– ಸಿಎಂ ಆಗಿದ್ದಾಗ ಪಟ್ಟ ಕಷ್ಟವನ್ನ ಎಳೆಎಳೆಯಾಗಿ ಹಂಚಿಕೊಂಡ್ರು
– ಯಾವತ್ತಿಗೂ ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ
– ಕೊರೊನಾ ಜಾಗೃತಿ ಮೂಡಿಸುವಂತೆ ಕಾರ್ಯಕರ್ತರಿಗೆ ಕರೆ
– ಕೊರೊನಾ ತಡೆಯುವಲ್ಲಿ ಬಿಜೆಪಿ ಸರ್ಕಾರ ವಿಫಲ
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಕಾರ್ಯಕರ್ತರಿಗೆ ಮನದಾಳದ ಮಾತನ್ನು ತಿಳಿಸಿದ್ದಾರೆ.
Advertisement
ರಾಜಕೀಯ ಸನ್ನಿವೇಶ ಹಾಗೂ ಮುಖ್ಯಮಂತ್ರಿ ಆದ ಕುರಿತು ಕಾರ್ಯಕರ್ತರಿಗೆ ಹೆಚ್ಡಿಕೆ ಸಂದೇಶ ಕೂಡ ರವಾನಿಸಿದ್ದಾರೆ. ಯಾವ ಸಂದರ್ಭದಲ್ಲಿ ಸಿಎಂ ಆದೆ, ರಾಜಕೀಯ ಏರಿಳಿತ ಹೇಗಾಯ್ತು ಅಂತ ವರು ಪತ್ರದ ಮೂಲಕ ವಿವರವಾಗಿ ತಿಳಿಸಿದ್ದಾರೆ. ಅಲ್ಲದೆ ಪಕ್ಷ ಸಂಘಟನೆಗೆ ಮತ್ತೆ ಒತ್ತು ನೀಡುವಂತೆ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
Advertisement
Advertisement
ಪತ್ರದಲ್ಲಿ ಏನಿದೆ..?
ನಿಮ್ಮ ಮಡಿಲಿಗೆ ಮನದಾಳದ ಮಾತು, ನಾನು ಎಂದಾದರೂ ಈ ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಈ ಮಾತನ್ನು ನಾನು ಮತ್ತೆ ಮತ್ತೆ ಹೇಳುತ್ತಲೆ ಬಂದಿದ್ದೇನೆ. ಮೊದಲ ಸಲ ಶಾಸಕನಾದ ಸಂದರ್ಭದಲ್ಲಿಯೇ ರಾಜಕೀಯ ಸನ್ನಿವೇಶವೊಂದು ನಾನು ಮುಖ್ಯಮಂತ್ರಿಯನ್ನಾಗುವ ಅವಕಾಶವನ್ನು ತಂದುಕೊಟ್ಟಿತು. ಬಹುಶಃ ಈ ರಾಜ್ಯದ ಜಡ್ಡುಗಟ್ಟಿದ ರಾಜಕೀಯ ನಿರ್ವಾತದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹೊಸತೊಂದು ಹೊಳಹುವುಳ್ಳ, ಚಲನಶೀಲವುಳ್ಳ, ವ್ಯಕ್ತಿಗತ ನೆಲೆಯಿಂದ ಸಾಮುದಾಯಿಕ ನೆಲೆಯವರೆಗೂ ಜನರ ದುಃಖ-ದುಮ್ಮಾನಗಳಿಗೆ ಮಿಡಿಯುವ, ದುಡಿಯುವ ತಾಯ್ತನದ ಸೇವಕನನ್ನು ಕಾಣುವ ನಿಮ್ಮ ಹಂಬಲ-ಹರಕೆಯ ಫಲವೇ ನಾನು ಮುಖ್ಯಮಂತ್ರಿಯಾಗಿದ್ದು ಎಂದು ಎಲ್ಲಾ ಕಾಲಕ್ಕೂ ಭಾವಿಸಿದ್ದೇನೆ.
Advertisement
ಕುಮಾರಸ್ವಾಮಿಯಾಗಿದ್ದ ನನ್ನನ್ನು ಕುಮಾರಣ್ಣನಾಗಿಸಿದ್ರಿ:
ಯಕಶ್ಚಿತ್ ‘ಹೆಚ್. ಡಿ ಕುಮಾರಸ್ವಾಮಿ’ ಆಗಿದ್ದ ನನ್ನನ್ನು ‘ಕುಮಾರಣ್ಣ’ ನನ್ನಾಗಿಸಿದ ನಿಮ್ಮ ಪ್ರೀತಿ, ವಿಶ್ವಾಸ ಎಂಬುದು ಎಲ್ಲಾ ಕಾಲಕ್ಕೂ ‘ರಾಜಕೀಯ’ ವನ್ನು ಮೀರಿದ್ದಾಗಿದೆ ಎಂಬುದನ್ನು ಬಲ್ಲೆ. ಅಧಿಕಾರ, ಸ್ಥಾನ-ಮಾನ, ಗೌರವಗಳು ಎಂದಿಗೂ ಶಾಶ್ವತವಲ್ಲ. ನಾನು ಅಧಿಕಾರದಲ್ಲಿದ್ದಾಗಲೂ, ಇಲ್ಲದಿದ್ದಾಗಲೂ ನೀವು ಇಟ್ಟ ಪ್ರೀತಿ-ವಿಶ್ವಾಸಗಳಿಗೆ ಎಂದಿಗೂ ದ್ರೋಹ ಬಗೆದಿಲ್ಲ. ಆದರೆ ನಾಡಿನ ಏಳಿಗೆಗೆ, ಜನರ ಹಿತ ಕಾಯುವಲ್ಲಿ ನಿರೀಕ್ಷಿತ ಗುರಿಯನ್ನು ತಲುಪಲಾಗಿಲ್ಲ ಎಂಬ ನೋವು ನನ್ನನ್ನು ಸದಾ ಕಾಡುತ್ತಲೆ ಇದೆ. ಇಂತಹ ಕಾರಣಗಳಿಗಾಗಿಯೇ ಜನರ ನೋವು-ಸಂಕಟಗಳನ್ನು ಕಂಡಾಗ ಕರುಳ ಬಳ್ಳಿಯ ನಂಟಿನ ಸಂಕಟದಂತೆ ನಾನು ಮತ್ತೆ ಮತ್ತೆ ನನ್ನ ಮಿತಿಯನ್ನೂ ಮೀರಿ ಕಣ್ಣೀರಾಗುತ್ತೇನೆ. ಇದನ್ನೂ ಓದಿ: ಜೆಡಿಎಸ್ನ 20 ಶಾಸಕರು ರಾಜೀನಾಮೆಗೆ ಸಿದ್ಧ
ಗೆದ್ದು ಬೀಗಿಲ್ಲ, ಸೋತು ಧೃತಿಗೆಟ್ಟಿಲ್ಲ:
ರಾಜಕಾರಣವೆಂದರೆ ಕೊಟ್ಟ ಕುದುರೆಯನ್ನು ಏರಲಾಗದೆ ಬಸವಳಿದವರೂ ಇದ್ದಾರೆ. ಕುಂಟ ಕುದುರೆಯನ್ನು ಏರಿ ಜನರ ದುಃಖ ದುಮ್ಮಾನಗಳಿಗೆ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದವರೂ ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಯಶಸ್ಸು ಮತ್ತು ಸೋಲು ಕಂಡವರ ಸೋದಾಹರಣ ಉದಾಹರಣೆಗಳು ಬಹಳಷ್ಟಿವೆ. ಇದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ದುರಂತವೂ ಹೌದು. ರಾಜ, ಮಹಾರಾಜರುಗಳು, ಪಾಳೇಗಾರರ ಆಡಳಿತದಲ್ಲಿಯೂ ಇತಿಹಾಸದುದ್ದಕ್ಕೂ ಇಂತಹ ನೂರಾರು ತಾಜಾ ನಿದರ್ಶನಗಳು ಅನುಚಾನವಾಗಿ ನಡೆದಿವೆ. ಹಾಗೆ ಎಂದ ಮಾತ್ರಕ್ಕೆ ನಾನು ಗೆಲುವುಗಳಿಂದ ಬೀಗಿಲ್ಲ. ಸೋಲುಗಳಿಂದ ಧೃತಿಗೆಟ್ಟಿಲ್ಲ. ಇಂತಹ ಮನೋಬಲಕ್ಕೆ ಜನರಿಟ್ಟಿರುವ ಪ್ರೀತಿ, ನಂಬಿಕೆಗಳೇ ಕಾರಣ.
ಜನಪರ ಸರ್ಕಾರ ಕೆಡವಲು ಬಿಜೆಪಿಯಿಂದ ಆಪರೇಷನ್ ಕಮಲ:
2018 ರಲ್ಲಿ ಜಾತ್ಯಾತೀತ ಜನತಾದಳ ಪಕ್ಷ ಗಳಿಸಿದ್ದು ಕೇವಲ 37 ಸ್ಥಾನಗಳಷ್ಟೇ. ಯಾವ ಪಕ್ಷಗಳಿಗೂ ಮತದಾರ ಬಹುಮತದ ಸ್ಪಷ್ಟ ಆದೇಶ ಕೊಟ್ಟಿರಲಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯುವ ಅತೀವ ನಿರೀಕ್ಷೆ ಹೊಂದಿದ್ದ ಭಾರತೀಯ ಜನತಾ ಪಕ್ಷ ಗದ್ದುಗೆಯ ಸನಿಹದಲ್ಲಿ ಮುಗ್ಗರಿಸಿ ಬಿತ್ತು. ಆನಂತರದ ಸ್ಥಾನ ಪಡೆದಿದ್ದ ಕಾಂಗ್ರೆಸ್, ಬಿಜೆಪಿಗೆ ಅಧಿಕಾರ ತಪ್ಪಿಸಲು ಜೆಡಿಎಸ್ ನೊಂದಿಗೆ ದೋಸ್ತಿಗೆ ಮುಂದಾಗಿ ಬೇಷರತ್ ಬೆಂಬಲವನ್ನು ವ್ಯಕ್ತಪಡಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಮುಖ್ಯಮಂತ್ರಿ ಗಾದಿಯನ್ನೇ ಬಿಟ್ಟುಕೊಟ್ಟಿತು. ಇದನ್ನೂ ಓದಿ: ರೈತರ ಸಾಲಮನ್ನಾ ಮಾಡಿಲ್ಲಾಂದ್ರೆ ರಾಜೀನಾಮೆ ನೀಡ್ತೇನೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ- ಎಚ್ಡಿಡಿ
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಅಧಿಕಾರದ ಕನಸು ಭಗ್ನಗೊಂಡಿದ್ದ ಬಿಜೆಪಿ ಆ ಕ್ಷಣದಿಂದಲೇ ನನ್ನ ನೇತೃತ್ವದ ದೋಸ್ತಿ ಸರ್ಕಾರ ‘ಅಸಮರ್ಥ ಸರ್ಕಾರ’ ಎಂದು ಬೊಬ್ಬೆ ಹೊಡೆಯತೊಡಗಿತು. ನಾನು ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣದಿಂದಲೇ ನಮ್ಮ ದೋಸ್ತಿ ಸರ್ಕಾರವನ್ನು ಕೆಡವಲು ಬಿಜೆಪಿ ಹತ್ತಾರು ಬಾರಿ ಕುಟಿಲ ರಾಜಕೀಯ ತಂತ್ರಗಳನ್ನು ಬಳಸಿ, ಮುಖಭಂಗವನ್ನೂ ಅನುಭವಿಸಿತು. 14 ತಿಂಗಳು ನನ್ನ ಅಧಿಕಾರಾವಧಿ ಮುಗಿಯುವ ಬೆನ್ನಲ್ಲೇ ವಾಮಮಾರ್ಗವನ್ನು ಅನುಸರಿಸಿ ಜನಪರ ಸರ್ಕಾರವನ್ನು ಕೆಡವಲು ಆಪರೇಷನ್ ಕಮಲದ ಮೂಲಕ ಮತ್ತೊಮ್ಮೆ ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಪೆಟ್ಟು ಹಾಕುವಲ್ಲಿ ಬಿಜೆಪಿ ಕೈ ಮೇಲಾಯಿತು. ಕುದುರೆ ವ್ಯಾಪಾರ ರಾಜಾರೋಷವಾಗಿ ನಡೆಯಿತು. ರಾಜ್ಯದ ಪ್ರಜ್ಞಾವಂತ ಜನರು ಇವೆಲ್ಲಾ ಅಪಸವ್ಯದ ಪ್ರಹಸನಗಳಿಗೆ ಮೂಕಸಾಕ್ಷಿಯಾದರು. ಅದು ಒತ್ತಟ್ಟಿಗಿರಲಿ. ಇದನ್ನೂ ಓದಿ: ಕುಮಾರಸ್ವಾಮಿಯಂತಹ ವಿಶ್ವಾಸದ್ರೋಹ ಯಾರೂ ಮಾಡಿಲ್ಲ- ಬಿ.ಸಿ.ಪಾಟೀಲ್
ಅಸಹನೆಯ ಕೆಂಡದುಂಡೆ ಉಗುಳುತ್ತಿದ್ದ ಕಾಂಗ್ರೆಸ್:
ಇದು ಬಿಜೆಪಿಯ ಕಥೆಯಾದರೆ, ರಾಜ್ಯ ಕಾಂಗ್ರೆಸ್ ನಾಯಕರ ಒಂದು ವರ್ಗ ಹೈಕಮಾಂಡ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದನ್ನು ಸಹಿಸಿಕೊಳ್ಳಲಾಗದೆ ನಾನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಅಸಹನೆಯ ಕೆಂಡದುಂಡೆ ಉಗುಳುತ್ತಿತ್ತು. ಕಾಂಗ್ರೆಸ್ಸಿನ ಆ ಗುಂಪು ಒಂದಷ್ಟು ಕಾಲಾವಕಾಶವನ್ನು ಹೈಕಮಾಂಡ್ ಕೊಟ್ಟಿದ್ದರೆ ಜೆಡಿಎಸ್ ಪಕ್ಷವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದೆವು. ನಾವೇ ಅಧಿಕಾರದ ಮುಂಚೂಣಿಯಲ್ಲಿ ಇರುತ್ತಿದ್ದೆವು ಎಂದು ನನ್ನ ಸರ್ಕಾರವನ್ನು ಕೆಡವಲು ರಹಸ್ಯ ಕಾರ್ಯಸೂಚಿಯ ಒಳ ತಂತ್ರಗಳಿಗೆ ಮೊರೆ ಹೋಗಿದ್ದು ಇನ್ನು ಹಚ್ಚಹಸಿರಾಗಿದೆ. ಇದನ್ನೂ ಓದಿ: 14 ತಿಂಗಳ ನೋವನ್ನು ಕುಮಾರಣ್ಣ ತಡೆದಿದ್ದಾರೆ- ಎಚ್.ಡಿ.ರೇವಣ್ಣ
‘ಸಿದ್ಧೌಷಧ’ ಮಂತ್ರ ಜಪಿಸಿದ್ದ ಕಾಂಗ್ರೆಸ್ಸಿಗರು:
ಸಿದ್ದರಾಮಯ್ಯ ಸರ್ಕಾರದ ಬಜೆಟ್ ನ ಲೇಖಾನುದಾನ ಪಡೆದು ಸರ್ಕಾರ ಮುಂದುವರಿಸಿದರೆ ಸಾಕು. ಹೊಸದಾಗಿ ಬಜೆಟ್ ಬೇಡ ಎಂದು ಕಾಂಗ್ರೆಸ್ಸಿನ ಕೆಲವರು ಒತ್ತಡ ತಂದರು. ಆದರೆ ರೈತರ ಸಾಲ ಮನ್ನಾ ಮಾಡುವ ಸಲುವಾಗಿ ಹೊಸದಾಗಿ ಎರಡು ಬಾರಿ ಬಜೆಟ್ ಮಂಡಿಸಿ 25 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲ ಮನ್ನಾ ಹಣ ಹಂಚಿಕೆ ಮಾಡಿದೆ. ಹಾಗಂತ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿರಲಿಲ್ಲ. ಮುಂದುವರಿಸಿಕೊಂಡು ಬಂದೆ. ಆದಾಗ್ಯೂ ಅವರಿಗೆ ತೃಪ್ತಿ ಆಗಿರಲಿಲ್ಲ. 14 ತಿಂಗಳ ಅವಧಿಯಲ್ಲಿ ಯಾವುದೇ ಲೋಪವನ್ನು ಮಾಡಲಿಲ್ಲ. ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವಂತೆ ಲೋಕಸಭಾ ಚುನಾವಣೆ ಮುಗಿಯಲಿ, ಅಲ್ಲಿಯವರಿಗೆ ತಡೆಯಿರಿ ಎಂಬ ‘ಸಿದ್ಧೌಷಧ’ ಮಂತ್ರ ಜಪಿಸುತ್ತಲೇ ಕಾಂಗ್ರೆಸ್ಸಿಗರು ಬಂದರು. ಅದು ಜಗಜ್ಜಾಹೀರಾಯಿತು.
ಮುಂದೆಂದೂ ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ:
ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ನನ್ನ ಸರ್ಕಾರ ತೆಗೆಯುವ ವಿಷಯದಲ್ಲಿ ಎಷ್ಟೊಂದು ಒಳ ಮತ್ತು ಕುಟಿಲ ತಂತ್ರಗಳ ಮೊರೆಹೋದರು ಎಂಬುದನ್ನು ಆ ದೊಡ್ಡ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಜೆಡಿಎಸ್ ಎಂದೂ ಮುಂದಾಗಿರಲಿಲ್ಲ. ಮುಂದೆಯೂ ಕೂಡ ಮೈತ್ರಿಗೆ ನಾವು ಹಪಾಹಪಿಸುತ್ತಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಎಂಟತ್ತು ಸ್ಥಾನಗಳನ್ನು ಗೆಲ್ಲುತ್ತಿದ್ದೆವು ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು. ಈಗಿನ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣದ ವೇಳೆ ಕಾರ್ಯಧ್ಯಕ್ಷರೊಬ್ಬರು ಜೆಡಿಎಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದು ಬೊಬ್ಬೆ ಹಾಕಿದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ನಮಗೆ ಮುಖ್ಯಮಂತ್ರಿ ಸ್ಥಾನ ಬೇಡ. ನಿಮ್ಮಲ್ಲೇ ಯಾರನ್ನಾದರೂ ಮುಖ್ಯಮಂತ್ರಿ ಮಾಡಿಕೊಳ್ಳಿ ಎಂದಾಗ ಕಾಂಗ್ರೆಸ್ ಹೈಕಮಾಂಡ್ ಒಪ್ಪಲಿಲ್ಲ. ಇದು ಕೂಡ ರಾಜ್ಯದ ಕಾಂಗ್ರೆಸ್ಸಿನ ಒಂದು ವರ್ಗದ ನಾಯಕರಿಗೆ ಅಪಥ್ಯವಾಗಿತ್ತು. ಪ್ರಮಾಣವಚನ ಸ್ವೀಕಾರ ಸ್ವೀಕಾರಕ್ಕೆ ದೇಶದ 24 ರಾಜ್ಯಗಳ ಪ್ರಮುಖ ನಾಯಕರು ಹಾಗೂ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದು ಕೂಡ ಕೆಲ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಕಾರಣವಾಗಿತ್ತು. ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಸಾಕು ಎಂದು ಸಲಹೆ ಕೂಡ ಕೊಟ್ಟಿದ್ದರು. ಬಿಜೆಪಿ ವಿರುದ್ಧ ದೇಶಕ್ಕೆ ಒಂದು ಸಂದೇಶ ರವಾನಿಸುವ ಉದ್ದೇಶದಿಂದ ವಿಧಾನಸೌಧದ ಎದುರು ಐತಿಹಾಸಿಕ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದೆ.
ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ:
ಬೇಷರತ್ ಬೆಂಬಲ ಎಂದ ಕಾಂಗ್ರೆಸ್ಸಿಗರು ನಂತರ ಸಂಪುಟದಲ್ಲಿ ಇಂತಿಷ್ಟು ಸ್ಥಾನಗಳು ಬೇಕು. ಇಂತಹದೇ ಖಾತೆಗಳು ಬೇಕು ಎಂದು ಕ್ಯಾತೆ ತೆಗೆದಿದ್ದು ಮಾತ್ರವಲ್ಲದೆ ನಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡರು. ನನ್ನನ್ನು ಗುಮಾಸ್ತನ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಹಲವು ಬಾರಿ ಹೇಳಿದ್ದು ಉಂಟು. ಕಾಂಗ್ರೆಸ್ ನಾಯಕರು ಇದನ್ನು ಪರಮಾರ್ಶೆ ಮಾಡಿಕೊಳ್ಳಲಿ.
ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಜೆಡಿಎಸ್ನ ಕೇಂದ್ರ ಕಚೇರಿಯಲ್ಲಿ ಪಕ್ಷ ಸನ್ಮಾನ ಸಮಾರಂಭ ಇಟ್ಟುಕೊಂಡಾಗ ಬಹಿರಂಗವಾಗಿಯೇ ಕಣ್ಣೀರು ಹಾಕಿದೆ. ಒಳಗೊಂದು ಹೊರಗೊಂದು ಇಲ್ಲದ ನಾನು ‘ನಾನು ವಿಷಕಂಠನ ಸ್ಥಿತಿಯಲ್ಲಿದ್ದೇನೆ..’ ಎಂದು ಬಹಿರಂಗವಾಗಿಯೇ ನನ್ನ ಮನಸಿನ ನೋವುಗಳನ್ನು ವ್ಯಕ್ತಪಡಿಸಿದ್ದೆ. ಇದೊಂದೇ ವಿಷಯ ವಾರಗಟ್ಟಲೇ ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹುದೊಡ್ಡ ಗಂಭೀರ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಇದರ ಹಿಂದೆ ಇದ್ದದ್ದು ಜನಪರವಾದ ನನ್ನ ಮನೋಬಲವನ್ನು ಕುಗ್ಗಿಸುವ ಕ್ಷುಲ್ಲಕ ರಾಜಕಾರಣವಷ್ಟೇ. ಸಂವೇದನಾಹೀನರ ಅಪವ್ಯಾಖ್ಯಾನಗಳಿಗೆ ನನ್ನ ಕಣ್ಣೀರು, ಸಂಕಟ ತುತ್ತಾಗಿ ಹೋಯಿತು.
ರಾಜೀನಾಮೆ ಬಳಿಕ ಬಿಜೆಪಿ ಸರ್ಕಾರದ ಕಿವಿ ಹಿಂಡಿದ್ದೆ:
2019ರ ಜುಲೈ 22ರಂದು ರಾಜೀನಾಮೆ ಕೊಟ್ಟು ಹೊರ ಬರುವಾಗ ನಾನು ‘ಸಂತೋಷದಿಂದಲೇ ಅಧಿಕಾರದಿಂದ ನಿರ್ಗಮಿಸುತ್ತಿದ್ದೇನೆ’. ಎಂದು ರಾಜ್ಯ ವಿಧಾನಸಭೆಯಲ್ಲಿ ನಗುಮೊಗದಿಂದಲೇ ಹೇಳಿ ಹೊರ ನಡೆದೆ. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿಯ ‘ಪವಿತ್ರ’ ಸರ್ಕಾರಕ್ಕೆ ನೆರೆ ಹಾವಳಿಯಿಂದ ನಲುಗಿದ ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಂತೆ ರಚನಾತ್ಮಕ ಸಲಹೆಗಳ ಮೂಲಕ ಕಿವಿ ಹಿಂಡಿದ್ದೆ. ಇದು ವಿಪಕ್ಷಿಗನಾಗಿ ನನ್ನ ಹೊಣೆಗಾರಿಕೆಯೂ ಆಗಿತ್ತು. ಆದರೆ ಅಗ್ನಿದಿವ್ಯದಿಂದ ಎದ್ದು ಬಂದಂತೆ ಅಹಂಕಾರ- ಆತ್ಮರತಿಯಲ್ಲಿದ್ದ ಬಿಜೆಪಿಯ ‘ಪವಿತ್ರ ಸರ್ಕಾರ’ ವಿರೋಧ ಪಕ್ಷಗಳ ಶಾಸಕರುಗಳ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಕಡಿತಗೊಳಿಸಿ ‘ನೀಚ ರಾಜಕಾರಣ’ಕ್ಕೆ ಮುನ್ನುಡಿ ಬರೆಯಿತು. ಇದೆಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದ ನನಗೆ ಬಿಜೆಪಿಯ ಸರ್ಕಾರವನ್ನು ವಾಮಮಾರ್ಗ ಬಳಸಿ ತೆಗೆಯುವ ನೀಚ ಮನಸ್ಥಿತಿ ನನ್ನದಾಗಿರಲಿಲ್ಲ. ಅವರಂತೆ ಪ್ರಜಾಪ್ರಭುತ್ವದ ಕೊರಳು ಕುಯ್ಯುವ ಕಲೆ ಪ್ರಜಾಪ್ರಭುತ್ವದ ‘ಕೊಲೆ’ ಎಂಬುದು ನನ್ನ ಆತ್ಮಸಾಕ್ಷಿಗೆ ಮನವರಿಕೆಯಾಗಿತ್ತು. ಜನತೆಯ ಕಷ್ಟ-ಸುಖಗಳಿಗೆ ಸ್ಪಂದಿಸದ ಈ ಸರ್ಕಾರದ ಆಡಳಿತ ವೈಖರಿಯಿಂದ ನೆರೆ ಸಂತ್ರಸ್ತರು ಈಗಲೂ ಆಗಸವೇ ಛಾವಣಿ. ಭೂಮಿಯೇ ಮನೆಯ ಅಂಗಳ ಎಂದು ಮಳೆ, ಚಳಿ, ಬಿಸಿಲಿನ ಬೇಗೆಯಲ್ಲಿ ಬೇಯುತ್ತಿದ್ದಾರೆ.
ನನ್ನ ಸರ್ಕಾರದ ಸಾಧನೆಗಳ ಹಿನ್ನೋಟ:
ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಕೆಲವು ಭರವಸೆಗಳಿಂದಾಗಿ ರೈತರು, ವೃದ್ಧರು, ವ್ಯಾಪಾರಿಗಳು, ಕೈಗಾರಿಕೋದ್ಯಮಿಗಳು ಸರ್ಕಾರದ ಮೇಲೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸರ್ಕಾರ ಈ ಭರವಸೆಗಳನ್ನು ಅನುಷ್ಠಾನಗೊಳಿಸಲು ಹಲವಾರು ಯೋಜನೆ ಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ ಗೊಳಿಸಲಾಯಿತು. ಜಾನಪದ ರೈತರ ಸಾಲಮನ್ನಾ (25 ಸಾವಿರಕೋಟಿ ರೂಪಾಯಿಗಳು) ಬಡವರ ಬಂಧು, ಇಸ್ರೇಲ್ ಮಾದರಿ ಕೃಷಿ, ಜನತಾ ದರ್ಶನ, ಐರಾವತ , ಕರ್ನಾಟಕ ಪಬ್ಲಿಕ್ ಶಾಲೆ, ರೈತರಿಗೆ ಋಣಮುಕ್ತ ಪತ್ರ, ಏಳು ಜಿಲ್ಲೆಗಳಲ್ಲಿ ಕ್ಲಸ್ಟರ್ ಗಳ ಸ್ಥಾಪನೆ ಮೂಲಕ ಕಾಂಪೀಟ್ ವಿಥ್ ಚೀನಾ ಯೋಜನೆಗೆ ಚಾಲನೆ, ಬೆಂಗಳೂರು ತ್ಯಾಜ್ಯಮುಕ್ತ ನಗರ, ಎಲಿವೇಟೆಡ್ ಕಾರಿಡಾರ್ , ವಾಣಿಜ್ಯ ರಸ್ತೆಗಳ ಅಗಲೀಕರಣ, ಉಪನಗರ ರೈಲು, ಪೇರಿಫೆರಲ್ ರಿಂಗ್ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಸರ್ಕಾರ ರಾಜ್ಯದ ಎಲ್ಲಾ ವರ್ಗವನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ.
ಕೋವಿಡ್-19 ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲ:
ಇಂದು ಇಡೀ ಜಗತ್ತನ್ನೇ ಅಲುಗಾಡಿಸಿದ ಕೋವಿಡ್-19 ಅರ್ಥಾತ್ ಕೊರೋನಾ ವೈರಸ್ ಭಾರತಕ್ಕೂ ಅಪ್ಪಳಿಸಿ ಐದಾರು ತಿಂಗಳಾಯಿತು. ಕೊರೊನಾ ವೈರಸ್ ತಡೆಯುವಲ್ಲಿ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ, ವೆಂಟಿಲೇಟರ್ಗಳ ಸಮರ್ಪಕ ಪೂರೈಕೆ ಮಾಡುವಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಾನೂ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಕೋವಿಡ್ 19 ತಡೆಗೆ ಮತ್ತು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರಂಭದಿಂದಲೂ ನೀಡಿದ ಮೌಲಿಕ ಸಲಹೆಗಳನ್ನು ಈ ಬಿಜೆಪಿ ಸರ್ಕಾರ ಗಂಭೀರವಾಗಿಯೇ ಪರಿಗಣಿಸಲಿಲ್ಲ. ಈಗ ಕೊರೊನಾ ಸಮುದಾಯಕ್ಕೆ ಹಬ್ಬತೊಡಗಿದೆ. ಈ ಸರ್ಕಾರ ಎಂತಹ ದಯನೀಯ ಸ್ಥಿತಿಗೆ ತಲುಪಿದೆ ಎಂದರೆ ‘ಹೇ ದೇವರೆ ನೀನೇ ಕಾಪಾಡಬೇಕು’ ಎಂಬಲ್ಲಿಗೆ ಬಂದು ನಿಂತಿದೆ. ನೆರೆ ಸಂತ್ರಸ್ತರು, ಕೊರೊನಾ ಸೋಂಕಿತರು, ಲಾಕ್ಡೌನ್ ನಿಂದ ಬೀದಿಗೆ ಬಿದ್ದಿರುವ ಶ್ರಮಿಕ ವರ್ಗ ರಿಕ್ಷಾ- ಟ್ಯಾಕ್ಸಿ ಚಾಲಕರು, ನೇಕಾರರು, ಸವಿತಾ ಸಮಾಜದವರು, ಚಮ್ಮಾರರು ಸೇರಿದಂತೆ ವಿವಿಧ ವರ್ಗಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆಯನ್ನು ಮಾಡಿದ್ದಾದರೂ ಅದು ಅನುಷ್ಠಾನಕ್ಕೆ ಬರಲಿಲ್ಲ. ಈ ಬಗ್ಗೆ ಬಿಜೆಪಿಯ ಮುಖ್ಯಮಂತ್ರಿಗಳು ಯಾರನ್ನೂ ಪ್ರಶ್ನಿಸುವುದು ಬೇಡ. ನಿಮಗೆ ಆತ್ಮಸಾಕ್ಷಿ ಎಂಬುದಿದ್ದರೆ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ. ಆತ್ಮವಿಮರ್ಶೆಗಿಂತ ಮಿಗಿಲಾದದ್ದು ಇನ್ನೊಂದಿಲ್ಲ. ಈ ಮಧ್ಯೆ ಎಪಿಎಂಪಿ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರಲಾಯಿತು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೂ ಅಂಕಿತ ಹಾಕಲಾಯ್ತು. ಈ ನಿಮ್ಮ ಉದ್ದೇಶ ರೈತರನ್ನು, ಬಡವರನ್ನು ಉದ್ಧಾರ ಮಾಡುವುದಕ್ಕಿಂತ ಅವರನ್ನು ಬೀದಿಗೆ ನೂಕುವುದೇ ಆಗಿದೆ. “ಉಳುವವನೆ ಹೊಲದೊಡೆಯ” ಎಂಬುದನ್ನು “ಉಳ್ಳವನೇ ಹೊಲದೊಡೆಯ” ಎಂಬ ವ್ಯಾಖ್ಯಾನಕ್ಕೆ ತೂಗು ಹಾಕಿರುವುದು ಸರ್ಕಾರ ಯಾರ ಪರ ನಿಂತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.
“ಯಾವ ರಾಜ ಅಧರ್ಮದ ದಾರಿಯಲ್ಲಿ ಸಾಗುತ್ತಾನೋ ಅವನಿಗೆ ತನ್ನ ಪ್ರಜೆಗಳ ಸುಖ-ದುಃಖಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಅವನು ತನ್ನ ಸ್ವಾರ್ಥದಿಂದಲೇ ಸರ್ವನಾಶವಾಗುತ್ತಾನೆ. ಅದೇ ರೀತಿ ತನ್ನ ಸಮಾಜದ ಹಿತ ಕಾಯದ ವ್ಯಕ್ತಿ ಹೀನಾಯವಾಗಿ ಅಳಿಯುತ್ತಾನೆ.” ಚಾಣಕ್ಯನ ಈ ಮಾತುಗಳ ಅಂತರ್ಗತ ಅರಿವಿನ ಎಚ್ಚರವಿರದವರು ಅಂತಿಮವಾಗಿ ಅಳಿದು ಹೋಗುತ್ತಾರೆ.
ನನ್ನ ಹೃದಯ ಕಿವುಚಿದಂತಾಗ್ತಿದೆ:
ಜನರ ಸಮಸ್ಯೆಗಳಿಗೆ ಅತ್ಯಂತ ತ್ವರಿತವಾಗಿ ಸ್ಪಂದಿಸಬೇಕಾಗಿದ್ದ ಬಿಜೆಪಿ ಸರ್ಕಾರ ತಾನೇ ಕೋಮಾ ಸ್ಥಿತಿಯಲ್ಲಿ ಇರುವಂತೆ ನಿರ್ಲಜ್ಜ ಆಡಳಿತ ನಡೆಸುತ್ತಿರುವುದು ರಾಜ್ಯದ ಜನತೆಯ ಗಮನಕ್ಕೂ ಬಂದಿದೆ. ರೈತರು, ಬಡವರು, ಶ್ರಮಿಕ ವರ್ಗ ನಾಲ್ಕೈದು ತಿಂಗಳಿನಿಂದ ಕೆಲಸ ಕಳೆದುಕೊಂಡು ದುಡಿಮೆ ಇಲ್ಲದೆ, ಅರ್ಧ ಸಂಬಳಕ್ಕೆ ದುಡಿಯುತ್ತಾ ಹೇಗೋ ಕುಟುಕ ಜೀವ ಉಳಿಸಿಕೊಂಡಿದ್ದಾರೆ. ರಾಜ್ಯದ ಜನತೆ ಅನುಭವಿಸುತ್ತಿರುವ ಅನಾಥಪ್ರಜ್ಞೆಯ ಬದುಕು ಹಿಂದೆಂದೂ ಕಂಡಿರಲಿಲ್ಲ. ಈ ನಿತ್ಯ ನರಕಯಾತನೆಯನ್ನು ನೋಡುತ್ತಿದ್ದರೆ ನನ್ನ ಹೃದಯ ಕಿವುಚಿದಂತಾಗುತ್ತದೆ. ಜನರು ನೋವು-ನಿಟ್ಟುಸಿರುಗಳ ಕುಲುಮೆಯಲ್ಲಿ ಬೇಯುತ್ತಿರುವಾಗ ಸರ್ಕಾರ ‘ರಾಜಕೀಯ’ದ ರಂಗಮಹಲಿನಲ್ಲಿ ಉಯ್ಯಾಲೆ ಆಡುತ್ತಿದ್ದರೆ ಅದರಂತ ಹೃದಯ ಹೀನ ಸರ್ಕಾರ ಮತ್ತೊಂದಿರಲಾರದು. ಬಿಜೆಪಿ ಸರ್ಕಾರ ಇಂತಹ ಹೃದಯಹೀನ ಸರ್ಕಾರ ವೆಂಬುದು ಮತ್ತೆ ಮತ್ತೇ ಸಾಬೀತಾಗುತ್ತಿದೆ.
ಅಕಟಕಟಾ ಶಿವನಿನಗಿನಿತು ಕರುಣವಿಲ್ಲಾ
ಅಕಟಕಟಾ ಶಿವನಿನಗಿನಿತು ಕೃಪೆಯಿಲ್ಲಾ
ಏಕೆ ಹುಟ್ಟಿಸಿದೆ ಇಹಲೋಕ ದು:ಖಿಯಾ
ಏಕೆ ಹುಟ್ಟಿಸಿದೆ ಪರಲೋಕ ದೂರನಾ
ಏಕೆ ಹುಟ್ಟಿಸಿದೆ ಕೂಡಲಸಂಗಮದೇವ ಕೇಳಯ್ಯಾ
ಎಂಬ ಸ್ಥಿತಿಯಲ್ಲಿ ಜನ ಪರಿತಪಿಸುತ್ತಿದ್ದಾರೆ. ಈಗ ರಾಜ್ಯ ಎದುರಿಸುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ರಾಜ್ಯದ ಪುನರ್ ನಿರ್ಮಾಣ ಅಂತಿಮವಾಗಿ ಜನರ ಕೈಯಲ್ಲೇ ಇದೆ. ಈ ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಮಾತೃಹೃದಯದ ನಾಯಕತ್ವದ ಅಗತ್ಯ ಇದೆ ಎಂಬುದು ಜನತೆಗೂ ಮನವರಿಕೆ ಆಗುತ್ತಿದೆ ಎಂದು ಭಾವಿಸಿದ್ದೇನೆ.
ಅಧಿಕಾರ ಯಾರಿಗೂ ಶಾಶ್ವತವಲ್ಲ:
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನೆರೆ ಸಂತ್ರಸ್ತರಿಗೆ ಸ್ಪಂದಿಸಿದ ರೀತಿ ಆ ಭಗವಂತನಿಗೇ ಪ್ರೀತಿ. ಈಗ ರಾಜ್ಯದಲ್ಲಿ ನಾಯಕತ್ವದ ತುರ್ತು ಬದಲಾವಣೆಯ ಅಗತ್ಯವೂ ಇಲ್ಲ. ನಾನು ಈಗ ನಾಯಕತ್ವದ ಸಂಘರ್ಷಕ್ಕೆ ಇಳಿಯುತ್ತಿಲ್ಲ. ಜಗತ್ತನ್ನು ಕೊರೊನಾ ಪೂರ್ವಕಾಲ ಮತ್ತು ಕಾರೋನೋತ್ತರ ಕಾಲ ಎಂದು ವ್ಯಾಖ್ಯಾನ ಮಾಡಬಹುದು. ಚರಿತ್ರೆಯಲ್ಲೂ ಇದು ದಾಖಲಾಗುತ್ತದೆ.
ಕೊರೊನಾ ಸೋಂಕು ಉಂಟುಮಾಡಿರುವ ತಲ್ಲಣಗಳಿಗೆ ನಾಳೆ ಔಷಧ ದಕ್ಕಬಹುದು. ಆದರೆ ಮುಂದಿನ ಮೂರ್ನಾಲ್ಕು ವರ್ಷಗಳು ಮತ್ತು ಭವಿಷ್ಯದಲ್ಲಿ ಆರ್ಥಿಕ-ಸಾಮಾಜಿಕ ಸೇರಿದಂತೆ ಸರ್ವಕ್ಷೇತ್ರಗಳಲ್ಲೂ ಎದುರಾಗಬಹುದಾದ ಸಂಭವನೀಯ ಅನಾಹುತಗಳಿಗೆ ಈಗ ಮತ್ತು ಭವಿಷ್ಯದಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವ ಮತ್ತು ಅದಕ್ಕೆ ಪರಿಹಾರ ದಕ್ಕಿಸಿಕೊಳ್ಳುವ ನಾಯಕತ್ವದ ಬಗ್ಗೆ ಮುಕ್ತ ವಿಮರ್ಶೆಗೆ ಈಗಿನಿಂದಲೇ ಒಂದು ಸಮಷ್ಟಿ ಪ್ರಜ್ಞೆಯ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವುದು ಈಗಿನ ಅನಿವಾರ್ಯತೆ.
ಈ ಒಂದು ಕಾರಣಕ್ಕೆ ನನ್ನ ಮನದಾಳದ ಮಾತುಗಳನ್ನು ನಿಮ್ಮ ಮಡಿಲಿಗೆ ಒಪ್ಪಿಸುತ್ತಿದ್ದೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ರಾಜ್ಯದ ಜನತೆಯ ಕಲ್ಯಾಣವೇ ಯಾವುದೇ ನಾಯಕತ್ವದ ಗರಿಷ್ಠ ಆದ್ಯತೆ ಮತ್ತು ಅಂತಿಮವೂ ಆಗಬೇಕು. ರಾಜ್ಯದ ಹಿತ ಮತ್ತು ಜನತೆಯ ಕಣ್ಣೊರೆಸುವ ಅಮ್ಮನ ಆಸರೆ ಇಂದಿನ ತುರ್ತು ಅಗತ್ಯವಾಗಿದೆ. ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ ಮೇಲೆ ಮೌನಕ್ಕೆ ಶರಣಾಗಿದ್ದು, ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾನು ಅನಿವಾರ್ಯವಾಗಿ ಈಗ ನಿಮ್ಮೆದುರು ನನ್ನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದೇನೆ.
ಪಕ್ಷದ ಕಾರ್ಯಕರ್ತರಿಗೆ ಕರೆ:
ಕೊರೊನಾ ವೈರಸ್ ಭಯದಿಂದ ಬದುಕುತ್ತಿರುವ ಜನತೆಗೆ, ಪಕ್ಷದ ಕಾರ್ಯಕರ್ತರು ನಾಯಕರು ಸ್ಥಳೀಯವಾಗಿ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಬೇಕು. ಸಾಂತ್ವಾನ ಹೇಳಬೇಕು. ಈ ಸೋಂಕಿನಿಂದ ವಿಚಲಿತರಾಗದೆ ಧೈರ್ಯದಿಂದ ಎದುರಿಸುವಂತೆ ಅರಿವು ಮೂಡಿಸಬೇಕು. ಇಡೀ ಮನುಕುಲಕ್ಕೆ ಕಾಡುತ್ತಿರುವ ಈ ಸೋಂಕು ವ್ಯಾಪಕವಾಗಿ ಹರಡದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾಗರಿಕರಲ್ಲಿ ಪ್ರಜ್ಞೆ ಮೂಡಿಸಬೇಕು ಎಂದು ಈ ಮೂಲಕ ಕೈಮುಗಿದು ಮನವಿ ಮಾಡುತ್ತೇನೆ.
ಈ ಸಂದರ್ಭದಲ್ಲಿಕವಿ ಗೋಪಾಲಕೃಷ್ಣ ಅಡಿಗರ ಭೂಮಿಗೀತಾದ ಈ ಸಾಲುಗಳು ನೆನಪಾಗುತ್ತವೆ.
ಕತ್ತಲಲ್ಲಿ ಕಣ್ಣು ಕಾಣದ ಬೀದಿಯಿಕ್ಕಟ್ಟಿನಲಿ
ಗೋಡೆ ತಡಕುತ ಇನ್ನು ತೆವಳಬೇಕು.
ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ
ದಾರಿ ಸಾಗುವದೆಂತೊ ನೋಡಬೇಕು
– ಇಂತಿ ನಿಮ್ಮ
ಎಚ್.ಡಿ.ಕುಮಾರಸ್ವಾಮಿ
ಒಟ್ಟಿನಲ್ಲಿ ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ವೇಳೆ ತಾನು ಪಟ್ಟ ಕಷ್ಟವನ್ನು ಮಾಜಿ ಸಿಎಂ ಹಂಚಿಕೊಂಡಿದ್ದಾರೆ. ಜೊತೆಗೆ ಪಕ್ಷ ಸಂಘಟನೆ ಮಾಡಿ ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೆಚ್.ಡಿ ಕುಮಾರ್ ತಿಳಿಸಿದ್ದಾರೆ.