– ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ : ಆರ್ಟಿಪಿಎಸ್ಗೆ ಹೊರೆ
ರಾಯಚೂರು: ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಸರಬರಾಜು ಮಾಡುತ್ತಿರುವ ಜಿಲ್ಲೆಯ ಆರ್ಟಿಪಿಎಸ್(ರಾಯಚೂರು ಥರ್ಮಲ್ ಪವರ್ ಸ್ಟೇಶನ್) ಇನ್ನು ಎಷ್ಟು ದಿನ ಕಾರ್ಯನಿರ್ವಹಿಸುತ್ತೋ ಗೊತ್ತಿಲ್ಲ. ಯಾಕಂದ್ರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಆರ್ಟಿಪಿಎಸ್ ಅವನತಿಯ ಹತ್ತಿರಕ್ಕೆ ಹೋಗುತ್ತಿದೆಯಾ ಅನ್ನೋ ಅನುಮಾನಗಳು ಮೂಡಿವೆ. ಬೇಸಿಗೆ ಹಿನ್ನೆಲೆ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೇಲೆ ಒತ್ತಡ ಬಿದ್ದಿದ್ದರೂ ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಈಗಾಗಲೇ ನೂರಾರು ಕಾರ್ಮಿಕರನ್ನ ಉದ್ಯೋಗದಿಂದ ಕೈಬಿಡಲಾಗಿದೆ. ಮುಖ್ಯಮಂತ್ರಿಗಳೇ ಆರ್ಟಿಪಿಎಸ್ ಮುಂದುವರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.
Advertisement
ಜಿಲ್ಲೆಯ ಶಕ್ತಿನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ ಇಡೀ ರಾಜ್ಯಕ್ಕೆ ಬಹುದೊಡ್ಡ ವಿದ್ಯುತ್ ಶಕ್ತಿಯ ಮೂಲವಾಗಿದೆ. ಆದರೆ ಇಲ್ಲಿನ 8 ಘಟಕಗಳ ನಿರ್ವಹಣೆ ಸಮಸ್ಯೆ ಹಾಗೂ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಯಾವಾಗ ವಿದ್ಯುತ್ ಕೇಂದ್ರಕ್ಕೆ ಬೀಗ ಬೀಳುತ್ತದೋ ಅನ್ನೋ ಅನುಮಾನಗಳು ಹುಟ್ಟಿಕೊಂಡಿವೆ.
Advertisement
ರಾಯಚೂರಿನ ವಿಧಾನಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಸದನದಲ್ಲಿ ಆರ್ಟಿಪಿಎಸ್ನಲ್ಲಿ ವಿದ್ಯುತ್ ಉತ್ಪಾದನಾ ಪ್ರಮಾಣ ಇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಿಎಂ, ಪ್ರಸ್ತುತ ನಿಯಮಗಳಂತೆ ವಿದ್ಯುತ್ ಉತ್ಪಾದನಾ ಘಟಕಗಳನ್ನು ಚಾಲನೆಗೊಳಿಸುವ ಅಥವಾ ಸ್ಥಗಿತಗೊಳಿಸುವ ನಿರ್ಧಾರವನ್ನು ಮೆರಿಟ್ ಆರ್ಡರ್ ಡಿಸ್ಚಾರ್ಜ್ ಆಧಾರದ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ ಅಂತ ಉತ್ತರಿಸಿದ್ದಾರೆ. ಈ ಮೂಲಕ ಆರ್ಟಿಪಿಎಸ್ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
Advertisement
Advertisement
ಬಹುತೇಕ ಘಟಕಗಳ ನವೀಕರಣ, ದುರಸ್ತಿ ಕಾರ್ಯಬಾಕಿಯಿದ್ದು, ಈ ಮಧ್ಯೆ ಸುಮಾರು 600 ಜನ ಕಾರ್ಮಿಕರನ್ನ ಕೈಬಿಡಲಾಗಿದೆ. ಬೇಸಿಗೆ ಹಿನ್ನೆಲೆ ಶಾಖೋತ್ಪನ್ನ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಾಗಿದೆ ಆದರೆ ಆರ್ಟಿಪಿಎಸ್ ನಲ್ಲಿ ವಿದ್ಯುತ್ ಉತ್ಪಾದನೆ ಇಳಿಮುಖವಾಗಿದೆ. ವಿದ್ಯುತ್ ಕೇಂದ್ರದ ಎಂಟು ಘಟಕಗಳ ಒಟ್ಟು ಸಾಮಥ್ರ್ಯ 1720 ಮೆಗಾವ್ಯಾಟ್ ಇದ್ದು ಸದ್ಯ 1334 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ತಾಂತ್ರಿಕ ಕಾರಣಕ್ಕೆ 8ನೇ ಘಟಕ ಕಾರ್ಯಸ್ಥಗಿತಗೊಳಿಸಿದೆ. ರಾಜ್ಯದ ವಿದ್ಯುತ್ ಬೇಡಿಕೆ 11609 ಮೆಗಾವ್ಯಾಟ್ ಇದ್ದು, ಇದನ್ನ ಸರಿದೂಗಿಸಲು ಆಗದೆ ಲೋಡ್ ಶಡ್ಡಿಂಗ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು, ರೈತರು ತೊಂದರೆಗಿಡಾಗಿದ್ದಾರೆ. ಪಂಪ್ ಸೆಟ್ಗೆ ವಿದ್ಯುತ್ ಕೊರತೆ ಉಂಟಾಗಿರುವುದಕ್ಕೆ ರೈತರು ಹೋರಾಟಗಳನ್ನೇ ನಡೆಸಿದ್ದಾರೆ.
ವಿದ್ಯುತ್ ಉತ್ಪಾದನಾ ವೆಚ್ಚ ಹಾಗೂ ಘಟಕಗಳು ಹಳೆಯದಾಗಿರುವ ಕಾರಣಕ್ಕೆ ವಿದ್ಯುತ್ ಕೇಂದ್ರ ಸ್ಥಗಿತವಾದರೆ ಸಾವಿರಾರು ಜನ ನಿರುದ್ಯೋಗಿಗಳಾಗುತ್ತಾರೆ. ಬೇಸಿಗೆ ಸಮಯದಲ್ಲಿ ವಿದ್ಯುತ್ ಕೇಂದ್ರವನ್ನ ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ರಾಜ್ಯದಲ್ಲಿ ವಿದ್ಯುತ್ ಕ್ಷಾಮವೇ ಎದುರಾಗಲಿದೆ. ಒಟ್ಟಿನಲ್ಲಿ ಆರ್ಟಿಪಿಎಸ್ಗೆ ವಯಸ್ಸಾಗುತ್ತಿರುವುದರಿಂದ ನಾನಾ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ.