ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ(35)ಗೂ ಕೊರೊನಾ ಸೋಂಕು ತಗುಲಿದೆ.
ಇವರು ಗ್ರಾಮಾಂತರ ಠಾಣೆಯ ಪಿಎಸ್ಐ ಆಗಿದ್ದು, ಶಿಡ್ಲಘಟ್ಟ ನಗರ ಠಾಣೆಯ ಪ್ರಭಾರ ಪಿಎಸ್ಐ ಸಹ ಆಗಿದ್ದರು. ಶಿಡ್ಲಘಟ್ಟ ತಾಲೂಕಿನ ಗ್ರಾಮಾಂತರ ಸೇರಿದಂತೆ ನಗರದಲ್ಲಿ ಸಹ 10 ಸಕ್ರಿಯ ಪ್ರಕರಣಗಳಿದ್ದು, ಕಂಟೈನ್ಮೆಂಟ್ ಝೋನ್ ನಲ್ಲಿ ಈ ಪಿಎಸ್ಐ ಕರ್ತವ್ಯ ನಿರ್ವಹಿಸಿದ್ದರು. ಕಂಟೈನ್ಮೆಂಟ್ ಝೋನ್ ನಲ್ಲಿ ಕಾರ್ಯನಿರ್ವಹಿಸಿದ್ದ ಹಿನ್ನೆಲೆ ರ್ಯಾಂಡಮ್ ಟೆಸ್ಟ್ ಮಾಡಿಸಿದ್ದು, ಈ ವೇಳೆ ಕೊರೊನಾ ಸೋಂಕು ದೃಢಪಟ್ಟಿದೆ.
Advertisement
Advertisement
ಸದ್ಯ ಸೋಂಕಿತ ಪಿಎಸ್ಐ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈದೀಗ ಶಿಡ್ಲಘಟ್ಟ ಗ್ರಾಮಾಂತರ ಹಾಗೂ ನಗರ ಠಾಣೆಯ ಸಿಬ್ಬಂದಿಗೂ ಕೊರೊನಾ ಆತಂಕ ಶುರುವಾಗಿದೆ. ಪಿಎಸ್ಐ ಪತ್ನಿ ಹಾಗೂ ಮಕ್ಕಳನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನು ಸಹ ಪರೀಕ್ಷೆಗೆ ಓಳಪಡಿಸಲಾಗುತ್ತಿದೆ.
Advertisement
ಪಿಎಸ್ಐಗೆ ಸೋಂಕು ದೃಢಪಡುವ ಮುನ್ನಾದಿನ ಶಿಡ್ಲಘಟ್ಟ ನಗರ ಹೊರವಲಯದ ಹನುಮಂತಪುರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸಹ ಭೇಟಿ ಮಾಡಿದ್ದರು. ಈ ವೇಳೆ ಸೋಂಕಿತ ಪಿಎಸ್ಐ ಸಚಿವರ ಭದ್ರತಾ ಕರ್ತವ್ಯದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಪೊಲೀಸ್ ಇಲಾಖೆಯ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮಕ್ಕೂ ಸೋಂಕಿತ ಪಿಎಸ್ಐ ಭಾಗಿಯಾಗಿದ್ದರು. ಹೀಗಾಗಿ ಇವೆರೆಲ್ಲರಿಗೂ ಈಗ ಕೊರೊನಾ ಆತಂಕ ಶುರುವಾಗಿದೆ.
Advertisement
ಶಿಡ್ಲಘಟ್ಟ ತಾಲೂಕಿನಲ್ಲಿ 11 ಕೊರೊನಾ ಸೋಂಕಿತ ಪ್ರಕರಣಗಳಾಗಿವೆ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪೊಲೀಸರಿಗೆ ತಗುಲಿದ ಮೂರನೇ ಪ್ರಕರಣ ಇದಾಗಿದೆ. ಕೊರೊನಾ ವಾರಿಯರ್ ಆಗಿ ಹಗಲಿರುಳು ಶ್ರಮಿಸುತ್ತಿದ್ದ ಪಿಎಸ್ಐ ಸೋಂಕಿಗೆ ಗುರಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಪಿಎಸ್ಐ ಕರ್ತವ್ಯ ನಿರ್ವಹಿಸಿದ್ದ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಅವರ ಮನೆ ಸೇರಿದಂತೆ ವಾಹನಗಳಿಗೆ ಸೋಂಕು ನಿವಾರಕ ರಾಸಾಯನಿಕ ಸಿಂಪಡನೆ ಮಾಡಲಾಗಿದೆ.