ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಮನೆಯಲ್ಲಿ ಕಳ್ಳತನ ಮಾಡಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ಬೇರೆಡೆ ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರು ಖದೀಮರನ್ನು ಬೇಗೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Advertisement
ಗುಂಡ್ಲುಪೇಟೆ ತಾಲೂಕಿನ ಮಾಡ್ರಳ್ಳಿ ಗ್ರಾಮದ ಪುನಿತ್ ಹಾಗೂ ಗುಂಡ್ಲುಪೇಟೆ ಪಟ್ಟಣದ ಕೆ.ಎಚ್.ಬಿ ಕಾಲೋನಿಯ ರೆಹಾನ್ ನಜೀರ್ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಬೈಕ್ ಹಾಗೂ ಸುಮಾರು 1,74,000 ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡು, ಖದೀಮರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement
ಜೂ.4ರಂದು ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ನಾಗಮ್ಮ ಅವರು ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ಖದೀಮರು ಮನೆಯಲ್ಲಿದ್ದ ಬೀರುವನ್ನು ಮುರಿದು ಅದರಲ್ಲಿದ್ದ ಸುಮಾರು 64 ಗ್ರಾಂ. ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು. ಊಟಕ್ಕೆಂದು ಮನೆಗೆ ಬಂದ ನಾಗಮ್ಮ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಭಯಗೊಂಡು ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement
Advertisement
ಪ್ರಕರಣ ದಾಖಲಿಸಿಕೊಂಡ ಬೇಗೂರು ಠಾಣೆಯ ಪೊಲೀಸರು ಖದೀಮರ ಸೆರೆಗೆ ಬಲೆ ಬೀಸಿದರು. ಪ್ರಕರಣ ಸಂಬಂಧ ಬೆಂಡಗಳ್ಳಿ ಗೇಟ್ ಬಳಿ ಪೊಲೀಸರು ಗಸ್ತಿನಲ್ಲಿದ್ದರು. ಅದೇ ವೇಳೆಗೆ ಬೈಕ್ ನಲ್ಲಿ ಬಂದ ಇಬ್ಬರು ಪೊಲೀಸರನ್ನು ನೋಡುತ್ತಿದ್ದಂತೆ ವಿಚಲಿತರಾದರು. ಇದನ್ನು ಗಮನಿಸಿದ ಪೊಲೀಸರು ಇಬ್ಬರು ಬೈಕ್ ಸವಾರರನ್ನು ಹಿಡಿದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಜೂ.4ರಂದು ಹೆಗ್ಗಡಹಳ್ಳಿ ಗ್ರಾಮದ ನಾಗಮ್ಮ ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದ ಚಿನ್ನಾಭರಣಗಳನ್ನು ಮಾರಾಟಮಾಡಲು ಗುಂಡ್ಲುಪೇಟೆಗೆ ಹೋಗುತ್ತಿದ್ದೆವು ಎಂದು ಒಪ್ಪಿಕೊಂಡಿದ್ದಾರೆ.