– 1 ಸಾವಿರ ಟನ್ ಭತ್ತ ಖರೀದಿ
– ಕ್ವಿಂಟಾಲ್ಗೆ 100 ರೂ.ಹೆಚ್ಚಳ, ನಾಲ್ಕೇ ದಿನದಲ್ಲಿ ಹಣಪಾವತಿ
ರಾಯಚೂರು: ಒಂದೆಡೆ ದೇಶದ ರಾಜಧಾನಿಯಲ್ಲಿ ರೈತರು ಹೊಸ ಕೃಷಿ ನೀತಿಗಳನ್ನ ವಿರೋಧಿಸಿ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಕಡೆ ದೇಶದ ಒಳಗಡೆ ಖಾಸಗಿ ಕಂಪನಿಗಳು ಆಗಲೇ ಕೃಷಿ ಉತ್ಪನ್ನ ಖರೀದಿಗೆ ಲಗ್ಗೆ ಇಟ್ಟಿವೆ. ರಾಯಚೂರು ಜಿಲ್ಲೆಯಲ್ಲಿ ರೈತರೊಂದಿಗೆ ರಿಲಯನ್ಸ್ ಕಂಪನಿ ಒಪ್ಪಂದ ಮಾಡಿಕೊಂಡು ಭತ್ತ ಖರೀದಿ ನಡೆಸಿದೆ.
ರಿಲಯನ್ಸ್ ರೀಟೇಲ್ ಲಿಮಿಟೆಡ್ ಸಿಂಧನೂರಿನಲ್ಲಿ ಸ್ವಾಸ್ಥ ರೈತ ಉತ್ಪಾದಕರ ಕಂಪನಿ ಜೊತೆ 1,000 ಟನ್ ಸೋನಾಮಸೂರಿ ಭತ್ತ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಬಹುಶಃ ರಾಜ್ಯದಲ್ಲಿ ಇದೇ ಮೊದಲ ಒಪ್ಪಂದ ಇರಬಹುದು ಎನ್ನಲಾಗುತ್ತಿದೆ.
Advertisement
Advertisement
ಸರ್ಕಾರ ನೀಡುವ ಬೆಂಬಲ ಬೆಲೆಗಿಂತಲೂ ಕ್ವಿಂಟಾಲ್ಗೆ 100 ರೂ ಹೆಚ್ಚು ಕೊಟ್ಟು ಖರೀದಿಸಲು ರಿಲಯನ್ಸ್ ಒಪ್ಪಂದ ಮಾಡಿಕೊಂಡಿದೆ. ಭತ್ತಕ್ಕೆ ಸರ್ಕಾರದ ಬೆಂಬಲ ಬೆಲೆ ಕ್ವಿಂಟಾಲ್ಗೆ 1850 ರೂ.ಇದೆ. ಹೊರಗಡೆ ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆಯಿದೆ. ಆದ್ರೆ ರಿಲಯನ್ಸ್ ಕ್ವಿಂಟಾಲ್ ಗೆ 1950 ರೂ ಕೊಟ್ಟು ಖರೀದಿ ನಡೆಸಿದೆ. ಮೊದಲ ಹಂತವಾಗಿ ಈಗ 100 ಟನ್ ಖರೀದಿಗೆ ಬೇಡಿಕೆ ಕೊಟ್ಟಿದೆ. ರೈತರ ಕಂಪನಿ 72 ಟನ್ ಸೋನಾಮಸೂರಿ ಭತ್ತವನ್ನ ಈಗಾಗಲೇ ನೀಡಿದೆ. ಈ ಹಿಂದೆ ಬಿಗ್ ಬಾಸ್ಕೆಟ್ ಕಂಪನಿ ಸಹ ಭತ್ತ ಖರೀದಿಗೆ ಬಂದಿತ್ತು. ಆದರೆ ತಾಂತ್ರಿಕ ಕಾರಣದಿಂದ ಒಪ್ಪಂದ ನಡೆದಿರಲಿಲ್ಲ. ಈಗ ರಿಲಯನ್ಸ್ ರೀಟೇಲ್ ಲಿಮಿಟೆಡ್ ಖರೀದಿ ಪ್ರಕ್ರಿಯೆ ನಡೆಸಿದೆ.
Advertisement
ನಬಾರ್ಡ್ ಯೋಜನೆಯ ಸಹಾಯದಲ್ಲಿ ನಡೆಯುತ್ತಿರುವ ಸಿಂಧನೂರಿನ ಸ್ವಾಸ್ಥ ರೈತ ಉತ್ಪಾದಕರ ಕಂಪನಿ 1100 ಕ್ಕೂ ಹೆಚ್ಚು ರೈತರನ್ನ ಹೊಂದಿದೆ. ಭತ್ತಕ್ಕೆ ಉತ್ತಮ ಬೆಲೆ ಹಾಗೂ ಕೂಡಲೇ ಹಣ ಸಿಗುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಅಂತ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪನಿ ಆಡಳಿತ ಮಂಡಳಿ ಹೇಳಿದೆ.
Advertisement
ಖರೀದಿಯಾಗಿ ನಾಲ್ಕು ದಿನದಲ್ಲಿ ಹಣ ಸಿಗುತ್ತದೆ ತಿಂಗಳುಗಟ್ಟಲೆ ಕಾಯುವ ಅವಶ್ಯಕತೆಯಿಲ್ಲ. ಸೂಟ್ ತೆಗೆಯುವ ನೆಪದಲ್ಲಿ ಕೆ.ಜಿ.ಗಟ್ಟಲೇ ಭತ್ತ ತೆಗೆದುಕೊಳ್ಳುವುದಿಲ್ಲ. ಭತ್ತ ಉತ್ತಮ ಗುಣಮಟ್ಟದ್ದಾಗಿದ್ದರೆ ಸಾಕು ನಿಗದಿತ ಬೆಲೆ ಸಿಗುತ್ತದೆ. ಹೀಗಾಗಿ ಈ ಒಪ್ಪಂದ ರೈತರಿಗೆ ಅನುಕೂಲಕರವಾಗಿದೆ ಅಂತ ಸ್ವಾಸ್ಥ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಚಂದ್ರಶೇಖರ್ ಹುಡೆದ್ ಹೇಳಿದ್ದಾರೆ.
ಹಿಂದಿನಿಂದಲೂ ರೈಸ್ ಮಿಲ್ ಮಾಲೀಕರು, ವ್ಯಾಪಾರಿಗಳು ಸಹ ನೇರವಾಗಿ ರೈತರಲ್ಲಿಗೆ ಬಂದು ಖರೀದಿ ಮಾಡುತ್ತಿದ್ದರು. ಆದರೆ ಎಪಿಎಂಸಿ ಕಾಯಿದೆ ತಿದ್ದುಪಡಿ ಬಳಿಕ ಕಂಪನಿಗಳೇ ನೇರವಾಗಿ ಖರೀದಿಗೆ ಇಳಿಯುತ್ತಿವೆ. ಇದರಿಂದ ರೈಸ್ ಮಿಲ್ಗಳ ಮೇಲೂ ಪರಿಣಾಮ ಬೀರಲಿದೆ.