-ಕೃಷಿ ಚಟುವಟಿಕೆ ಅವಧಿ ಬದಲಿಸಿದ ಪ್ರವಾಹ
ಮಡಿಕೇರಿ: ಧಾರಕಾರವಾಗಿ ಸುರಿಯುತ್ತಿದ್ದ ಮಳೆ ಇದೀಗ ಕೊಂಚ ಕಡಿಮೆಯಾಗಿದೆ. ವರ್ಷಧಾರೆ ಕಡಿಮೆಯಾಗುತ್ತಿದ್ದಂತೆ ಇತ್ತ ರೈತರ ಕೃಷಿ ಚಟುವಟಿಕೆ ಕೆಲಸಗಳು ಮತ್ತೆ ಬಿರುಸುಗೊಂಡಿವೆ. ಯಾವ ಹೊಲಗದ್ದೆಗಳತ್ತ ನೋಡಿದರು ರೈತರು ನಾಟಿ ಮಾಡುತ್ತಿರುವ ದೃಶ್ಯಗಳು ಕಾಣುತ್ತಿವೆ. ಅರೆ ಇದೇನು ಮಳೆಗಾಲ ಮುಗಿಯುತ್ತಾ ಬಂದ್ರು ಈಗ ಬಿತ್ತನೆ ಕೆಲಸವೇ ಅಂತಾ ಆಶ್ಚರ್ಯಪಡಬೇಕಿಲ್ಲ. ಅದಕ್ಕೂ ಒಂದು ಕಾರಣವಿದೆ.
Advertisement
ಸಾಮಾನ್ಯವಾಗಿ ಜೂನ್ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ನಾಟಿ ಕಾರ್ಯಗಳನ್ನು ಮಾಡೋದು ವಾಡಿಕೆ. ಆದರೆ ಕೊಡಗು ಜಿಲ್ಲೆಯಲ್ಲಿ ಇದೀಗ ನಾಟಿ ಕಾರ್ಯ ಶುರುವಾಗಿದೆ ಅಂದರೆ ನೀವೆಲ್ರೂ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ತಪ್ಪಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಕೊಡಗಿನಲ್ಲೂ ಸಾಮಾನ್ಯವಾಗಿಯೇ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಬಿತ್ತನೆ, ಗದ್ದೆ ನಾಟಿಗಳನ್ನು ಮಾಡುತ್ತಿದ್ದರು. ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಎದುರಾಗುತ್ತಿರುವ ಪ್ರವಾಹದಿಂದ ಇದೀಗ ಜಿಲ್ಲೆಯಲ್ಲಿ ಬಿತ್ತನೆಯ ಸಮಯವೇ ಬದಲಾಗಿದೆ.
Advertisement
Advertisement
ಮೂರು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಬರುವ ರಣಮಳೆಯಿಂದ ಪ್ರವಾಹದ ಜೊತೆಗೆ ಗುಡ್ಡ ಕುಸಿಯುತಿತ್ತು. ಇದರಿಂದಾಗಿ ಬಿತ್ತನೆ ಮಾಡಿದ್ದ ಬೆಳೆಗಳೆಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗುತಿತ್ತು. ಇಲ್ಲವೆ ಭಾರೀ ಪ್ರಮಾಣದ ಮಣ್ಣು ಬೆಳೆಗಳ ಮೇಲೆ ತುಂಬಿಬಿಡುತಿತ್ತು. ಇದರಿಂದ ಬೆಳೆದ ಬೆಳೆಯೆಲ್ಲಾ ನಾಶವಾಗಿ ರೈತರು ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ಮಳೆ ಕಡಿಮೆಯಾದ ನಂತರ ಬಿತ್ತನೆ ಮಾಡೋದೆ ಒಳ್ಳೆಯದೆಂದು ನಿರ್ಧರಿಸಿರುವ ಸಾಕಷ್ಟು ರೈತರು ಇದೀಗ ಕೃಷಿ ಕೆಲಸದತ್ತ ಮುಖಮಾಡಿದ್ದಾರೆ.
Advertisement
ಮಳೆಗಾಲ ಮುಗಿಯಲು ಬಂದಿರುವುದರಿಂದ ಜನರನ್ನು ಬಳಸಿಕೊಂಡು ಬಿತ್ತನೆ ಮಾಡಿದರೆ ಇನ್ನಷ್ಟು ತಡವಾಗಬಹುದು. ಅವಧಿ ಮೀರಿ ಬಿತ್ತನೆ ಮಾಡಿದರೆ ಬೆಳೆಯ ಇಳುವರಿಯೂ ಕಡಿಮೆ ಆಗಬಹುದು ಎಂದು ಯಾಂತ್ರಿಕ ಕೃಷಿಯತ್ತಲೂ ರೈತರು ಮುಖ ಮಾಡಿದ್ದಾರೆ. ಹೊರ ಜಿಲ್ಲೆಯಿಂದಲೂ ಯಂತ್ರಗಳನ್ನು ತರಿಸಿ ಬಿತ್ತನೆ ಮಾಡುತ್ತಿದ್ದಾರೆ. ಅವಧಿ ಮೀರಿದರೂ ಯಂತ್ರಗಳ ಬಳಸಿ ವೈಜ್ಞಾನಿಕವಾಗಿ ಬಿತ್ತನೆ ಮಾಡುವುದರಿಂದ ಅಧಿಕ ಇಳುವರಿಯಾಗುತ್ತದೆ. ಖರ್ಚು ಕೂಡ ಕಡಿಮೆಯಾಗಿ ಲಾಭ ಗಳಿಸಲು ಅನುಕೂಲವಾಗುತ್ತದೆ. ಹೀಗಾಗಿ ರೈತರು ಯಾಂತ್ರಿಕ ಕೃಷಿಯತ್ತ ಗಮನಹರಿಸುತ್ತಿದ್ದಾರೆ ಎನ್ನುತ್ತಾರೆ.
ಒಟ್ಟಿನಲ್ಲಿ ಕೊಡಗಿನಲ್ಲಿ ಮೂರು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಸುರಿಯುವ ಭೀಕರ ಮಳೆ ಜಿಲ್ಲೆಯ ಕೃಷಿ ಚಟುವಟಿಕೆಯ ಅವಧಿಯನ್ನೇ ಬದಲಾಯಿಸಿದ್ದು, ಜನರು ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನಾಟಿ ಕಾರ್ಯ ಮಾಡುವಂತೆ ಆಗಿದೆ.