– ವಧು-ವರನಿಗೂ ಕೊರೊನಾ
– ವಧುವಿನ ತಂದೆಗೆ 2 ವರ್ಷ ಜೈಲು, 10 ಸಾವಿರ ದಂಡ
ತಿರುವನಂತಪುರಂ: ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದ್ದರೂ ಲೆಕ್ಕಿಸದೆ ಹಲವರು ವಿವಾಹ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಒಂದೇ ವಿವಾಹಕ್ಕೆ ತೆರಳಿದ್ದ 43 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನೂ ಆಶ್ಚರ್ಯ ಎಂಬಂತೆ ವರ ಹಾಗೂ ವಧುಗೂ ಸೋಂಕು ತಗುಲಿದೆ.
ಕಾಸರಗೋಡು ಜಿಲ್ಲೆಯ ಚೆಂಗಲ ಪಂಚಾಯಿತಿ ವ್ಯಾಪ್ತಿಯ ಪಿಳಂಕಟ್ಟದಲ್ಲಿ ಜುಲೈ 17ರಂದು ನಡೆದ ಮದುವೆ ಸಮಾರಂಭದಲ್ಲಿ 125ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಜುಲೈ 17ರಂದು ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ 128 ಜನರ ಪೈಕಿ 43 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ವರ ಹಾಗೂ ವಧುವಿಗೂ ಕೊರೊನಾ ಸೋಂಕು ತಗುಲಿದ್ದು, ವಿವಾಹದಲ್ಲಿ ಭಾಗವಹಿಸಿದ್ದ 128 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಧುವಿನ ತಂದೆಯ ವಿರುದ್ಧ ಕೇರಳ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ 2020ರ ಅಡಿ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಾಸರಗೋಡು ಜಿಲ್ಲಾಡಳಿತ ಮಾಹಿತಿ ನೀಡಿದೆ. ನಿಯಮ ಪಾಲಿಸದವರಿಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.
Advertisement
ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ಸಭೆ ಸಮಾರಂಭಗಳಲ್ಲಿ 50ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ಆದರೆ ಈ ಮದುವೆ ಸಮಾರಂಭದಲ್ಲಿ 125ಕ್ಕೂ ಹೆಚ್ಚು ಜನ ಸೇರಿದ್ದರು. ವಧುವಿನ ತಂದೆಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು ಹಾಗೂ ವರ ಕೆಲವೇ ತಿಂಗಳುಗಳ ಹಿಂದೆ ದುಬೈನಿಂದ ಕೇರಳಕ್ಕೆ ಆಗಮಿಸಿದ್ದರು.
Advertisement
ಸೋಂಕಿತರೆಲ್ಲರಿಗೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಲಾಗಿದೆ. ಕೊರೊನಾ ಸೋಂಕಿನ ಗುಣ ಲಕ್ಷಣ ಹೊಂದಿರುವವರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಕಾಸರಗೋಡು, ಮಂಜೇಶ್ವರಂ, ಹೊಸದುರ್ಗ, ಕುಂಬಳೆ ಹಾಗೂ ನೀಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಹ ಬಂದ್ ಮಾಡಲಾಗಿದೆ. ಕೇರಳದಲ್ಲಿ ಪ್ರತಿ ದಿನ 20 ಸಾವಿರಕ್ಕೂ ಅಧಿಕ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.