ 2 ರಂದು, 28 ಆರೋಪಿಗಳನ್ನು ದೋಷಿ ಎಂದು ಗುರುತಿಸಿದ್ದು, ಇಂದು ಶಿಕ್ಷೆ ಪ್ರಕಟಿಸಿದೆ. ಆರೋಪಿಗಳಿಗೆ ಕೊಲೆ, ಕೊಲೆ ಯತ್ನ, ಗಲಭೆ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಏನಿದು ಪ್ರಕರಣ?
    2018ರ ಜನವರಿ 26 ರಂದು ಕಾಸ್ ಗಂಜ್‌ನಲ್ಲಿ ಹಿಂಸಾಚಾರ ನಡೆದಿತ್ತು. ಹಿಂದುತ್ವ ಸಂಘಟನೆಗೆ ಸೇರಿದ ಗುಂಪೊಂದು ಬೈಕ್ ನಲ್ಲಿ ತೆರಳಿ ಮುಸ್ಲಿಂ ಪ್ರಾಬಲ್ಯದ ಕಾಲೋನಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿತ್ತು. ವರದಿಗಳ ಪ್ರಕಾರ ಸ್ಥಳೀಯ ಆಡಳಿತದ ಅನುಮತಿಯಿಲ್ಲದೆ ಬೈಕ್ ರ‍್ಯಾಲಿ ನಡೆಸಿರುವ ಆರೋಪ ಕೇಳಿಬಂದಿತ್ತು. ಅಲ್ಲದೇ ಆ ಗುಂಪು ಕೇಸರಿ ಧ್ವಜ ಮತ್ತು ತ್ರಿವರ್ಣ ಧ್ವಜ ಹಿಡಿದುಕೊಂಡು ಕಾಲೋನಿಗೆ ಪ್ರವೇಶಿಸಿ ಅಲ್ಲಿನ ನಿವಾಸಿಗಳ ಜೊತೆ ವಾಗ್ವಾದ ನಡೆಸಿತ್ತು.

    ಪೊಲೀಸರ ಪ್ರಕಾರ, ಎರಡೂ ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಈ ವೇಳೆ ಚಂದನ್ ಗುಪ್ತಾ ಮೃತಪಟ್ಟಿದ್ದಾರೆ. ಕೋಮು ಘರ್ಷಣೆಯ ಕುರಿತು ಆರಂಭದಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಿತ್ತು. ಆದರೆ, ಈ ಪ್ರಕರಣದಲ್ಲಿ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿದ ಬಳಿಕ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ – 2 ದಶಕಗಳಿಂದ ಬಗೆಹರಿಯದ ಸಮಸ್ಯೆ!

  • ಅಕ್ರಮ ಕಸಾಯಿಖಾನೆ ಮೇಲೆ ಕೆರೂರು ಪೊಲೀಸರ ದಾಳಿ, ಪ್ರಕರಣ ದಾಖಲು

    ಅಕ್ರಮ ಕಸಾಯಿಖಾನೆ ಮೇಲೆ ಕೆರೂರು ಪೊಲೀಸರ ದಾಳಿ, ಪ್ರಕರಣ ದಾಖಲು

    ಬಾಗಲಕೋಟೆ: ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆ (Illegal Slaughter House) ಮೇಲೆ ಕೆರೂರು ಪೊಲೀಸರು (Kerur Police) ದಾಳಿ ನಡೆಸಿ 12 ಗೋವುಗಳನ್ನು ರಕ್ಷಿಸಿದ್ದಾರೆ.

    ಬಾದಾಮಿ (Badami) ತಾಲೂಕಿನ ಕೆರೂರು ಪಟ್ಟಣದ ಹಜರತ್ ನಿಬಿಸಾಬ್ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ. ಸಾರ್ವಜನಿಕರು ಎಷ್ಟೇ ಹೇಳಿದರೂ ಅಕ್ರಮ ಕಸಾಯಿಖಾನೆ ನಡೆಸುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: 25 ವರ್ಷದ ಬಳಿಕ ವಿದ್ಯಾರ್ಥಿಗಳ ಸಮಾಗಮ – ತರಗತಿಯಲ್ಲಿ ಗುರುಗಳ ಪಾಠ!

    Police raid illegal slaughter house on the outskirts of Kerur Badami Bagalkot 1

    ಇಂದು ಖಚಿತ ಮಾಹಿತಿ‌ ಮೇರೆಗೆ ಕೆರೂರು ಪಿಎಸ್‌ಐ ನೇತೃತ್ವದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿದ ಪೊಲೀಸರು ಅಲ್ಲಿರುವ ಗೋವುಗಳನ್ನು ರಕ್ಷಿಸಿದ್ದಾರೆ.

    ಗೋವುಗಳನ್ನ ಕೆರೂರು ಸಂತೆಯಲ್ಲಿ ಖರೀದಿಸುತ್ತಿದ್ದ ಹಜರತ್ ನಬಿಸಾಬ್ ನಂತರ ಅವುಗಳನ್ನು ಕತ್ತರಿಸಿ ಮಾಂಸಗಳನ್ನು ಬೇರೆಡೆಗೆ ಸಾಗಾಟ ಮಾಡುತ್ತಿದ್ದ. ಪೊಲೀಸರು ದಾಳಿ ನಡೆಸಿದ ವೇಳೆ ಕಸಾಯಿಖಾನೆಯಲ್ಲಿ 7 ಹಸು, 4 ಕರು ಸೇರಿದಂತೆ 12 ಹಸುಗಳು ಇರುವುದು ಬೆಳಕಿಗೆ ಬಂದಿದೆ.

    ಹಸುಗಳನ್ನು ರಕ್ಷಣೆ ಮಾಡಿ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಹಜರತ್ ನಿಬಿಸಾಬ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

     

  • ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ – 2 ದಶಕಗಳಿಂದ ಬಗೆಹರಿಯದ ಸಮಸ್ಯೆ!

    ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರರ ಮೇಲೆ ಕಾಡಾನೆ ದಾಳಿ – 2 ದಶಕಗಳಿಂದ ಬಗೆಹರಿಯದ ಸಮಸ್ಯೆ!

    ಮಡಿಕೇರಿ: ಬೈಕ್‌ನಲ್ಲಿ ತೆರಳುತ್ತಿದ್ದ ಸಹೋದರರಿಬ್ಬರ ಮೇಲೆ ಕಾಡಾನೆ ದಾಳಿ (Elephant Attack) ಮಾಡಿದ ಪ್ರಕರಣ ದಕ್ಷಿಣ ಕೊಡಗಿನ ಪೊನ್ನಂಪೇಟೆ ಬಳಿಯ ಹಳ್ಳಿಗಟ್ಟು ಗ್ರಾಮದಲ್ಲಿ ನಡೆದಿದೆ.

    ಮೊಹಮ್ಮದ್ ಫೈಜನ್ ಹಾಗೂ ಅಬುರ್ ಉವೈಸ್ ಸಹೋದರರು ಕಾಡಾನೆ ದಾಳಿಯಿಂದ ಗಾಯಗೊಂಡಿದ್ದು, ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ (Kodagu Hospital) ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ (ಜ.3) ಬೆಳಗ್ಗಿನ ಜಾವ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿದೆ. ಈ ಸಂದರ್ಭ ಸಹೋದರರು ಬಿದ್ದು ಗಂಭೀರ ಸ್ವರೂಪದ ಗಾಯಗಳಾಗಿದೆ. ಇಬ್ಬರಿಗೂ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಇದನ್ನೂ ಓದಿ: ದೂರು ಕೊಡಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ – ಮಧುಗಿರಿ ಡಿವೈಎಸ್ಪಿ ಬಂಧನ

    Kodagu 1

    ಬಗೆಹರಿಯದ ಸಮಸ್ಯೆ:
    ಕಳೆದ 2 ದಶಕಗಳಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿ ಹೆಚ್ಚುತ್ತಿದೆ. ಅದರಲ್ಲೂ ನಾಗರಹೊಳೆ ಅರಣ್ಯದ ಅಂಚಿನ ದಕ್ಷಿಣ ಕೊಡಗಿನ ಗ್ರಾಮಗಳು ಕಾಡಾನೆ ಹಾವಳಿಯಿಂದ ನಲುಗಿಹೋಗಿವೆ. ಇಲ್ಲಿನ ಗ್ರಾಮೀಣರು ಕಾಡಾನೆ ಹಾವಳಿಯಿಂದ ಒಂದೆಡೆ ಜೀವ, ಮತ್ತೊಂದೆಡೆ ಕೃಷಿ ಫಸಲನ್ನು ಕಳೆದುಕೊಳ್ಳುತ್ತಿದ್ದಾರೆ. ನೂರಾರು ಕಾಡಾನೆಗಳು ದಕ್ಷಿಣ ಕೊಡಗಿನ ಕಾಫಿ ತೋಟಗಳನ್ನೇ ತಮ್ಮ ನೆಲೆಯನ್ನಾಗಿಸಿಕೊಂಡಿವೆ. ಇವುಗಳನ್ನು ಅರಣ್ಯಕ್ಕೆ ಅಟ್ಟುವ ಸಾಕಷ್ಟು ಪ್ರಯತ್ನಗಳನ್ನು ಅರಣ್ಯ ಇಲಾಖೆ ನಡೆಸಿದೆ. ಆದರೂ ಕಾಡಾನೆಗಳು ಮರಳಿ ತೋಟಕ್ಕೆ ದಾಂಗುಡಿ ಇಡುತ್ತಿವೆ.

    ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಭೇಟಿ:
    ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಕಾಡಾನೆ ದಾಳಿಯಿಂದ ಗಾಯಗೊಂಡ ಸಂತ್ರಸ್ತರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: Kodagu | ವಿರಾಜಪೇಟೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ – ಜನರಲ್ಲಿ ಢವ ಢವ!

    ಅಲ್ಲದೇ ಜೀವ ಮತ್ತು ಬೆಳೆಹಾನಿಗೆ ಕಾರಣವಾಗುತ್ತಿರುವ ಕಾಡಾನೆಗಳನ್ನು ಸ್ಥಳಾಂತರಿಸುವ ಪ್ರಯತ್ನ ಸರ್ಕಾರದ ಮೂಲಕ ನಡೆಯುತ್ತಿದೆ. ಕೊಡಗು, ಚಿಕ್ಕಮಗಳೂರು, ಹಾಸನ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಗುರುತಿಸಿ ಅವುಗಳಿಗೆ ಪುನರ್ವಸತಿ ಒದಗಿಸಬೇಕಾಗಿದೆ. ಇದಕ್ಕೆ ಅಗತ್ಯ ಜಾಗ ಗುರುತಿಸುವ ನಿಟ್ಟಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈಗಾಗಲೇ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು 2-3 ವರ್ಷಗಳಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದು ಸಂಕೇತ್‌ ಹೇಳಿದ್ದಾರೆ.  ಇದನ್ನೂ ಓದಿ: ಕಲಬುರಗಿ | ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಬೈರತಿ ಸುರೇಶ್‌ಗೆ ಮನವಿ

  • ಕಲಬುರಗಿ | ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಬೈರತಿ ಸುರೇಶ್‌ಗೆ ಮನವಿ

    ಕಲಬುರಗಿ | ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಬೈರತಿ ಸುರೇಶ್‌ಗೆ ಮನವಿ

    ಕಲಬುರಗಿ: ನಗರಕ್ಕೆ ಆಗಮಿಸಿದ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾದ ಬೈರತಿ ಸುರೇಶ್‌ (Byrathi suresh) ಅವರನ್ನು ಕಲಬುರಗಿ ಮಹಾನಗರ ಪಾಲಿಕೆಯ (Kalaburagi Municipal Corporation) ಮೇಯರ್‌, ಉಪಮೇಯರ್‌ ಸೇರಿದಂತೆ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಪುಷ್ಫಗುಚ್ಛ ನೀಡಿ ಸ್ವಾಗತಿಸಿದರು.

    ಮೇಯರ್‌ ಯಲ್ಲಪ್ಪ ಎಸ್.ನಾಯಕೋಡಿ, ಮಾಜಿ ಮೇಯರ್‌ ಸಯ್ಯದ್ ಅಹ್ಮದ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪರವೀನ್ ಬೇಗಂ, ಶ. ಸಚಿನ ಶಿರವಾಳ, ಮುಹಮ್ಮದ್ ಅಜೀಮೊದ್ದಿನ್, ಇರ್ಫಾನಾ ಪರವೀನ್, ಲತಾ ರವೀಂದ್ರ ಕುಮಾರ, ಪಾಲಿಕೆಯ‌ ಸದಸ್ಯರು ಸಚಿವರನ್ನು ಸ್ವಾಗತಿಸಿ, ಮನವಿ ಸಲ್ಲಿಸಿದರು. ಇದನ್ನೂ ಓದಿ: ದೂರು ಕೊಡಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ – ಮಧುಗಿರಿ ಡಿವೈಎಸ್ಪಿ ಅಮಾನತು, ಬಂಧನ

    ಕಲಬುರಗಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನದ ಬೇಡಿಕೆ ಇದ್ದು, ರಸ್ತೆಗಳು ಮತ್ತು ಒಳಚರಂಡಿಗಳಿಗೆ 70 ಕೋಟಿ ರೂ. ಅನುದಾನದ ಅಗತ್ಯವಿದೆ. ಅಲ್ಲದೇ ಕಲಬುರಗಿ ನಗರದ ಹೊರವಲಯದಲ್ಲಿ 4 ದಿಕ್ಕಿನಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಸಲುವಾಗಿ ಭೂಮಿ ಖರೀದಿಸುವುದಕ್ಕಾಗಿ 100 ಕೋಟಿ ರೂ., ಮಹಾನಗರ ಪಾಲಿಕೆಯ ಸಭಾಭವನ ಕಟ್ಟಡಕ್ಕಾಗಿ 20 ಕೋಟಿ ರೂ., ರಸ್ತೆ ಅಗಲೀಕರಣಕ್ಕಾಗಿ 20 ಕೋಟಿ ರೂ., ಸರಡಗಿ ನಾಲಾ ಡೈವರ್ಶನ ಕಾಮಗಾರಿಗಾಗಿ 10 ಕೋಟಿ ರೂ., ನೀರು ಸರಬರಾಜು ಯೋಜನೆಗಾಗಿ 190.4 ಕೋಟಿ ರೂ., ಒಳಚರಂಡಿ ವ್ಯವಸ್ಥೆಗಾಗಿ 350 ಕೋಟಿ ರೂ. ಅನುದಾನ, ಉದ್ಯಾನವನ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನವನ್ನು ಕಲಬುರಗಿ ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಯಿತು.

    ಅಲ್ಲದೇ ಕಲಬುರಗಿ ಸ್ಥಳೀಯ ಪ್ರದೇಶದಲ್ಲಿ ಮಂಡಲ/ಗ್ರಾಮ ಪಂಚಾಯಿತಿಯಿಂದ ಹಸ್ತಾಂತರಗೊಂಡ ಮತ್ತು ಅನುಮೋದನೆಗೊಂಡ ವಿನ್ಯಾಸಗಳಲ್ಲಿಯ ನಿವೇಶನಗಳ ಕರವಸೂಲಿ, ಕಟ್ಟಡ ಪರವಾನಿಗೆ ಹಾಗೂ ಇನ್ನಿತರ ಎಲ್ಲಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸೂಕ್ತ ಮಾರ್ಗದರ್ಶನ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಕೋರಲಾಯಿತು.

    ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ನೀಡಲು ಪ್ರಸ್ತುತ ಇರುವ ವಲಯ ನಿಯಮಾವಳಿಗಳನ್ನು ಪರಿಷ್ಕರಿಸಿ ಕಲಬುರಗಿ ನಗರದ ಬೆಳವಣಿಗೆಗಾಗಿ ಕಟ್ಟಡದ ಎತ್ತರ 15 ಮೀಟರ್ ವರೆಗೆ ಹಾಗೂ ಎಫ್‌ಎಆರ್ 4 (ಗರಿಷ್ಠ) ವರೆಗೆ ಹೆಚ್ಚಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು. ಇದನ್ನೂ ಓದಿ: ಮಂಗಳೂರಿನಲ್ಲಿ NIA ಘಟಕ ಸ್ಥಾಪಿಸಿ – ದ.ಕ. ಸಮಗ್ರ ಅಭಿವೃದ್ಧಿಗೆ ಶಾಗೆ ಚೌಟ ಮನವಿ