ಬೆಂಗಳೂರು: ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ, ಬೆಂಗಳೂರಲ್ಲಿ 20 ಸಾವಿರಕ್ಕೂ ಅಧಿಕ ಹಾಗೂ ಇತರ ಜಿಲ್ಲೆಗಳಲ್ಲಿ ಸಹ ಸೋಂಕಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೀಗಾಗಿ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.
ಈ ಕುರಿತು ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಸಭೆಯಲ್ಲಿ ಇಂದು ಗಂಭೀರ ಚರ್ಚೆ ನಡೆಯಲಿದೆ. ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಲಾಕ್ಡೌನ್ ವಿಚಾರ ಸರ್ಕಾರದ ಗಮನದಲ್ಲಿದೆ. ಇಂದು ಸಾಧಕ ಬಾಧಕ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ನಾವು ರಾಜಕೀಯ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ನಮ್ಮ ಸರ್ಕಾರ ವೈಜ್ಞಾನಿಕವಾಗಿ ನಿರ್ಧಾರ ತಗೊಳ್ಳುತ್ತದೆ ಎಂದರು.
Advertisement
Advertisement
ಕೆಲವರ ಸಾವು, ನೋವುಗಳನ್ನು ನೋಡಿ ಆತಂಕ, ಭಯ ಜನರಲ್ಲಿ ಹೆಚ್ಚುತ್ತಿದೆ. ಹೀಗಾಗಿ ಅಲ್ಪ ಪ್ರಮಾಣದ ರೋಗ ಲಕ್ಷಣಗಳು ಹಾಗೂ ರೋಗ ಲಕ್ಷಣಗಳು ಇಲ್ಲದಿದ್ದರೂ ಆಸ್ಪತ್ರೆಗೆ ದಾವಿಸುತ್ತಿದ್ದಾರೆ. ಇದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಹೊರೆಯಾಗುತ್ತದೆ. ಹೀಗಾಗಿ ಅಲ್ಪ, ರೋಗ ಲಕ್ಷಣ ಇಲ್ಲದವರು ಮನೆಯಲ್ಲೇ ಟೆಲಿ ಕಾಲಿಂಗ್ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸುತ್ತಾರೆ. ಗಂಭೀರ ಸ್ಥಿತಿಯಲ್ಲಿರುವವರು ಮಾತ್ರ ಆಸ್ಪತ್ರೆಗೆ ದಾಖಲಾದರೆ, ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ತಿಳಿಸಿದರು.
Advertisement
ಜನರು ಆತಂಕದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಲಕ್ಷಣ ಇಲ್ಲದವರು, ಕಡಿಮೆ ಲಕ್ಷ ಮನೆಯಲ್ಲೇ ಚಿಕಿತ್ಸೆ ಪಡೆಯಿರಿ. ಇದರಿಂದ ಈಗ ಸೃಷ್ಟಿಯಾಗಿರುವ ಬಿಕ್ಕಟ್ಟು ತಪ್ಪಲಿದೆ. ಜನ ಅನಗತ್ಯವಾಗಿ ಆತಂಕ ಪಡೋದು ಬೇಡ, ಆಕ್ಸಿಜನ್ ಸ್ಯಾಚುರೇಷನ್ 90, 92 ಬಂದರೂ ಹಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದರು.
Advertisement
ನಾವು ಎರಡನೇ ಅಲೆಯಲ್ಲಿದ್ದೇವೆ, ಬೇರೆ ದೇಶಗಳು ಮೂರು, ನಾಲ್ಕನೇ ಅಲೆಯಲ್ಲಿದ್ದಾರೆ. ಒಂದು ಅಲೆ 60-90 ದಿನಗಳ ಕಾಲ ಇರುತ್ತದೆ. ನಮ್ಮ ದೇಶದಲ್ಲಿ ಎರಡನೇ ಅಲೆ ಇನ್ನೂ 30-40 ದಿನ ಇರುತ್ತೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದಾರೆ. ಇಷ್ಟು ದಿನ ಜನ ಎಚ್ಚರಿಕೆ ವಹಿಸಬೇಕು.
ದಿನ ನಿತ್ಯದ ಜೀವನ ಸಾಗಿಸಬೇಕಾದಲ್ಲಿ ಮರ್ಗಸೂಚಿಗಳನ್ನು ಪಾಲಿಸಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅನಗತ್ಯವಾಗಿ ಮನೆಯಿಂದ ಹೊರಬಾರದು. ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ. ಒಂದೊಂದು ಅಲೆ ಸುಮಾರು 60-90 ದಿನಗಳ ಕಾಲ ಇರುತ್ತದೆ. ಈಗ ನಾವು 2 ತಿಂಗಳು ತಲುಪಿದ್ದೇವೆ. ಇನ್ನೂ 30-40 ದಿನ ಈ ಅಲೆ ಇರಲಿದೆ ಎಂದು ತಜ್ಞರು ಹೇಳಿದ್ದಾರೆ. ಈ 40 ದಿನ ಅನಗತ್ಯವಾಗಿ ಓಡಾಡಬಾರದು. ರೋಗ ಲಕ್ಷಣಗಳು ಇಲ್ಲದಿದ್ದರೂ ಕೆಲವರಿಗೆ ಪಾಸಿಟಿವ್ ಇರುತ್ತದೆ. ಕೆಲವರು ರೋಗ ಲಕ್ಷಣಗಳು ಇಲ್ಲದವರು ಬೇಕಾಬಿಟ್ಟಿಯಾಗಿ ಓಡಾಡಿ ಇತರರಿಗೆ ಹಬ್ಬಿಸುತ್ತಿದ್ದಾರೆ. ದಯವಿಟ್ಟು ಮನೆಯಲ್ಲೇ ಇರಿ ಎಂದು ಕೇಳಿಕೊಂಡರು.
ಕೋಲಾರದಲ್ಲಿ ಆಕ್ಸಿಜನ್ ಸಮಸ್ಯೆಯಿಂದ ನಾಲ್ವರು ನಿಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇನ್ ಟೈಮ್ ನಲ್ಲಿ ಆಕ್ಸಿಜನ್ ಪೂರೈಸಲು ಆದಷ್ಟು ಶ್ರಮ ಪಡುತ್ತಿದ್ದೇವೆ. ಈಗಾಗಲೇ ಕಾಲ್ ಸೆಂಟರ್ ಮಾಡಿ 50 ಜನರನ್ನು ನೇಮಿಸಲಾಗಿದೆ. ಅಲ್ಲದೆ ಆಕ್ಸಿಜನ್, ರೆಮ್ಡಿಸಿವಿರ್ ಗೆ ಅಂತಾನೆ ಒಬ್ಬ ಐಎಎಸ್ ಅಧಿಕಾರಿ ನೇಮಿಸಲಾಗಿದೆ. ಹೀಗಾಗಿ ಯಾವ ಕಾರಣಕ್ಕೆ ನಿಧನರಾಗಿದ್ದಾರೆ ಎಂಬ ಮಾಹಿತಿಯನ್ನು ಡಿಎಚ್ಒ ಬಳಿ ಪಡೆಯುತ್ತೇವೆ. ಡೆತ್ ಆಡಿಟ್ ಬಂದ ಮೇಲೆ ಮಾತನಾಡುತ್ತೇನೆ ಎಂದರು.
ಸರ್ಕಾರದ ಸ್ಟೋರ್ಸ್ನಲ್ಲಿ 26 ಸಾವಿರ ರೆಮ್ಡಿಸಿವಿರ್ ಬೇಕು. ಯಾರಾದರೂ ದುರುದ್ದೇಶದಿಂದ ರೆಮ್ಡಿಸಿವಿರ್ ಸ್ಟಾಕ್ ಮಾಡಿಕೊಂಡು, ಕೃತಕ ಅಭಾವ ಸೃಷ್ಟಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗೃಹ ಇಲಾಖೆಯಿಂದ ಮನವಿ ಮಾಡಿದ್ದು, ಕಾನೂನು ಕ್ರಮವನ್ನೂ ಕೈಗೊಳ್ಳುತ್ತೇವೆ. ಆಕ್ಸಿಜನ್, ರೆಮ್ಡಿಸಿವಿರ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಈ ಸೋಂಕು ನಮ್ಮ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಅನೇಕ ದೇಶಗಳಲ್ಲಿ 1ನೇ ಅಲೆಗಿಂತ 2ನೇ ಅಲೆಯಲ್ಲಿ ಶೇ.200-500ರಷ್ಟು ಹೆಚ್ಚಗಿದೆ. ನಮ್ಮ ದೇಶದಲ್ಲಿ ಮೊದಲ ಅಲೆಗಿಂತ 2ನೇ ಅಲೆಯಲ್ಲಿ ಶೇ.267ರಷ್ಟು ಹೆಚ್ಚಾಗಿದೆ. ಹೀಗಾಗಿ ಗಂಭೀರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಭೇಟಿ ಮಾಡಲು ಆರೋಗ್ಯ ಇಲಾಖೆಯ ಸಾಂಕ್ರಮಿಕ ರೋಗ ತಜ್ಞ ಡಾ.ಮೊಹಮದ್ ಷರೀಫ್ ಆಗಮಿಸಿದ್ದು, ಸದಾಶಿವನಗರದಲ್ಲಿರುವ ಸಚಿವ ಸುಧಾಕರ್ ಮನೆಗೆ ಭೇಟಿ ನೀಡಿ, ವೈರಸ್ ಭೀಕರತೆ ಹಾಗೂ ಸಧ್ಯದ ಪರಿಸ್ಥಿತಿಯ ಬಗ್ಗೆ ಸುಧಾಕರ್ ಗೆ ಮಾಹಿತಿ ನೀಡಿದ್ದಾರೆ.