– ಡೆಡ್ಲಿ ಅಟ್ಯಾಕ್ ನಿಂದ ಜಸ್ಟ್ ಮಿಸ್
ಯಾದಗಿರಿ: ರಾಜಕೀಯ ವೈಷಮ್ಯ ಹಿನ್ನೆಲೆ ದುಷ್ಕರ್ಮಿಗಳು ಗ್ರಾಮ ಪಂಚಾಯತ್ ಮಾಜಿ ಸದಸ್ಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಸಮೀಪ ಮಂಗಳವಾರ ರಾತ್ರಿ ನಡೆದಿದೆ.
ಬಸವಂತಪುರ ಗ್ರಾಮಪಂಚಾಯತ್ ಮಾಜಿ ಸದಸ್ಯ ಗೋವಿಂದ ಹಲ್ಲೆಗೊಳಗಾದ ವ್ಯಕ್ತಿ. ಗಂಭೀರವಾಗಿ ಗಾಯಗೊಂಡ ಗೋವಿಂದ ಸದ್ಯ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ನಿನ್ನೆ ತಡ ರಾತ್ರಿ ಯಾದಗಿರಿಯಿಂದ ಬಸವಂತಪುರ ಕಡೆ ಬೈಕ್ ಮೇಲೆ ಗೋವಿಂದ ಹೊರಟಿದ್ದರು. ಈ ಮುದ್ನಾಳ ಗ್ರಾಮದ ಬೆಟ್ಟದ ಬಳಿ ಮೂವರು ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿದ್ದಾರೆ. ಗೋವಿಂದ ಅವರ ಹೊಟ್ಟೆ ಮತ್ತು ಕೈಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದೇ ವೇಳೆ ಬೇರೆ ವಾಹನ ರಸ್ತೆಯಲ್ಲಿ ಬಂದ ಕಾರಣ ಗಾಯಗೊಂಡ ಗೋವಿಂದ ಅವರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
Advertisement
Advertisement
ಗೋವಿಂದ ಅವರ ವಿರೋಧಿಗಳಾದ ಲಕ್ಷ್ಮಣ್, ದೇವಪ್ಪ ಎಂಬುವವರ ಜೊತೆ ನಿನ್ನೆ ಬೆಳಿಗ್ಗೆ ಗ್ರಾಮದ ಕಂಪೌಂಡ್ ನಿರ್ಮಾಣ ಮಾಡುವ ವಿಚಾರಕ್ಕೆ ಜೊತೆ ಜಗಳವಾಗಿತ್ತು. ಈ ವೇಳೆ ಗೋವಿಂದ ಅವರಿಗೆ ಜೀವಬೇದರಿಕೆ ಸಹ ಹಾಕಲಾಗಿತ್ತು ಎನ್ನಲಾಗಿದೆ. ಅಲ್ಲದೆ ಈ ಹಿಂದೆ ಗ್ರಾಮ ಪಂಚಾಯತ್ ಚುನಾವಣೆ ವಿಚಾರದಲ್ಲಿ ಗೋವಿಂದ ಹಾಗೂ ಲಕ್ಷ್ಮಣ್, ದೇವಪ್ಪನ ನಡುವೆ ಗಲಾಟೆ ನಡೆದಿತ್ತು.
ಗೋವಿಂದ ಅವರ ಅಣ್ಣನ ಮಗಳಾದ ಲಕ್ಷ್ಮೀ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದಳು. ಆಕೆ ಎದುರಾಳಿಯಾಗಿದ್ದ ಲಕ್ಷ್ಮಣ ಹೆಂಡತಿ ಶಾಂತಿ ಸೋತಿದ್ದಳು. ಗೋವಿಂದ ಅವರ ಕೊಲೆಗೆ ಬಸವಂತಪುರ ನಿವಾಸಿ ಗುರುಮಿಠಕಲ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ಎಂಬುವವರು ಕುಮ್ಮಕ್ಕು ನೀಡಿ, ಕೊಲೆಗೆ ಸುಪಾರಿ ನೀಡಿದ್ದಾರೆ ಅಂತ ಗೋವಿಂದ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.