ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಲ್ಲಂಗಡಿ ಬೆಳೆದ ರೈತರಿಗ ಲಾಕ್ಡೌನ್ ಹಾಗೂ ಹವಾಮಾನ ವೈಪರಿತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಹಣ್ಣುಗಳನ್ನು ಕೊಳ್ಳುವವರಿಲ್ಲದ್ದಕ್ಕೆ ಬೆಳೆಯನ್ನು ನಾಶ ಮಾಡುತ್ತಿದ್ದಾರೆ.
Advertisement
ಹವಾಮಾನ ವೈಪರಿತ್ಯದಿಂದ ಈಗಾಗಲೇ ಬೆಳೆ ನಾಶವಾಗಿದ್ದು, ಉಳಿದ ಬೆಳೆಯನ್ನಾದರೂ ಮಾರುಕಟ್ಟೆಗೆ ಕೊಂಡೊಯ್ಯಬೇಕು ಎಂದರೆ ಲಾಕ್ಡೌನ್ ಅಡ್ಡಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ಪ್ರದೇಶಗಳಲ್ಲಿ 200 ಹೆಕ್ಟೇರ್ ನಲ್ಲಿ ಬೆಳೆದ ಕಲ್ಲಂಗಡಿಯನ್ನು ಲಾಕ್ಡೌನ್ ನಿಂದಾಗಿ ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ರೈತರು ಹೊಲದಲ್ಲೇ ನಾಶ ಮಾಡುತ್ತಿದ್ದಾರೆ. ಹೊಲದಲ್ಲಿ ಬೆಳೆದ ಕಲ್ಲಂಗಡಿಯೇ ಗೋವುಗಳಿಗೆ ಆಹಾರವಾಗಿದೆ. ಇದನ್ನೂ ಓದಿ: ಪ್ರತಿ ಗ್ರಾಮ ಪಂಚಾಯ್ತಿಗೆ 50 ಸಾವಿರ ಅನುದಾನ: ಬಿಎಸ್ವೈ
Advertisement
Advertisement
ಕರಾವಳಿ ಭಾಗದಲ್ಲಿ ಫೆಬ್ರವರಿಯಿಂದ ಜೂನ್ ಮೊದಲ ವಾರದ ವರೆಗೆ ಕಲ್ಲಂಗಡಿ ಹಣ್ಣು ಬೆಳೆಯಲಾಗುತ್ತದೆ. ನೆರೆಯ ಗೋವಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹಣ್ಣುಗಳನ್ನು ಸರಬರಾಜು ಮಾಡಲಾಗುತ್ತದೆ. ಆದರೆ ಇದೀಗ ಲಾಕ್ಡೌನ್ ಹಾಗೂ ಕೊರೊನಾದಿಂದಾಗಿ ಕಲ್ಲಂಗಡಿ ಹಣ್ಣಿನ ಬೇಡಿಕೆ ಸಂಪೂರ್ಣ ಇಳಿಕೆಯಾಗಿದೆ.
Advertisement
ಕಲ್ಲಂಗಡಿ ಹಣ್ಣು ತಿಂದರೆ ಚಳಿ, ಜ್ವರ ಬರುತ್ತದೆ ಎಂಬ ಭಯ ಬಹುತೇಕ ಜನರಲ್ಲಿ ಕಾಡುತ್ತಿದೆ, ಹೀಗಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಗ್ರಾಹರನ್ನು ಇಲ್ಲವಾಗಿಸಿದೆ. ಇನ್ನು ಲಾಕ್ಡೌನ್ ಆದ್ದರಿಂದ ದೊಡ್ಡ ಬೇಡಿಕೆಯೂ ಕುಸಿದಿದ್ದು, ವರ್ತಕರು ರೈತರಿಂದ ಖರೀದಿ ನಿಲ್ಲಿಸಿದ್ದಾರೆ. ಇದರಿಂದಾಗಿ ಪ್ರತಿ ಕೆ.ಜಿ.ಗೆ 10 ರಿಂದ 12 ರೂ. ಇದ್ದ ಕಲ್ಲಂಗಡಿ ಇದೀಗ ಕೆ.ಜಿ ಗೆ 2 ರೂ. ಸಹ ಕೇಳುವವರಿಲ್ಲದಂತಾಗಿದೆ.
ಕರಾವಳಿ ಭಾಗದಲ್ಲಿ ಹವಾಮಾನ ವೈಪರಿತ್ಯದಿಂದ ಚನ್ನಾಗಿ ಬೆಳೆದ ಕಲ್ಲಂಗಡಿ ಕೊಳೆಯಲು ಪ್ರಾರಂಭಿಸಿದೆ. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆಯನ್ನು ಕೇಳುವವರಿಲ್ಲದಂತಾಗಿದೆ. ಜೊತೆಗೆ ಕಳೆದ ವರ್ಷ ಆದ ನಷ್ಟಕ್ಕೆ ಪರಿಹಾರ ಸಹ ಇದುವರೆಗೆ ಬಿಡುಗಡೆಯಾಗಿಲ್ಲ. ಹೀಗಾಗಿ ಮತ್ತಷ್ಟು ಸಂಕಷ್ಟದಲ್ಲಿ ರೈತ ದಿನ ದೂಡುವಂತಾಗಿದೆ.
ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಗೆ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಅಲ್ಪ ಹಾನಿಗೆ 2 ಸಾವಿರ ನಿಗದಿ ಮಾಡಿದೆ. ಆದರೆ ಕಳೆದ ಬಾರಿಯ ನಷ್ಟದ ಹಣ ಇನ್ನೂ ಖಾತೆಗೆ ಸೇರಿಲ್ಲ. ಹೀಗಾಗಿ ಈ ಬಾರಿ ಘೋಷಣೆ ಮಾಡಿರುವ ಹಣ ಸಿಗುವ ಭರವಸೆಯನ್ನು ರೈತ ಕಳೆದುಕೊಂಡಿದ್ದಾನೆ. ಜಿಲ್ಲೆಯಲ್ಲಿ 60 ಹೆಕ್ಟೇರ್ ಪ್ರದೇಶದ ಕಲ್ಲಂಗಡಿ ನಷ್ಟ ವಾಗಿದೆ. ಅಂದಾಜು ಒಂದು ಕೋಟಿ ರೂ.ನಷ್ಟು ಮೌಲ್ಯದ ಹಣ್ಣು ನಷ್ಟವಾಗಿದೆ. ಇದೀಗ ಫಸಲು ಉತ್ತಮವಾಗಿದ್ದರೂ ಕೊಳ್ಳುಕೊಳ್ಳುವವರಿಲ್ಲದೇ ಬೆಳೆ ಮಣ್ಣುಪಾಲಾಗಿದ್ದು, ರೈತ ಭರವಸೆಯನ್ನು ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೊಳಗಾಗಿದ್ದಾನೆ.