– 72 ಕೀಲಿಗಳನ್ನು ಕೋರ್ಟ್ಗೆ ನೀಡಿದ ಸಿಬಿಐ
– 103 ಕೆ.ಜಿ.ಚಿನ್ನ ನಾಪತ್ತೆ
ಚೆನ್ನೈ: ಕುತೂಹಲಕಾರಿ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದ್ದು, ಸಿಬಿಐ ಕಸ್ಟಡಿಯಲ್ಲಿದ್ದ ಬರೋಬ್ಬರಿ 45 ಕೋಟಿ ರೂ. ಬೆಲೆ ಬಾಳುವ 103 ಕೆ.ಜಿ. ಚಿನ್ನ ಕಾಣೆಯಾಗಿದೆ. ಸಿಬಿಐ ದಾಳಿ ನಡೆಸಿದ ವೇಳೆ ವಶಪಡಿಸಿಕೊಳ್ಳಲಾದ ಚಿನ್ನ ಇದಾಗಿದ್ದು, ನಾಪತ್ತೆಯಾಗಿದೆ.
ಕಾಣೆಯಾಗಿರುವ ಚಿನ್ನದ ಬಗ್ಗೆ ತನಿಖೆ ನಡೆಸುವಂತೆ ಮದ್ರಾಸ್ ಹೈ ಕೋರ್ಟ್ ಆದೇಶ ನೀಡಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸುವಂತೆ ಸಿಬಿ-ಸಿಐಡಿಗೆ ವಹಿಸಲಾಗಿದೆ. 2012ರಲ್ಲಿ ಚೆನ್ನೈನ ಸುರಾನಾ ಕಾರ್ಪೋರೇಷನ್ ಲಿಮಿಟೆಡ್ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದಾಗ 400.5 ಕೆ.ಜಿ. ಬೆಳ್ಳಿ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ 103 ಕೆ.ಜಿ.ಚಿನ್ನವನ್ನು ಎಗರಿಸಲಾಗಿದೆ.
Advertisement
Advertisement
ದಾಳಿ ಬಳಿಕ ವಶಪಡಿಸಿಕೊಳ್ಳಲಾದ ಚಿನ್ನಾಭರಣವನ್ನು ಸಿಬಿಐ ತನ್ನ ವಶದಲ್ಲಿ ಸುರಾನಾ ಕಾರ್ಪ್ನ ಸುರಕ್ಷಿತ ಕೊಠಡಿಗಳಲ್ಲಿ ಇಟ್ಟುಕೊಂಡಿತ್ತು. ಅಲ್ಲದೆ ಸಿಬಿಐ ಪ್ರಕರಣಗಳಿಗಾಗಿ ಇರುವ ಚೆನ್ನೈನ ಪ್ರಧಾನ ವಿಶೇಷ ನ್ಯಾಯಾಲಯಕ್ಕೆ 72 ಕೀಲಿಗಳನ್ನು ನೀಡಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.
Advertisement
Advertisement
ನ್ಯಾಯಾಲಯಕ್ಕೆ ನೀಡಿದ ವಿವರಣೆಯಲ್ಲಿ ಸಿಬಿಐ ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ್ದು, ವಶಪಡಿಸಿಕೊಳ್ಳುವ ಸಮಯದಲ್ಲಿ ಚಿನ್ನವನ್ನು ಒಟ್ಟಿಗೆ ತೂಕ ಮಾಡಲಾಗಿದೆ. ಇದನ್ನು ಲಿಕ್ವಿಡೇಟರ್ಗೆ ಹಸ್ತಾಂತರಿಸುವಾಗ ಚಿನ್ನವನ್ನು ಪ್ರತ್ಯೇಕವಾಗಿ ತೂಗಿಸಲಾಗುತ್ತದೆ. ವ್ಯತ್ಯಾಸಕ್ಕೆ ಇದೂ ಸಹ ಕಾರಣವಾಗಿದೆ ಎಂದು ತಿಳಿಸಿದೆ. ಸುರಾನಾ ಹಾಗೂ ಎಸ್ಬಿಐ ನಡುವಿನ ಸಾಲ ತೀರಿಸಲು ಲಿಕ್ವಿಡೇಟರ್ ನೇಮಿಸಲಾಗಿದೆ.
ಸಿಬಿಐ ವಾದವನ್ನು ಮದ್ರಾಸ್ ಹೈ ಕೋರ್ಟ್ ತಿರಸ್ಕರಿಸಿದ್ದು, ಎಸ್ಪಿ ಅಧಿಕಾರಿಯೊಂದಿಗೆ ಸಿಬಿ-ಸಿಐಡಿ ಅಧಿಕಾರಿಗಳಿಂದ ತನಿಖೆ ನಡೆಸಲು ಸೂಚಿಸಿದೆ. 6 ತಿಂಗಳೊಳಗೆ ತನಿಖೆ ಮುಗಿಸುವಂತೆ ನ್ಯಾಯಾಲಯ ಸಿಬಿ-ಸಿಐಡಿಗೆ ಸೂಚಿಸಿದೆ.
ಪ್ರಕರಣವನ್ನು ಸ್ಥಳೀಯ ಪೊಲೀಸರಿಗೆ ವಹಿಸಿದರೆ ನಮ್ಮ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ಹೈ ಕೋರ್ಟ್ ಪ್ರತಿಕ್ರಿಯಿಸಿ, ಕಾನೂನು ಅಂತಹ ಅನುಮಾನವನ್ನು ಅನುಮತಿಸುವುದಿಲ್ಲ. ಎಲ್ಲ ಪೊಲೀಸರನ್ನು ನಂಬಬೇಕು. ಸಿಬಿಐಗೆ ವಿಶೇಷ ಕೊಂಬುಗಳಿವೆ, ಸ್ಥಳೀಯ ಪೊಲೀಸರಿಗೆ ಬಾಲ ಮಾತ್ರ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದೆ.