ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಗೆ ಮೂರು ಸಾವಿರ ಮಠದ ಆಸ್ತಿ ಪರಭಾರೆ ಮಾಡಿರುವುದಕ್ಕೆ ಲಿಂಗಾಯತ ಸಮುದಾಯದ ನಾಯಕರು ಈಗ ಜಾಗೃತರಾಗುತ್ತಿದ್ದಾರೆ. ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಮೂರುಸಾವಿರ ಮಠದ ಆಸ್ತಿಯನ್ನು ಮರಳಿ ಶ್ರೀ ಮಠಕ್ಕೆ ಪಡೆಯಬೇಕೆಂಬ ಉದ್ದೇಶದಿಂದ ಲಿಂಗಾಯತ ಮುಖಂಡರು ಗೋಕುಲ ರಸ್ತೆಯಲ್ಲಿರುವ ಮಾಜಿ ಎಂಎಲ್ಸಿ ನಾಗರಾಜ ಛಬ್ಬಿ ಅವರ ಕಾರ್ಯಾಲಯದಲ್ಲಿ ವಿಶೇಷ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರುಸಾವಿರ ಮಠದ ಆಸ್ತಿ ಕೆಎಲ್ಇ ಸಂಸ್ಥೆಗೆ ಪರಭಾರೆ ಮಾಡುವುದರಿಂದ ಶ್ರೀಮಠಕ್ಕೆ ಆಗುವ ಒಳಿತಾದರೂ ಏನು ಎಂಬುದರ ಬಗ್ಗೆ ಮುಖಂಡರು ವಿಸ್ತೃತವಾಗಿ ಚರ್ಚಿಸಿದರು. ಶ್ರೀಮಠದ ಆಸ್ತಿ ಉಳಿಸಿಕೊಂಡು ಹೋಗುವುದು ಕೇವಲ ಮಠಾಧಿಪತಿಗಳಿಗೆ ಸೇರಿದ ವಿಷಯ ಮಾತ್ರವಲ್ಲ. ಇದಕ್ಕೆ ಎಲ್ಲ ಭಕ್ತರೂ ಸಹಕಾರ ಅತ್ಯವಶ್ಯ. ಶ್ರೀಮಠದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕೈಂಕರ್ಯಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದೆ. ಇದಕ್ಕೆ ಶ್ರೀಮಠದ ಆಸ್ತಿ ಸಂದಾಯವಾಗುವ ಹಣದಿಂದ ಈ ಎಲ್ಲ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದೂ ಅನೇಕರು ಅನಿಸಿಕೆ ವ್ಯಕ್ತಪಡಿಸಿದರು.
Advertisement
Advertisement
ಯಾವುದೇ ಒಂದು ಸಂಸ್ಥೆಗೆ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ದಾನದ ರೂಪದಲ್ಲಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಅನೇಕರು ಮುಂದಿಟ್ಟರೇ, ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಶ್ರೀಮಠದಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅವರುಗಳ ಬದುಕು ಕಟ್ಟಿಕೊಡುವ ಕೆಲಸ ಮುಂಬರುವ ದಿನಗಳಲ್ಲಿ ಶ್ರೀಮಠದಿಂದ ಮಾಡಬೇಕಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
Advertisement
ಸದ್ಯ ಕೆಎಲ್ಇ ಸಂಸ್ಥೆಗೆ ದಾನದ ರೂಪದಲ್ಲಿ ನೀಡಿರುವ ಕೋಟ್ಯಂತರ ರೂ. ಬೆಲೆಬಾಳುವ ಶ್ರೀಮಠದ ಆಸ್ತಿಯನ್ನು ಮರಳಿ ಮಠಕ್ಕೆ ಹಸ್ತಾಂತರಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಒತ್ತಾಯಿಸಿದರು.
Advertisement
ಸಭೆಯಲ್ಲಿ ಮುಖಂಡರಾದ ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಪ್ರಫುಚಂದ್ರ ರಾಯನಗೌಡ್ರ, ಎಂ.ಎಸ್. ಅಕ್ಕಿ, ಅನಿಲಕುಮಾರ ಪಾಟೀಲ್, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಬಳಿಗಾರ, ನಾಗರಾಜ ಗೌರಿ, ಪ್ರಕಾಶ ಬೆಂಡಿಗೇರಿ, ಜಗನಾಥ್ಗೌಡ ಪಾಟೀಲ್, ವಿಜಯನ್ಗೌಡ ಪಾಟೀಲ್, ಬಾಬು ಬಟ್ಟೂರ, ನ್ಯಾಯವಾದಿಗಳಾದ ನೀರಲಗಿ, ವಿ.ಕೆ. ಪಾಟೀಲ್, ರಜತ್ ಉಳ್ಳಾಗಡ್ಡಿಮಠ, ರವಿ ದಾಸನೂರ ಸೇರಿದಂತೆ ಇನ್ನೂ ಅನೇಕ ಮುಖಂಡರು ಪಾಲ್ಗೊಂಡಿದ್ದರು.