ಚಾಮರಾಜನಗರ: ರಸ್ತೆಯ ಇಕ್ಕೆಲ್ಲದ ಹಸಿರಿಗೆ ಹಳದಿ ಸೀರೆಯುಟ್ಟಂತೆ ಭಾಸವಾಗುವಂತೆ ಸೂರ್ಯಕಾಂತಿ ಬೆಳೆದು ನಿಂತಿದ್ದು, ಕೃಷಿ ಭೂಮಿಗಳು ಸೆಲ್ಫಿ ಸ್ಪಾಟಾಗಿ ಬದಲಾಗಿವೆ. ಆದರೆ ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.
Advertisement
ಕೊರೊನಾ ಭೀತಿ ನಡುವೆಯೂ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಹಿಮವದ್ ಗೋಪಾಲಸ್ವಾಮಿಗೆ ಬರುತ್ತಿರುವ ಪ್ರವಾಸಿಗರ ದಂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೂರ್ಯಕಾಂತಿ ಜಮೀನುಗಳಿಗೆ ನುಗ್ಗಿ ಫೋಟೋ ಕ್ಲಿಕಿಸುತ್ತಿದ್ದಾರೆ. ಸೂರ್ಯಕಾಂತಿ ಫಸಲು ನಳನಳಿಸುತ್ತಿದ್ದು, ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ನೂರಾರು ಪ್ರವಾಸಿಗರು ಜಮೀನಿನಲ್ಲಿ 2-3 ತಾಸು ಸಮಯ ಕಳೆದು, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.
Advertisement
ಪ್ರವಾಸಿಗರ ಸೆಲ್ಫಿ ಸಂಭ್ರಮಕ್ಕೆ ಜಮೀನು ಮಾಲೀಕ ಅಭಿಷೇಕ್ ಗಿಡಗಳನ್ನು ತುಳಿದು ಹಾಳು ಮಾಡಬೇಡಿ, ಹೂವುಗಳನ್ನು ಕೀಳಬೇಡಿ ಎನ್ನುತ್ತಿದ್ದಾರೆ. ಅಲ್ಲದೆ ಪ್ರವಾಸಿಗರ ಬಳಿ 50 ರೂ. ಶುಲ್ಕ ಪಡೆಯುತ್ತಿದ್ದಾರೆ.
Advertisement
Advertisement
ಸೂರ್ಯನ ಕಿರಣಗಳತ್ತ ಮೋರೆ ತಿರುಗಿಸಿ ನಗು ಬೀರುವ ಸೂರ್ಯಕಾಂತಿ ಚೆಲುವಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ. ವೀಕೆಂಡ್ ಟ್ರಿಪ್ಪಿಗಾಗಿ ಬಂಡೀಪುರಕ್ಕೆ ತೆರಳುತ್ತಿದ್ದಾಗ ಈ ಜಮೀನಿನ ಚೆಲುವು ಕಂಡು ಬಂದೆವು ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ. ಪ್ರವಾಸಿ ತಾಣಗಳು ಮತ್ತೆ ಜನರಿಂದ ಗಿಜಿಗಿಜಿ ಎನ್ನುವ ಜೊತೆಗೆ ಸೂರ್ಯಕಾಂತಿ ಜಮೀನುಗಳಲ್ಲಿ ಸೆಲ್ಫಿ ಕ್ಲಿಕ್ ಸದ್ದು ಜೋರಾಗಿದೆ.