ಮಂಗಳೂರು: ಜಗತ್ತಿಗೆ ಬಂದೆರಗಿದ ಮಹಾಮಾರಿ ಕೊರೋನಾದಿಂದಾಗಿ ಕಂಡು ಕೇಳರಿಯದ ಸಂಕಷ್ಟಗಳು ಎದುರಾಗಿವೆ. ಉದ್ದಿಮೆ ಸಹಿತ ಪ್ರತಿಯೊಂದು ವಿಭಾಗವೂ ನಷ್ಟವನ್ನು ಅನುಭವಿಸಿದೆ. ಈ ನಡುವೆ ಕೆಲವೊಂದು ವರ್ಗಗಳು ಸರ್ಕಾರದ ಸಹಾಯಧನ ಅಥವಾ ಇನ್ನಿತರ ಯೋಜನೆಯ ಮೂಲಕ ಅನುಕೂಲವನ್ನು ಪಡೆದುಕೊಂಡರೆ, ವಿವಿಧ ಕಲಾಪ್ರಕಾರಗಳ ಮೂಲಕ ಜನತೆಯನ್ನು ಮನರಂಜಿಸುತ್ತಾ ಬಂದ ಕಲಾವಿದರ ವರ್ಗ ಮಾತ್ರ ಬಹಳಷ್ಟು ಸಂಕಷ್ಟ ಅನುಭವಿಸಿದೆ.
ಕರಾವಳಿ ಜಿಲ್ಲೆಗಳ ಕಲಾಪ್ರಕಾರಗಳ ವಿಚಾರಕ್ಕೆ ಬಂದರೆ ಯಕ್ಷಗಾನಕ್ಕೆ ವಿಶೇಷ ಪ್ರಾಧಾನ್ಯತೆಯಿದೆ. ವರ್ಷದ ಆರು ತಿಂಗಳ ಕಾಲ ನಿರಂತರವಾಗಿ ನಡೆಯುವ ಯಕ್ಷಗಾನ ಪ್ರದರ್ಶನಗಳಿಗೆ ಈ ಬಾರಿ ಕೊರೋನಾ ಆರಂಭದಲ್ಲೇ ವಿಘ್ನವನ್ನು ತಂದೊಡ್ಡಿಟ್ಟು ಇದರಿಂದಾಗಿ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಲಕ್ಷಾಂತರ ಕಲಾವಿದರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು. ಇದೀಗ ಯಕ್ಷಗಾನ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಮಂಗಳೂರಿನ ಯಕ್ಷ ತುಳು ಪರ್ಬ ಎನ್ನುವ ಸಂಘಟನೆ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ. ಈಗಾಗಲೇ ನೂರಾರು ಕಲಾವಿದರನ್ನು ಒಗ್ಗೂಡಿಸಿ ತುಳು ಯಕ್ಷಗಾನ ಚಿತ್ರೀಕರಣ ಮಾಡಲಾಗಿದೆ. ಆಗಸ್ಟ್ 29ರಿಂದ ಸೆಪ್ಟೆಂಬರ್ 2ರವರೆಗೆ ನಡೆದ ಕಾರ್ಯಕ್ರಮಗಳಲ್ಲಿ ಎ,ಬಿ,ಸಿ ಎನ್ನುವ ವಿಭಾಗಗಳಲ್ಲಿ ಒಟ್ಟು 1,50,000 ರೂ.ಗಳನ್ನು ಕಲಾವಿದರಿಗೆ ನೀಡಲಾಗಿದೆ.
Advertisement
Advertisement
ಇದೀಗ ಮತ್ತೆ ಸೆಪ್ಟೆಂಬರ್ 12ರಿಂದ ದಕ್ಷಿಣ ಕನ್ನಡ ಮತ್ತು ಕೇರಳದ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತೀ 15 ಕಲಾವಿದರಿಗೆ 10 ಕಾರ್ಯಕ್ರಮಗಳು ಸಿಗುವ ಹಾಗೆ 1 ತಂಡ, ಹೀಗೆ ಒಟ್ಟು 100 ಕಲಾವಿದರಿಗೆ ಅವಕಾಶ ಸಿಗುವ ರೀತಿ ವ್ಯವಸ್ಥೆಯ ಕಾರ್ಯಕ್ರಮ ಇದಾಗಿದೆ. ಒಟ್ಟು 10 ದಿನಗಳ ಯಕ್ಷಗಾನ ಪ್ರದರ್ಶನದಲ್ಲಿ ಸಂಗ್ರಹಿಸಲ್ಪಡುವ 3,00,000 ರೂ.ಗಳನ್ನು ಕಲಾವಿದರಿಗೆ ನೀಡುವ ಉದ್ದೇಶ ಯಕ್ಷ ತುಳು ಪರ್ಬದ್ದು. ಈ ನಿಟ್ಟಿನಲ್ಲಿ ಕಲಾವಿದರಿಗಾಗಿ ಕಲಾವಿದರ ಶ್ರಮವನ್ನು ಸಾಕಾರಗೊಳಿಸುವ ಹೊಣೆ ಕಲಾಭಿಮಾನಿಗಳದ್ದು ಎಂದು ಸಂಘಟನೆಯು ಕಲಾಪ್ರೇಮಿಗಳ ಸಹಕಾರವನ್ನು ಬಯಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಯಕ್ಷತುಳು ಪರ್ಬದ ಅಧ್ಯಕ್ಷರಾದ ಡಿ. ಮನೋಹರ್ ಕುಮಾರ್ ಮೊ.ಸಂ: 99727 24359, ಕಾರ್ಯದರ್ಶಿ ಸುರೇಂದ್ರ ಮಲ್ಲಿ -98457 33485, ಜೊತೆ ಕಾರ್ಯದರ್ಶಿ ಕರುಣಾಕರ ಶೆಟ್ಟಿ – 9008946706 ಇವರನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.