ರಾಯಚೂರು: ಕಠಿಣ ಲಾಕ್ಡೌನ್ ಸಮಯದಲ್ಲಿ ಗುಳೆ ಹೋದ ಜನ ಮಹಾನಗರಗಳಿಂದ ತಮ್ಮ ಊರುಗಳಿಗೆ ಬರಲು ಇನ್ನಿಲ್ಲದಂತೆ ಪರದಾಡಿದರು. ಆದ್ರೆ ಕೊರೊನಾ ಅಟ್ಟಹಾಸ ಇನ್ನೂ ಕಡಿಮೆಯೇ ಆಗಿಲ್ಲ ಆಗಲೇ ರಾಯಚೂರಿನಿಂದ ಕೂಲಿಕಾರರು ಮತ್ತೆ ಬೆಂಗಳೂರಿಗೆ ಗುಳೆ ಹೊರಟಿದ್ದಾರೆ. ಜಿಲ್ಲೆಯಿಂದ ಪ್ರತಿನಿಂದ 10ಕ್ಕೂ ಹೆಚ್ಚು ಬಸ್ ಗಳಲ್ಲಿ 300ಕ್ಕೂ ಹೆಚ್ಚು ಜನ ಗುಳೆ ಹೋಗುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕೆಲಸಗಳು ಆರಂಭವಾಗಿದ್ದು, ಪುನಃ ಕೆಲಸಕ್ಕೆ ಬರಲು ಗುತ್ತಿಗೆದಾರರು, ಮೇಸ್ತ್ರಿಗಳು ಕರೆಯುತ್ತಿದ್ದಾರೆ. ಸರ್ಕಾರದ ಉದ್ಯೋಗ ಖಾತ್ರಿಯಲ್ಲಿ ಭರವಸೆ ಕಳೆದುಕೊಂಡ ಜನ ಪುನಃ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ರಾಯಚೂರಿನ ದೇವದುರ್ಗ, ಲಿಂಗಸುಗೂರು ,ಮಾನ್ವಿ ರಾಯಚೂರು ತಾಲೂಕುಗಳಿಂದ ಸಾವಿರಾರು ಜನ ಬೆಂಗಳೂರಿಗೆ ವಾಪಸ್ ಹೋಗಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ ಪ್ರತಿದಿನ 600 ರೂಪಾಯಿಂದ 800 ರೂಪಾಯಿವರೆಗೆ ಕೂಲಿ ಸಿಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಉಳಿಯಲು ಜನ ಬಯಸುತ್ತಿಲ್ಲ. ಜಿಲ್ಲೆಯಲ್ಲಿ 400 ರೂಪಾಯಿವರೆಗೆ ಕೂಲಿ ಸಿಗುತ್ತದೆ. ಉದ್ಯೋಗ ಖಾತ್ರಿಯಲ್ಲಿ 250 ರೂ .ಸಿಗುತ್ತೆ ,ಅದೂ ಕೆಲಸ ಮಾಡಿ ಹದಿನೈದು ದಿನಗಳಾದ ಮೇಲೆ. ಹೀಗಾಗಿ ಜನ ಇಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಅಲ್ಲೂ ಸೋಂಕಿತರಿದ್ದಾರೆ. ಎಲ್ಲಿದ್ದರೂ ಒಂದೇ ಅಂತ ದುಡಿಯಲು ಗಂಟು ಮೂಟೆ ಸಹಿತ ಬೆಂಗಳೂರಿಗೆ ನಿತ್ಯ ನೂರಾರು ಜನ ಪ್ರಯಾಣ ಬೆಳೆಸಿದ್ದಾರೆ.