ದಾವಣಗೆರೆ: ನಗರದ ಮಹಿಳೆ ಉದ್ಯೋಗಕ್ಕಾಗಿ ತನ್ನ ಇಬ್ಬರು ಮಕ್ಕಳನ್ನು ಅಣ್ಣನ ಮನೆಯಲ್ಲಿ ಬಿಟ್ಟು ಸೌದಿ ಅರೇಬಿಯಾಕ್ಕೆ ತೆರಳಿದ್ದು, ಊರಿಗೆ ಮರಳಲೂ ಬಿಡದೆ ಕೂಡಿಹಾಕಲಾಗಿತ್ತು. ಇದೀಗ ಸೌದಿಯಲ್ಲಿರುವ ಕನ್ನಡಿಗರ ಸಹಾಯದಿಂದ ಮಹಿಳೆಯನ್ನು ಸ್ವದೇಶಕ್ಕೆ ಕರೆತರಲಾಗಿದೆ.
Advertisement
ದಾವಣಗೆರೆ ನಗರದ ಆಜಾದ್ನಗರದ ಎರಡನೇ ಮುಖ್ಯರಸ್ತೆ, ಐದನೇ ಅಡ್ಡರಸ್ತೆಯ ನಿವಾಸಿ ಮಕ್ಬುಲ್ಸಾಬ್ ಅವರ ಮಗಳು ಫೈರೋಜಾ ಬಾನು ಭಾರತಕ್ಕೆ ವಾಪಸ್ಸಾದವರು. ಮಹಿಳೆಯ ಬಳಿ ಇರುವ ವಿಸಾ, ಪಾಸ್ ಪೋರ್ಟ್ ಕಸಿದುಕೊಂಡು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದರ ಬಗ್ಗೆ ಪಬ್ಲಿಕ್ ಟಿವಿ ಸಹ ವರದಿ ಮಾಡಿತ್ತು. ಇದೀಗ ಸೌದಿಯಲ್ಲಿರುವ ಕನ್ನಡಿಗರು ಮಾಡಿದ ಹೋರಾಟದ ಫಲವಾಗಿ, ಭಾರತ ಸರ್ಕಾರ ಮತ್ತು ಸೌದಿ ಅರೇಬಿಯಾ ಸರ್ಕಾರ ಸ್ಪಂದಿಸಿದ್ದರಿಂದ ಮಹಿಳೆ ಭಾರತಕ್ಕೆ ಮರಳಿದ್ದಾರೆ. ಕಳೆದ ಶನಿವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
Advertisement
ಮಕ್ಬುಲ್ ಸಾಬ್ ಜುಬೇದಾಬಿ ದಂಪತಿಗೆ ಏಳು ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳು. ಮೊದಲ ಮಗಳಾದ ಫೈರೋಜಾ ಬಾನುಗೆ 14 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೂರು ಮಕ್ಕಳಾದ ಮೇಲೆ ಗಂಡನೂ ಬಿಟ್ಟುಹೋಗಿದ್ದ. ಹೊಟ್ಟೆಪಾಡಿಗಾಗಿ ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಫೈರೋಜಾ ಬಾನು ಹೋಗಿದ್ದರು. ಬಳಿಕ ತಾಯಿ ಮೃತಪಟ್ಟಾಗ ನೋಡಲು ಕೂಡ ಕಳುಹಿಸಿಕೊಟ್ಟಿರಲಿಲ್ಲ, ವೇತನವನ್ನೂ ನೀಡಿರಲಿಲ್ಲ. ಅವರನ್ನು ಹೇಗಾದರೂ ಭಾರತಕ್ಕೆ ಕರೆಸಿ ಎಂದು ಆಕೆಯ ಸಹೋದರಿ ನಸ್ರೀನ್ಬಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
Advertisement
Advertisement
ಬಳಿಕ ಸೌದಿಯಾ ರಿಯಾದ್ನಲ್ಲಿ ಇರುವ ಪಡುಬಿದ್ರಿಯ ಹಮೀದ್ ಇವರಿಗೆ ಸ್ಪಂದಿಸಿದ್ದರು. ಅವರಿಗೆ ದಮಾಮ್ನಲ್ಲಿರುವ ಕಲಬುರ್ಗಿಯ ಯಾಸಿನ್ ಕೈ ಜೋಡಿಸಿದ್ದರು. ಈ ಇಬ್ಬರ ಪ್ರಯತ್ನದಿಂದ ಸೌದಿ ರಾಜಧಾನಿ ರಿಯಾದ್ನಿಂದ ಸುಮಾರು ಸಾವಿರ ಕಿಲೋಮೀಟರ್ ದೂರ ಇರುವ ಸಕಾಕಹ್ನಲ್ಲಿ ಫೈರೋಜಾ ಬಾನು ಇರುವುದು ಪತ್ತೆಯಾಗಿತ್ತು. ಸಕಾಕಹ್ನಲ್ಲಿ ಇರುವ ಕೇರಳದ ಸಲಿಂ ಎಂಬುವರ ನೆರವು ಪಡೆದುಕೊಂಡು ಅಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಭಾರತದ ವಿದೇಶಾಂಗ ಸಚಿವಾಲಯದ ಗಮನಕ್ಕೂ ತಂದಿದ್ದರು. ಜೊತೆಗೆ ಅಲ್ಲಿ ಹ್ಯೂಮನ್ ರೈಟ್ಸ್ ಕಮಿಷನ್ನ ಗಮನಕ್ಕೆ ತರಲಾಗಿತ್ತು. ಈ ಎಲ್ಲರ ಪ್ರಯತ್ನದ ಫಲವಾಗಿ ಫೈರೋಜ್ ಬಾನು ಅವರ ಕಫೀಲ್ ಭಾರತಕ್ಕೆ ಕಳುಹಿಸಿಕೊಡಲು ಒಪ್ಪಿದ್ದಾರೆ. ಬಳಿಕ ಶುಕ್ರವಾರ ಸಕಾಕಹ್ನಿಂದ ಕತಾರ್ಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ.