– ಬಿಜೆಪಿಗೆ ಬನ್ನಿ ಜಿಟಿಡಿಗೆ ವಿಶ್ವನಾಥ್ ಆಹ್ವಾನ
– ಯೋಗೇಶ್ವರ್ ರಾಜ್ಯದ ಜನತೆಗೆ ಟೋಪಿ ಹಾಕ್ತಾನೆ
– ಹೈಕಮಾಂಡ್ಗೆ ರಾಜ್ಯದ ವಿಚಾರಗಳು ಗೊತ್ತಿಲ್ಲ
ಮೈಸೂರು: ಕುರುಬ ಸಮುದಾಯವನ್ನು ಎಸ್ ಟಿಗೆ ಸೇರಿಸಲು ಆಗ್ರಹಿಸಿ ಕುರುಬ ಸಮುದಾಯದ ಮಠಾಧೀಶರು ನಡೆಸುತ್ತಿರುವ ಪಾದಾಯಾತ್ರೆಗೆ ಆರ್ಎಸ್ಎಸ್ ಫಂಡ್ ನೀಡುತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಇಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ನೀವು ಹೀಗೆ ಮಾತು ಮುಂದುವರಿಸಿದರೆ ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಸಿದ್ದಾರೆ. ನೀವು ಹೇಳಿಕೆ ನೀಡುವ ಮೂಲಕ ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಾ. ಸಿದ್ದರಾಮಯ್ಯ ಆರೋಪ ಕೇಳಿ ನನಗೆ ಬಹಳ ನೋವಾಗಿದೆ. ಅವರು ನಮ್ಮ ಸಮುದಾಯದ ಸ್ವಾಮೀಜಿ, ಭಕ್ತಿ ಭಾವದಿಂದ ನೋಡುತ್ತಿದ್ದೇವೆ. ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ ಎಂದು ಹೇಳಿದ್ದಾರೆ.
Advertisement
Advertisement
ಇದು ನಿಮಗೆ ಗೌರವ ತರುತ್ತಾ?: ಸಿದ್ದರಾಮಯ್ಯ ಅವರು ಮರೆತಿದ್ದಾರೆ. ಮಠದಿಂದ ಆದ ಸಮುದಾಯ ಸಂಘಟನೆಯಿಂದಲೇ ಸಿದ್ದರಾಮಯ್ಯ ಸಿಎಂ ಆಗಿದ್ದು. ಸಿದ್ದರಾಮಯ್ಯ ಇದನ್ನು ಮರೆತಿದ್ದಾರೆ ಎಂದು ಟೀಕಿಸಿದ ವಿಶ್ವನಾಥ್, ನಿಮಗೆ ಮಠನೂ ಗೊತ್ತಿಲ್ಲ, ಸ್ವಾಮೀಜಿನೂ ಗೊತ್ತಿಲ್ಲ, ಮಠದ ಬಗ್ಗೆ ನಿಮಗೆ ಗೌರವ ಇಲ್ಲ ಎಂದರು. ಸಿದ್ದರಾಮಯ್ಯ ನಮ್ಮ ಸ್ವಾಮಿಗಳ ಮಾನ ಹರಾಜು ಹಾಕುತ್ತಿದ್ದಾರೆ. ಇದು ನಿಮಗೆ ಗೌರವ ತರುತ್ತಾ? ನಮ್ಮ ಬಗ್ಗೆ ನೀವು ಏನೂ ಬೇಕಾದ್ದು ಹೇಳಿ ಆದರೆ ಸಮುದಾಯದ ಗುರುಗಳ ಬಗ್ಗೆ ಮಾತನಾಡಬೇಡಿ. ಹೀಗೆ ಮಾತಾಡಿ ನೀವು ತುಂಬಾ ಚಿಕ್ಕವರಾಗಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ಸಿದ್ದರಾಮಯ್ಯ ಇಬ್ಬಂದಿತನವನ್ನು ನಿಲ್ಲಿಸಬೇಕು. ಅವರಿಗೆ ಬಹುಪರಾಕ್ ಹೇಳುವವರು ಬೇಕು. ಅವರಿಗೆ ವೈಯಕ್ತಿಕ ಪ್ರತಿಷ್ಠೆ ಮಾತ್ರ ಮುಖ್ಯ ಎಂದ ವಿಶ್ವನಾಥ್, ಸ್ವಾಮೀಜಿ ವಿರುದ್ಧದ ತಮ್ಮ ಹೇಳಿಕೆಯನ್ನು ಸಿದ್ದರಾಮಯ್ಯ ವಾಪಸ್ಸು ಪಡೆಯಬೇಕು. ಇಲ್ಲವಾದರೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತದೆ. ಸಿದ್ದರಾಮಯ್ಯ ಅವರ ಹೇಳಿಕೆ ನೋಡಿ ಸ್ವಾಮೀಜಿ ಸಾಕಷ್ಟು ಬೇಸರಗೊಂಡಿದ್ದಾರೆ. ಸ್ವಾಮಿಜಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದರು.
Advertisement
ಕುಲಶಾಸ್ತ್ರ ಅಧ್ಯಯನ ಮಾಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆಯೂ ವಿಶ್ವನಾಥ್ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ನೀನೊಬ್ಬನೆ ಬುದ್ಧಿವಂತ ಅಲ್ಲ. ನಮಗೂ ಅದು ಗೊತ್ತಿದೆ, ನೀನು ಹೋರಾಟಕ್ಕೆ ಬರುವುದಾದರೆ ಬಾ ಇಲ್ಲ ಬಿಡು. ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡಬೇಡ ಎಂದು ಹೇಳಿದರು.
ಕಾಂಗ್ರೆಸ್ ಸೇರಿ ಏಟು ತಿನ್ನಬೇಡಿ: ಜೆಡಿಎಸ್ ನಿಂದ ಒಂದು ಕಾಲು ಹೊರಗೆ ಇಟ್ಟಿರೋ ಶಾಸಕ ಜಿ.ಟಿ. ದೇವೇಗೌಡ ರನ್ನು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಿಜೆಪಿಗೆ ಆಹ್ವಾನಿಸಿದ್ದಾರೆ. ಜಿಟಿಡಿ ಕಾಂಗ್ರೆಸ್ ಹೋಗಿ ಏಟು ತಿಂದು ಒದ್ದಾಡುವ ಬದಲು ಬಿಜೆಪಿಗೆ ಬರಲಿ. ಅವರೊಬ್ಬ ಒಳ್ಳೆಯ ಸಂಘಟಕ ನಾಯಕರು. ಅವರಿಗೆ ದೊಡ್ಡ ಶಕ್ತಿ ಇದೆ ಎಂದು ಹೇಳಿದರು. ಎಲ್ಲಾ ಪಕ್ಷದ ಶಾಸಕಾಂಗ ಸಭೆಯ ನಾಯಕರ ನಡವಳಿಕೆಯೂ ಸರಿ ಇಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಅದೇ ರೀತಿ ಇದ್ದಾರೆ. ಇದರಿಂದಲೇ ಪಕ್ಷಗಳು ಹಾಳಾಗುತ್ತಿವೆ. ನಾನು ನಾನು ಅನ್ನೋದು ಎಲ್ಲರಿಗೂ ಬಂದಿದೆ. ಹೀಗಾಗಿಯೇ ಜಿ.ಟಿ ದೇವೇಗೌಡರನ್ನು ಆ ಪಕ್ಷದಲ್ಲಿ ನಿರ್ಲಕ್ಷಿಸುತ್ತಿರಬಹುದು ಎಂದರು.
ಸಿಪಿವೈ ಜನರಿಗೆ ಟೋಪಿ ಹಾಕ್ತಾನೆ: ಸಚಿವ ಸಂಪುಟ ವಿಸ್ತರಣೆ ಆಗಿರುವುದು ಸಿಎಂ ಪರಮಾಧಿಕಾರದಿಂದ. ಸಿಎಂಗೆ ಸಂಪುಟ ರಚಿಸುವ ವಿಸ್ತರಿಸುವ ಅಧಿಕಾರ ಇದೆ. ಇದರಲ್ಲಿ ಹೈ ಕಮಾಂಡ್ ಪಾತ್ರ ಏನು ಇಲ್ಲ. ಯಡಿಯೂರಪ್ಪ ಸುಮ್ಮನೇ ಹೈಕಮಾಂಡ್ ಅಂತಾ ತೋರಿಸುತ್ತಿದ್ದಾರೆ. ಹೈಕಮಾಂಡ್ಗೆ ರಾಜ್ಯದ ವಿಚಾರ ಏನು ಗೊತ್ತಿಲ್ಲ ಎಂದು ಹೇಳುವ ಮೂಲಕ ತಮಗೆ ಸಚಿವ ಸ್ಥಾನ ನೀಡದೆ ಇರೋದಿಕ್ಕೆ ಹೈಕಮಾಂಡ್ ಕಾರಣವಲ್ಲ ರಾಜ್ಯ ನಾಯಕರು ಕಾರಣ ಎಂದು ಪರೋಕ್ಷವಾಗಿ ಹೇಳಿದರು.
ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ದ ವಾಗ್ದಾಳಿ ಮುಂದುವರಿಸಿದ ಎಚ್. ವಿಶ್ವನಾಥ್, ಯೋಗೇಶ್ವರ್ಗೆ ಮೈಸೂರು ಉಸ್ತುವಾರಿ ನೀಡುತ್ತಾರೆ ಎಂಬ ವಿಚಾರದ ಬಗ್ಗೆ ಕಿಡಿಕಾರಿದರು. ಮೈಸೂರು ಏಕೆ ರಾಜ್ಯದ ಉಸ್ತುವಾರಿನೇ ನೀಡಿ. ಎಲ್ಲಾ ಕಡೆ ಮೆಗಾಸಿಟಿ ಮಾಡುತ್ತಾರೆ. ಮೈಸೂರಿಗೆ ಬಂದು ಇನ್ನೊಂದು ಮೆಗಾಸಿಟಿ ಮಾಡಿ ಇನ್ನು ಸ್ವಲ್ಪ ಜನರಿಗೆ ಟೋಪಿ ಹಾಕುತ್ತಾನೆ ಎಂದು ವಾಗ್ದಾಳಿ ನಡೆಸಿದರು.