– ಗಂಡ, 2 ಮಕ್ಕಳನ್ನು ಕಳೆದುಕೊಂಡು ಒಬ್ಬಂಟಿಯಾದ ಪತ್ನಿ
ಶಿವಮೊಗ್ಗ: ಅವರು ಕೊರೊನಾ ಸೋಂಕಿನ ಜೊತೆ ಹೋರಾಡಿ ಬದುಕು ಮುಗಿಸಿದವರ ಶವಗಳ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಹೀಗೆ ಅಂತ್ಯಕ್ರಿಯೆ ನಡೆಸುತ್ತಾ ತನಗೂ ಈ ಮಾರಕ ಕಾಯಿಲೆ ಅಂಟಿಕೊಳ್ಳುತ್ತೆ ಎಂದು ಅವರು ಎಂದಿಗೂ ಭಾವಿಸಿರಲಿಲ್ಲ. ಆದರೆ ರೋಗ ಅವರಿಗೂ ವಕ್ಕರಿಸಿಸಿತ್ತು. ಕೊನೆಗೆ ಅವರು ಸೋಂಕಿಗೆ ಒಳಗಾಗಿ ಕೊನೆಯುಸಿರೆಳೆದರು. ಇದೀಗ ಪತಿಯನ್ನು ಕಳೆದುಕೊಂಡ ಪತ್ನಿ ಜೀವನ ನಿರ್ವಹಣೆಗಾಗಿ ಪರಿತಪಿಸುತ್ತಿದ್ದಾರೆ.
ಶಿವಮೊಗ್ಗದ ಹೊಸಮನೆ ತಾಂಡಾದ ನಿವಾಸಿ ಪಾಪನಾಯ್ಕ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದರು. ಪಾಲಿಕೆ ಅವರನ್ನು ಪಾಲಿಕೆಗೆ ಸೇರಿದ ಚಿತಾಗಾರದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವ ಕರ್ತವ್ಯಕ್ಕೆ ನಿಯೋಜಿಸಿತ್ತು. ಪಾಪನಾಯ್ಕ ಸಹ ಕಳೆದ ಒಂದೂವರೆ ವರ್ಷದಿಂದ ಇದೇ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಕೊರೊನಾ ಸೋಂಕು ಕಾಣಿಸಿಕೊಂಡಾಗಲು ಸಹ ನೂರಾರು ಸೋಂಕಿತರ ಶವಗಳ ಅಂತ್ಯಕ್ರಿಯೆ ನಡೆಸಿದ್ದರು.
Advertisement
Advertisement
ಸೋಂಕಿತರ ಶವಗಳನ್ನು ದಹಿಸುತ್ತಲೇ ತಾನು ಸಹ ಕೊರೊನಾ ಸೋಂಕಿಗೆ ತುತ್ತಾಗಿ ಕಳೆದ ಒಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಒಂದೆಡೆ ಕೈಹಿಡಿದ ಪತಿ ಕೊರೊನಾಗೆ ಬಲಿಯಾದರೆ ಮತ್ತೊಂದೆಡೆ ಈ ಹಿಂದೆಯೇ ಅವರ ಒಂದು ಮಗು ಮೃತಪಟ್ಟಿತ್ತು. ಅಲ್ಲದೇ ಕಳೆದ ಎರಡು ತಿಂಗಳ ಹಿಂದೆ ಇನ್ನೊಂದು ಮಗು ಸಹ ಇಹಲೋಕ ತ್ಯಜಿಸಿತು. ಹೀಗಾಗಿ ಪತಿ ಹಾಗೂ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡು ಪಾಪನಾಯ್ಕನ ಪತ್ನಿ ದಿಕ್ಕು ತೋಚದಂತಹ ಪರಿಸ್ಥಿತಿ ತಲುಪಿದ್ದಾರೆ.
Advertisement
Advertisement
ಮೃತ ಪಾಪನಾಯ್ಕ ಜೀವನ ನಿರ್ವಹಣೆಗೆ ತುಂಬಾ ಕಷ್ಟಪಡುತ್ತಿದ್ದರು. ಪಾಪನಾಯ್ಕ ಅವರಿಗೆ ಒಂದು ಹೆಣ್ಣು, ಒಂದು ಗಂಡು ಎರಡು ಮಕ್ಕಳಿದ್ದರು. ಎರಡು ಮಕ್ಕಳು ಸಹ ವಿಕಲಚೇತನರಾಗಿ ಜನಿಸಿದ್ದರು. ಈ ವಿಕಲಚೇತನ ಮಕ್ಕಳ ಚಿಕಿತ್ಸೆಗಾಗಿಯೇ ಪಾಪನಾಯ್ಕ ಸಾಕಷ್ಟು ಕಷ್ಟಪಡುತ್ತಿದ್ದರು. ಜೀವನ ನಿರ್ವಹಣೆಗೆ ಯಾವ ಕೆಲಸ ಆದರೂ ಸರಿ ಮಾಡುತ್ತೇನೆ ಎನ್ನುತ್ತಿದ್ದರು. ಹೀಗಾಗಿಯೇ ತಿಂಗಳಿಗೆ 14 ಸಾವಿರ ರೂಪಾಯಿ ವೇತನ ಬರುತ್ತಿದ್ದ ಅಂತ್ಯಕ್ರಿಯೆ ನೆರವೇರಿಸುವ ಕೆಲಸ ನಿರ್ವಹಿಸುತ್ತಿದ್ದರು.
ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಪ್ರತಿ ದಿನ ಮೃತಪಡುತ್ತಿದ್ದ ಸೋಂಕಿತರ ಪೈಕಿ ಮೂರ್ನಾಲ್ಕು ಮಂದಿಯನ್ನಾದರೂ ಅನಿಲ ಚಿತಾಗಾರದಲ್ಲಿ ಸುಡಲಾಗುತ್ತಿತ್ತು. ಇದರ ಕ್ರಿಯೆಯನ್ನು ಇವರೇ ಮಾಡುತ್ತಿದ್ದರು. ಹೀಗೆ ಸೋಂಕು ಶುರುವಾದಾಗಿನಿಂದ ಪಾಪನಾಯ್ಕ ಸುಮಾರು 100ಕ್ಕೂ ಹೆಚ್ಚು ಶವಗಳ ದಹನ ಕಾರ್ಯ ಮಾಡಿದ್ದಾರೆ. ಆದರೆ ಅದೇ ಕಾರ್ಯ ಅವರ ಜೀವಕ್ಕೆ ಮುಳುವಾಯಿತು. ಪಾಪನಾಯ್ಕ ಅವರು ಕೊರೊನಾ ಸೋಂಕಿನಿಂದ ಕಣ್ಣು ಮುಚ್ಚಿದರು. ಇವರು ಸಾಯುವುದಕ್ಕಿಂತ ಒಂದು ತಿಂಗಳ ಮುಂಚೆ ಇವರ ಮಕ್ಕಳು ಕೂಡ ಮೃತಪಟ್ಟಿದ್ದಾರೆ.
ಇದೀಗ ಪತ್ನಿ ಒಂಟಿ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಕೆಲ ನಿಯಮಾವಳಿಗಳು ಇವರನ್ನು ಕೊರೊನಾ ವಾರಿಯರ್ ಎಂದು ಘೋಷಿಸುವಲ್ಲಿ ಅಡ್ಡಿಯಾಗುತ್ತಿವೆ. ಆದರೆ ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಪತಿಯನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಬೇಕು. ಹೀಗೆ ಪರಿಗಣಿಸಿದ್ದೇ ಆದರೆ ಪಾಪನಾಯ್ಕ ಅವರ ಪತ್ನಿಗೆ ಸೂಕ್ತ ಪರಿಹಾರ ಹಾಗೂ ಸೌಲಭ್ಯಗಳು ದೊರಕುತ್ತವೆ. ಗಂಡ, ಮಕ್ಕಳಿಲ್ಲದ ಒಂಟಿ ಜೀವಕ್ಕೆ ಆಸರೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸವಿತಾಗೆ 3 ಲಕ್ಷ ರೂಪಾಯಿ ಪರಿಹಾರ ಧನ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಮಹಾನಗರ ಪಾಲಿಕೆ ಏನೋ ನಿರ್ಣಯ ತೆಗೆದುಕೊಂಡಿದೆ. ಆದರೆ ಇದುವರೆಗೂ ಪರಿಹಾರದ ಹಣವಾಗಲಿ, ಕೆಲಸವಾಗಲಿ ದೊರೆತಿಲ್ಲ. ಸರ್ಕಾರ ಕೂಡ ಅವರನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಿ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ.